ಶಿವಮೊಗ್ಗ ಗಾಡಿಕೊಪ್ಪದ ಸರ್ಕಾರಿ ಶಾಲೆ ವೃತ್ತದಲ್ಲಿ ಸಂಚಾರ ಪೊಲೀಸರ ಕಟೌಟ್ ನಿಲ್ಲಿಸಲಾಗಿದೆ. ಮಿಥುನ್ ಕುಮಾರ್, ಅನಿಲ್ ಕುಮಾರ್ ಭೂಮರಡ್ಡಿ, ಬಿ.ಸುರೇಶ್, ಡಿ.ಕೆ.ಸಂತೋಷ್‌ಕುಮಾರ್, ನವೀನ್ ಮಠಪತಿ, ತಿರುಮಲೇಶ್ ಸೇರಿ ಸಂಚಾರ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 
ನ್ಯೂಸ್

ರಸ್ತೆ, ವೃತ್ತಗಳಲ್ಲಿ ರಾರಾಜಿಸಲಿವೆ ಸಂಚಾರ ಪೊಲೀಸರ ಕಟೌಟ್‌

ಶಿವಮೊಗ್ಗ: ರಸ್ತೆ, ವೃತ್ತಗಳಲ್ಲಿ ಸಿನಿಮಾ ನಟ, ನಟಿಯರು, ರಾಜಕಾರಣಿಗಳು ಮತ್ತಿತರ ಪ್ರಚಾರದ ಕಟೌಟ್‌ಗಳು ರಾರಾಜಿಸುವುದು ಸಾಮಾನ್ಯ. ಆದರೆ ಶಿವಮೊಗ್ಗದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ಪೊಲೀಸರ ಕಟೌಟ್‌ಗಳು ಇನ್ಮುಂದೆ ರಾರಾಜಿಸಲಿವೆ.

ಪಶ್ಚಿಮ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ನಿಯಮಗಳ ಪಾಲನೆ ಹಾಗೂ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಜತೆಗೆ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡ ವಿಧಿಸುವುದು ಸೇರಿ ನಾನಾ ಕ್ರಮಗಳ ಪಾಲನೆ ಮಾಡುತ್ತದೆ.

ಇದೀಗ ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ವಾಹನ ದಟ್ಟಣೆ ಹೆಚ್ಚಿರುವ ಅಪಘಾತ ವಲಯ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚಾರ ಪೊಲೀಸರ ಕಟೌಟ್ ಕಣ್ಗಾವಲು ಇರಲಿದೆ. ಈ ಮೂಲಕ ವಾಹನ ಚಾಲಕರ ಗಮನ ಸೆಳೆಯುವ ವಿನೂತನ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ.

ನಗರದ ಹೊರವಲಯ ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯ ಸರ್ಕಾರಿ ಶಾಲೆ ವೃತ್ತ, ಮಹೇಂದ್ರ ಶೋ ರೂಂ ಮುಂಭಾಗದ ಕ್ರಾಸ್, ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಕ್ರಾಸ್ ಹಾಗೂ ಸೂಳೇಬೈಲು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.

ನಿಧಾನವಾಗಿ ಚಲಿಸಿ ಘೋಷ ವಾಕ್ಯ ತೋರ್ಪಡಿಸುವ ಆಳೆತ್ತರದ ಕಟೌಟ್‌ಗಳು ದೂರದಿಂದ ಟ್ರಾಫಿಕ್ ಸಿಬ್ಬಂದಿಯಂತೆ ಗೋಚರಿಸಲಿವೆ. ಈ ಕಟೌಟ್‌ಗಳು ರಿಫ್ಲೆಕ್ಟ್ ಆಗುವುದರಿಂದ ಸಂಜೆ ಹಾಗೂ ರಾತ್ರಿಯ ವೇಳೆ ವಾಹನದ ಹೆಡ್ ಲೈಟ್ ಬೆಳಕಿಗೆ ಗೋಚರಿಸುತ್ತವೆ. ಟ್ರಾಫಿಕ್ ಪೊಲೀಸ್ ಕಟೌಟ್‌ಗಳು ಅಪಘಾತ ವಲಯ ಪ್ರದೇಶಗಳಲ್ಲಿ, ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ.

ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ಸಂಚಾರ ಪೊಲೀಸ್ ಕಟೌಟ್ ನಿಲುಗಡೆ ಮಾಡಿದ ಸ್ಥಳಗಳಿಗೆ ಭೇಟಿ ನೀಡಿ ಸಂಚಾರ ಪೊಲೀಸರ ವಿನೂತನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಬಿ.ಸುರೇಶ್, ಸಂಚಾರ ಇನ್‌ಸ್ಪೆಕ್ಟರ್ ಡಿ.ಕೆ. ಸಂತೋಷ್‌ಕುಮಾರ್, ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್, ಪೂರ್ವ ಠಾಣೆ ಪಿಎಸ್‌ಐ ನವೀನ್ ಮಠಪತಿ ಸೇರಿ ಸಂಚಾರ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.