ನ್ಯೂಸ್

ಚರಂಡಿಗೆ ಟ್ರ್ಯಾಕ್ಟರ್ ಉರುಳಿ 9 ಮಂದಿ ದುರ್ಮರಣ!; ಪರಿಹಾರ ಘೋಷಿಸಿದ ಸಿಎಂ

ಉತ್ತರಪ್ರದೇಶ: ಚರಂಡಿಗೆ ಟ್ರ್ಯಾಕ್ಟರ್ ಟ್ರಾಲಿಯೊಂದು ಚರಂಡಿಗೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಅಪಫಾತದಲ್ಲಿ ಮೃತಪಟ್ಟ ಘಟನೆ ಉತ್ತರಪ್ರದೇಶ ಹರಾನ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ.

ಸುಮಾರು 50 ಭಕ್ತರನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ರಾಂಡೌಲ್ ಗ್ರಾಮಕ್ಕೆ ತೆರಳುತ್ತಿತ್ತು. ಈ ಮಧ್ಯೆ ತಾಜಪುರ ಪ್ರದೇಶದ ಸಮೀಪ ಬುಧವಾರ ಸಂಜೆ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಮನ್ಯು ಮಾಂಗ್ಲಿಕ್ ಸ್ಥಳೀಯ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಬುಧವಾರ ಅಪಫಾತ ನಡೆದ ಸ್ಥಳದಿಂದ ಪೊಲೀಸರು ನಾಲ್ಕು ಶವಗಳನ್ನು ಹೊರತೆಗೆದಿದ್ದು, ಸುಲೋಚನಾ (58), ಮಂಗ್ಲೇಶ್ (50), ಅದಿತಿ (5) ಮತ್ತು ಅರ್ಜುನ್ (12) ಎಂದು ಗುರುತಿಸಲಾಗಿದೆ. ಗುರುವಾರ ಐದು ಶವಗಳು ಪತ್ತೆಯಾಗಿದೆ. ಆದ್ರೆ, ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಸಹರಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ದಿನೇಶ್ ಚಂದ್ ಮತ್ತು ಎಸ್‌.ಎಸ್‌.ಪಿ. ಡಾ.ವಿಪಿನ್ ತಾಡಾ ಭೇಟಿ ನೀಡಿದ್ದರು. ಈ ಮಾರ್ಗದಲ್ಲಿ ತೆರಳದಂತೆ ಗ್ರಾಮಸ್ಥರು ಆತನಿಗೆ ಎಚ್ಚರಿಕೆ ನೀಡಿದರೂ ಸಹ ಚಾಲಕ ಇದನ್ನು ಧಿಕ್ಕರಿಸಿ ಹೋಗಿದ್ದಾರೆ ಎಂದು ವಿಪಿನ್ ಹೇಳಿದ್ದಾರೆ.

ಘಟನೆಯ ಬೆನ್ನಲ್ಲೇ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಸಹರಾನ್‌ಪುರ ಆಡಳಿತಕ್ಕೆ ತಿಳಿಸಿದ್ದಾರೆ,(ಏಜೆನ್ಸೀಸ್).