ನ್ಯೂಸ್

ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: CPR ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌!

ಹೈದರಾಬಾದ್​​: ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಟ್ರಾಫಿಕ್‌ ಪೊಲೀಸ್‌ ಒಬ್ಬರು ವ್ಯಕ್ತಿಯ ಜೀವವನ್ನು ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆಯಲಿದೆ.

ಇಂದು ಬೆಳಗ್ಗೆ ಎಲ್‌ಬಿ ನಗರದ ನಿವಾಸಿಯಾಗಿರುವ ಬಾಲರಾಜು, ರಾಜೇಂದ್ರ ನಗರ ಸರ್ಕಲ್‌ ಪ್ರದೇಶದಲ್ಲಿ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜಶೇಖರ್‌, ತಕ್ಷಣವೇ ಅವರು ಕುಸಿದು ಬಿದ್ದ ಪ್ರದೇಶಕ್ಕೆ ಓಡಿ ಬಂದಿದ್ದರು. ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡು, ಹೃದಯಬಡಿತ ಇಲ್ಲದೇ ಇರುವುದನ್ನು ಗಮನಿಸಿ ತಕ್ಷಣವೇ ಸಿಪಿಆರ್‌ ಮಾಡಲು ಆರಂಭಿಸಿದರು. ಎದೆಯ ಭಾಗದಲ್ಲಿ ಜೋರಾಗಿ ಒತ್ತುವ ಮೂಲಕ ಉಸಿರು ತುಂಬುವ ಪ್ರಯತ್ನ ಮಾಡಿದರು. ಕೆಲ ನಿಮಿಷದಲ್ಲಿಯೇ ಹೃದಯಾಘಾತವಾಗಿ ಬಿದ್ದಿದ್ದ ವ್ಯಕ್ತಿ, ಉಸಿರಾಡಲು ಆರಂಭಿಸಿದ್ದರು.

ಆ ಬಳಿಕ ತಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ರಾಜಶೇಖರ್‌, ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣವೇ ದಾಖಲು ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಪ್ರಸ್ತುತ ಬಾಲರಾಜು ಅವರ ಆರೋಗ್ಯ ಕ್ಷೇಮವಾಗಿದ್ದಾರೆ. ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌ ರಾಜಶೇಖರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸಮಯಪ್ರಜ್ಞೆಯಿಂದ ಯುವಕನ ಜೀವವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕೂಡ ರಾಜಶೇಖರ್ ಅವರನ್ನು ಹೊಗಳಿದ್ದಾರೆ. ಇನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ರಾಜಶೇಖರ್‌ ಅವರ ಸಮಯಪ್ರಜ್ಞೆಯನ್ನು ಮನಸಾರೆ ಹೊಗಳಿದ್ದಾರೆ. ಕಾನ್‌ಸ್ಟೆಬಲ್ ರಾಜಶೇಖರ್ ಕೂಡ ತಮ್ಮ ಕಾರ್ಯದಿಂದ ವ್ಯಕ್ತಿಯ ಜೀವ ಉಳಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.