ಶಿವಮೊಗ್ಗ: ಸಾರ್ವಜನಿಕ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಜತೆಯಲ್ಲಿ ವರ್ತಕರಿಗೆ ಅನುಕೂಲ ಆಗುವ ರೀತಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಾಹನ ಸಂಚಾರ ನಿಯಂತ್ರಣದಿಂದ ವರ್ತಕರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಸೋಮವಾರ ಸಂಚಾರ ವ್ಯವಸ್ಥೆಯ ಗೊಂದಲ ನಿವಾರಣೆ ಕುರಿತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರ ಕುರಿತು ಹಿಂದೆ ಹೊರಡಿಸಿದ್ದ ಆದೇಶವನ್ನೇ ಮಾರ್ಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರ ವ್ಯಾಪ್ತಿಯ ವರ್ತಕರಿಗೆ ಯಾವುದೇ ಸಮಸ್ಯೆ ಆಗಲ್ಲ. ಏನೇ ಗೊಂದಲ ಹಾಗೂ ಸಮಸ್ಯೆಗಳು ಕಂಡುಬಂದಲ್ಲಿ ಇಲಾಖೆ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ವರ್ತಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಸೂಚಿಸಿದೆ. ಆದರೆ ಎಲ್ಲ ವರ್ತಕರಿಗೂ ಸಾಧ್ಯವಿಲ್ಲ ಎಂಬ ವಿಷಯವನ್ನೂ ಗಮನಕ್ಕೆ ತಂದಿದ್ದಾರೆ. ಸಿಸಿ ಕ್ಯಾಮರಾ ಅಳವಡಿಕೆಯಿಂದ ವರ್ತಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ಕ್ಯಾಮರಾ ಅಳವಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಒಂದು ತಿಂಗಳು ಕಾಲಾವಕಾಶ: ಸಿಸಿ ಕ್ಯಾಮರಾ ಅಳವಡಿಸಲು ವರ್ತಕರು ಒಂದು ತಿಂಗಳು ಹೆಚ್ಚುವರಿ ಸಮಯ ಕೋರಿದರು. ಇದಕ್ಕೆ ಸಕರಾತ್ಮಕವಾಗಿ ಎಸ್ಪಿ ಸ್ಪಂದಿಸಿದರು. ಹಾಗಾಗಿ ವರ್ತಕರು ಸಹ ಶೀಘ್ರ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಸಂಘ ವರ್ತಕರಿಗೆ ಮನವಿ ಮಾಡಿದೆ. ಇದೇ ವೇಳೆ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧ ಮಾಡುವುದರಿಂದ ಆಗುವ ಸಮಸ್ಯೆಗಳ ಪರಿಹರಿಸಿಕೊಡುವಂತೆ ಹಾಗೂ ಸಂಚಾರ ನಿಯಮಗಳ ಗೊಂದಲಗಳನ್ನು ಸರಿಪಡಿಸಲು ಕೋರಿ ಸಂಘದ ಪದಾಧಿಕಾರಿಗಳು ಎಸ್ಪಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕ ಎಂ.ರಾಜು, ಪ್ರದೀಪ್ ಯಲಿ, ನರೇಂದ್ರ ಹಾಜರಿದ್ದರು.