ನ್ಯೂಸ್

ಉಡುಪಿ ಮಧ್ವ ಸರೋವರದಲ್ಲಿ ಬೈಹುಲ್ಲು ಛಾವಣಿ

ಉಡುಪಿ: ಆಧುನಿಕತೆಯ ಮೋಹದಲ್ಲಿ ಜನರು ಕಾಂಕ್ರೀಟ್ ಹಾಗೂ ತಗಡಿನ ಛಾವಣಿಗೆ ಮೊರೆ ಹೋಗುತ್ತಿದ್ದರೆ ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಮೆಟ್ಟಿಲುಗಳ ಮುಂದೆ ಬೈಹುಲ್ಲು ಛಾವಣಿ ನಿರ್ಮಿಸಿರುವುದು ಗಮನ ಸೆಳೆಯುತ್ತಿದೆ.

ದಶಕಗಳ ಹಿಂದೆ ಕರಾವಳಿ ಭಾಗದ ಮನೆಗಳಲ್ಲಿ ಮುಳಿಹುಲ್ಲಿನ ಛಾವಣಿ ಮನೆಗಳು ಸಾಮಾನ್ಯವಾಗಿತ್ತು. 20 ವರ್ಷ ಹಿಂದೆ ಮಧ್ವ ಸರೋವರ ಮೆಟ್ಟಿಲಿಗೆ ಬೈಹುಲ್ಲು ಛಾವಣಿ ನಿರ್ಮಿಸಲಾಗುತ್ತಿತ್ತು. ನೇಪಥ್ಯಕ್ಕೆ ಸರಿದಿರುವ ಹಿರಿಯರ ನೈಪುಣ್ಯತೆಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಯತಿಗಳು ಹಾಗೂ ವೈದಿಕರು ಸ್ನಾನ ಮಾಡುವ ಸ್ನಾನಘಟ್ಟದ ಮೇಲೆ ಬೈಹುಲ್ಲಿನ ಮಾಡು ರಚಿಸಲಾಗಿದೆ.

5*35 ಅಡಿ ವಿಸ್ತೀರ್ಣದ ಛಾವಣಿಯನ್ನು ಕುಂಜಾರುಗಿರಿಯ ಹಿರಿಯ ಕೃಷಿಕ ನಣ್ಣು ಮೂಲ್ಯ ನೇತೃತ್ವದ 6 ಜನ ಕುಶಲಕರ್ಮಿಗಳ ತಂಡ ನಿರ್ಮಿಸಿದೆ. ಕೈಯಲ್ಲೇ ಕಟಾವು ಮಾಡಿದ ಸುಮಾರು 400 ಸೂಡಿ ಬೈಹುಲ್ಲು ಬಳಸಲಾಗಿದೆ. ಬಿದಿರಿನ ಪಕ್ಕಾಸುಗಳ ಮೇಲೆ ತೆಂಗಿನ ಗರಿಗಳನ್ನು ಹಾಕಿ, ಮೇಲೆ ಬೈಹುಲ್ಲು ಹರಡಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಸೋರಿಕೆಯಾಗುವುದಿಲ್ಲ. ಇಂಥ ಛಾವಣಿಗಳು ಧಾರ್ಮಿಕ ಸಂಪ್ರದಾಯ ಪಾಲನೆಗೂ ಅನುಕೂಲವಾಗಿವೆ.

ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುವ ಸಂದರ್ಭ ಯತಿಗಳು ಹಾಗೂ ಪರಿವಾರದವರಿಗೆ ಸ್ನಾನ ಮಾಡಲು ತೊಂದರೆಯಾಗುತ್ತಿತ್ತು. ಜಾನಪದೀಯ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಗಳು ಬೈಹುಲ್ಲಿನ ಛಾವಣಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.- ಗೋವಿಂದರಾಜ್, ವ್ಯವಸ್ಥಾಪಕರು, ಕೃಷ್ಣ ಮಠ ಉಡುಪಿ