Andhra Pradesh gelatin stick explosion: ಆಂಧ್ರಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಅವಘಡ ಸಂಭವಿಸಿದೆ. ಈ ದುರಂತದದಲ್ಲಿ ಶಿಕ್ಷಕಿ ಸೇರಿದಂತೆ 7 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಬೆಟ್ಟ ಕಡಿಯುವ ಕಾಮಗಾರಿ ವೇಳೆ ಈ ದುರ್ಘಟನೆ ನಡೆದಿದೆ.
ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಿನಾಕೋಟದಲ್ಲಿ ರಸ್ತೆ ಕಾಮಗಾರಿ ವೇಳೆ ಡೀಸೆಲ್ ತುಂಬುತ್ತಿದ್ದಾಗ ಕಿಡಿ ಹತ್ತಿಕೊಂಡು ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ದಾರಿಯಲ್ಲಿ ಸಾಗುತ್ತಿದ್ದ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ. ಕಾಮಗಾರಿ ಸ್ಥಳಕ್ಕೆ ದೂರವಿದ್ದ ಕಾರಣ ಡ್ರಮ್‌ಗಳಲ್ಲೇ ಡೀಸೆಲ್ ತರಲಾಗುತ್ತಿತ್ತು. ಎಚ್ಚರಿಕೆ ವಹಿಸದೇ ಇಂಧನ ತುಂಬಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾ ಎಸ್‌ಪಿ ಅಮಿತ್ ಬರ್ದಾರ್ ತಿಳಿಸಿದ್ದಾರೆ.
ಮೃತರನ್ನು ವಿಶಾಖಪಟ್ಟಣದ ಶಿಕ್ಷಕಿ ಸುನಿತಾ, ದೇವರಾಪಳ್ಳಿಯ ಕೂಲಿ ಕಾರ್ಮಿಕ ಮಣಿ, ನಾರಾಯಣ ರಾವ್, ಪವನ್ ಕುಮಾರ್ ಹಾಗೂ ಟಿಪ್ಪರ್ ಲಾರಿ ಚಾಲಕ ಎಂದು ಗುರುತಿಸಲಾಗಿದೆ. ಈ ಭೀಕರ ಶಬ್ದಕ್ಕೆ ಬೆಚ್ಚಿಬಿದ್ದ ಸ್ಥಳೀಯರು ಭೂಕಂಪ ಎಂದು ಭಯಗೊಂಡು ಹೊರಬಂದಾಗ, ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ದೊಡ್ಡ ಆಘಾತಕ್ಕೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ತನಿಖೆ ಮುಂದುವರೆದಿದೆ. ಈ ದುರ್ಘಟನೆಗೆ ಗೃಹ ಸಚಿವೆ ಅನಿತಾ ಮತ್ತು ಇಲಾಖೆಯ ಸಚಿವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)