ಉತ್ತರ ಪ್ರದೇಶ: ಹೆಲ್ಮೆಟ್ ರಹಿತ, ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಇತರೆ ಸಂಚಾರಿ ನಿಯಮಗಳನ್ನು (Traffic Challan) ಉಲ್ಲಂಘಿಸುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಆಗಾಗ್ಗೆ ಬಿಸಿ ಮುಟ್ಟಿಸುವುದು ನಮಗೆಲ್ಲ ಗೊತ್ತೇ ಇದೆ. ಭಾರೀ ದಂಡ ಪಾವತಿಸುವ ಮೂಲಕ ಕೆಲವರು ಎಚ್ಚೆತ್ತುಕೊಂಡರೆ, ಇನ್ನೂ ಕೆಲವರು ಎಷ್ಟೇ ಪೆನಾಲ್ಟಿ ಬಿದ್ದರೂ ಪೊಲೀಸರ ಕಣ್ತಪ್ಪಿಸಿ ಸಂಚರಿಸುತ್ತಾರೆ. ಆದರೆ, ಒಮ್ಮೆ ಅಷ್ಟೂ ದಂಡದ ಹೊರೆ ಬಿದ್ದರೆ, ಜೇಬು ಕಾಲಿಯಾಗೋದು ಖಚಿತ. ಇಲ್ಲೊಂದು ಟ್ರಾಫಿಕ್ ಚಲನ್ ಸವಾರನನ್ನು ಮಾತ್ರವಲ್ಲದೇ ನೆಟ್ಟಿಗರನ್ನು ಸಹ ಅಚ್ಚರಿಗೆ ದೂಡಿದೆ.
1 ಲಕ್ಷ ರೂ. ಮೌಲ್ಯದ ಸ್ಕೂಟರ್ ಮೇಲೆ ಬರೋಬ್ಬರಿ 21 ಲಕ್ಷ ರೂ. ದಂಡ ಬಿದ್ದಿದೆ. ಉತ್ತರ ಪ್ರದೇಶದ ಮುಜಫರ್ ನಗರದ ನಿವಾಸಿ, ಹೆಲ್ಮೆಟ್ ಧರಿಸದ ಕಾರಣ, ಹಲವು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ. ಆದರೆ, ಇದು ಭಾರೀ ಆಶ್ಚರ್ಯಕ್ಕೆ ಕಾರಣವಾಗಿದ್ದು, ಸ್ಕೂಟರ್ ಮೌಲ್ಯಕ್ಕಿಂತ ಒಂದು ದುಬಾರಿ ಕಾರಿನ ಬೆಲೆಗೆ ಸಮವಾಗಿದೆ. ಚಲನ್‌ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸವಾರನಿಗೆ 20,74,000 ರೂ. ದಂಡ ವಿಧಿಸಲಾಯಿತು.
ಚಲನ್ ನೋಡಿ ಕಂಗಾಲಾದ ಸ್ಕೂಟರ್ ಸವಾರ, ಬೇಸರದಿಂದ ದಂಡದ ರಶೀತಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ತಕ್ಷಣವೇ ವೈರಲ್ ಆದ ಫೋಟೋ ನೋಡಿದ ನೆಟ್ಟಿಗರು, ಯುಪಿ ಸಂಚಾರಿ ಪೊಲೀಸರ ವಿರುದ್ಧ ಕಿಡಿಕಾರಿದರು. ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಲನ್ ಫೋಟೋ ಡಿಲೀಟ್ ಆಗಿದ್ದು, ಸಂಚಾರಿ ಪೊಲೀಸರು ದಂಡದ ಮೊತ್ತವನ್ನು 4,000 ರೂ.ಗೆ ಇಳಿಸುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿದ್ದಾರೆ,(ಏಜೆನ್ಸೀಸ್).