ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಸಂಚರಿಸುವ ಸವಾರರಿಗೆ ಖಾಕಿ ಪಡೆಯ ಟ್ರಾಫಿಕ್ ದಂಡ ವಸೂಲಿ ಕಾರ್ಯ ನಡುಕ ಹುಟ್ಟಿದೆ. 
ನ್ಯೂಸ್

ಪೊಲೀಸರಿಂದ ಟ್ರಾಫಿಕ್ ದಂಡ

ಮಂಗಳೂರು: ಖಾಕಿ ಪಡೆಯ ಟ್ರಾಫಿಕ್ ದಂಡ ವಸೂಲಿ ಬಿರುಸಿನ ಕಾರ್ಯಾಚರಣೆಯಿಂದಾಗಿ ಸದ್ಯ ಮಂಗಳೂರಿನ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ಎದೆಯಲ್ಲಿ ನಡುಕ ಹುಟ್ಟಿದೆ.
ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಸಂಚರಿಸುವ ಸವಾರರಿಗೆ ಮಂಗಳೂರು ಸಂಚಾರಿ ಪೊಲೀಸರು ಈಗ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ (ಎಐ) ಹೈಟೆಕ್ ಕ್ಯಾಮೆರಾಗಳು ಹಾಗೂ ಇಂಟಲಿಜೆಂಟ್ ಟ್ರಾಫಿಕ್ ಮೆನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಿದ್ದರೂ ಸಹ, ನಮಗೂ ಕಾನೂನಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುವ ಸವಾರರ ವಿರುದ್ಧ ಪೊಲೀಸರು ಈಗ ರಸ್ತೆಗಿಳಿದು ಜಂಟಿ ಸಮರ ಸಾರಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದ ನಂತೂರು, ಕೆಪಿಟಿ, ಕಂಕನಾಡಿ, ಬೆಂದೂರ್‌ವೆಲ್, ಜ್ಯೋತಿ, ಮತ್ತು ಬಲ್ಮಠ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸರ ನಿರಂತರ ತಪಾಸಣೆ ತೀವ್ರಗೊಂಡಿದೆ.
*ತಂತ್ರಜ್ಞಾನದ ಕಣ್ಗಾವಲು
ಮಂಗಳೂರು ನಗರಕ್ಕೀಗ ಅತ್ಯಾಧುನಿಕ ಕ್ಯಾಮರಾ ಕಣ್ಣು ಹಾಗೂ ರಾಡಾರ್‌ಗಳ ಕಾವಲಿದೆ. ಸವಾರರು ಸಿಗ್ನಲ್ ಜಂಪ್ ಮಾಡಿದರೆ, ಹೆಲ್ಮೆಟ್ ಧರಿಸದಿದ್ದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ತ್ರಿಬಲ್ ರೈಡಿಂಗ್ ಮಾಡಿದರೆ ಅಥವಾ ಸೀಟ್ ಬೆಲ್ಟ್ ಧರಿಸದಿದ್ದರೆ ಕ್ಷಣಾರ್ಧದಲ್ಲಿ ರಾಡಾರ್‌ಗಳು ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡುತ್ತವೆ. ಅಷ್ಟೇ ಅಲ್ಲದೆ, ಡಿಜಿಟಲ್ ಸಾಕ್ಷ್ಯದ (ಫೋಟೋ ಸಹಿತ) ನೋಟಿಸ್ ನೇರವಾಗಿ ಸವಾರರ ಮೊಬೈಲ್‌ಗೆ ತಲುಪುತ್ತಿದೆ. ಇಷ್ಟೆಲ್ಲಾ ಹೈಟೆಕ್ ವ್ಯವಸ್ಥೆ ಜಾರಿಯಲ್ಲಿದ್ದರೂ ಮುಗ್ಧ ಸವಾರರ ಸೋಗಿನಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
*ಹಳೆ ಬಾಕಿ ವಸೂಲಾತಿಗೂ ಬಿಗಿಯಾದ ಪಾಶ
ಕೇವಲ ಹೊಸದಾಗಿ ನಿಯಮ ಉಲ್ಲಂಘಿಸುವವರಷ್ಟೇ ಅಲ್ಲ, ಈ ಹಿಂದೆ ಕ್ಯಾಮೆರಾಗಳಲ್ಲಿ ಸಿಕ್ಕಿಬಿದ್ದು ದಂಡ ಪಾವತಿಸದೆ ರಾಜಾರೋಷವಾಗಿ ತಿರುಗಾಡುತ್ತಿದ್ದವರಿಗೂ ಪೊಲೀಸರು ಚೆಕ್ ಪೋಸ್ಟ್‌ಗಳಲ್ಲಿ ಶಾಕ್ ನೀಡುತ್ತಿದ್ದಾರೆ. ಕಾರ್ಯಾಚರಣೆ ವೇಳೆ ವಾಹನದ ಸಂಖ್ಯೆಯನ್ನು ಪರಿಶೀಲಿಸಿದ ತಕ್ಷಣ ಹಳೆಯ ದಂಡದ ಪಟ್ಟಿ ತೆರೆದುಕೊಳ್ಳುತ್ತಿದ್ದು, ಸ್ಥಳದಲ್ಲೇ ಹಳೆ ಬಾಕಿಯನ್ನು ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತಿದೆ. ಆನ್ಲೈನ್ ನೋಟಿಸ್‌ಗಳಿಗೆ ಕ್ಯಾರೆ ಎನ್ನದ ಸವಾರರನ್ನು ಪತ್ತೆಹಚ್ಚಲು ನಾವು ಆನ್-ಫೀಲ್ಡ್ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದೇವೆ. ನಿಯಮ ಉಲ್ಲಂಘನೆ ಮುಂದುವರಿದರೆ ವಾಹನ ಜಪ್ತಿ ಹಾಗೂ ಚಾಲನಾ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆಯೂ ಚುರುಕುಗೊಳ್ಳಲಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
-------------------
ವೇಗದ ಮಿತಿಗೂ ರಾಡಾರ್ ಬ್ರೇಕ್
ನಗರದ ರಸ್ತೆಗಳಲ್ಲಿ ಮಿತಿ ಮೀರಿದ ವೇಗದಲ್ಲಿ ಚಲಿಸುವ ವಾಹನಗಳ ವೇಗವನ್ನು ನಿಖರವಾಗಿ ಅಳೆಯಲು ರಾಡಾರ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಕರಾವಳಿಯ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಐಟಿಎಂಎಸ್ ತಂತ್ರಜ್ಞಾನವು ಮಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸನ್ನದ್ಧವಾಗಿದ್ದರೂ, ಸವಾರರಲ್ಲಿ ಸ್ವಯಂ ಶಿಸ್ತು ಮೂಡದ ಹೊರತು ಅಪಘಾತ ಮುಕ್ತ ನಗರ ನಿರ್ಮಾಣ ಸಾಧ್ಯವಿಲ್ಲ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.
------------------
ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದರೂ ಬಹುತೇಕರು ದಂಡ ಕಟ್ಟುತ್ತಿಲ್ಲ. ಸದ್ಯ ಮಂಗಳೂರಿನ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾಋಇ ನಿಯಮ ಉಲ್ಲಘನೆ, ಅಪಘಾತ, ಹಾನಿ ಪ್ರಮಾಣವನ್ನು ಕಡಿಮೆ ಮಾಡುವುದೇ ಪ್ರಮುಖ ಉದ್ದೇಶವಾಗಿದ್ದು, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದರೆ ದಂಡ ವಿದಿಸಲಾಗುತ್ತಿದೆ.
ರವಿಶಂಕರ್ ಕೆ., ಡಿಸಿಪಿ
ಅಪರಾಧ ಮತ್ತು ಸಂಚಾರ ವಿಭಾಗ
-----------------