ನ್ಯೂಸ್

ತಾಪಂ, ಜಿಪಂ ಚುನಾವಣೆ ಸಿದ್ಧತೆಗೆ ಮುಂದಾದ ಜೆಡಿಎಸ್

Bengaluru - Political - Shivananda Tagadur

ಬೆಂಗಳೂರು:
ಮುಂಬರಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧತೆಗಳನ್ನು ನಡೆಸಲು ಜೆಡಿಎಸ್ ಮುಂದಾಗಿದೆ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲಿಯೇ ವಿಧಾನ ಪರಿಷತ್ ಚುನಾವಣೆ ಎದುರಾಗಿದೆ. ಈ ಚುನಾವಣೆ ಮುಗಿದ ಬಳಿಕ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಇರಾದೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ದಳಪತಿಗಳು ಕೂಡ ಅಲರ್ಟ್ ಆಗಿದ್ದಾರೆ.
ಪ್ರಜ್ವಲ್ ಪ್ರಕರಣದಿಂದ ಪಕ್ಷಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಪಕ್ಷದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿದ್ದ ಹೋಗಿರುವ ಪಕ್ಷದ ಇಮೇಜ್ ಹೆಚ್ಚಿಸಲು ಮೊದಲು ಕಾರ್ಯಕರ್ತರ ಪಡೆಯನ್ನ ಸಜ್ಜುಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೂ ಸೂಚನೆಯನ್ನು ರವಾನಿಸಿದ್ದಾರೆ.
ಕಳೆದ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಜೆಡಿಎಸ್ ಇತ್ತು. ವಿಶೇಷವಾಗಿ ಹಳೆಮೈಸೂರು ಭಾಗದಲ್ಲಿ ಹಾಸನ, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಹಲವು ತಾಪಂಗಳಲ್ಲಿ ಅಧಿಕಾರವನ್ನು ಹಿಡಿದಿತ್ತು. ಕೆಲ ಜಿಪಂಗಳು ಜೆಡಿಎಸ್ ತೆಕ್ಕೆಗೆ ಒಲಿದಿದ್ದವು.
ಈ ಬಾರಿ ಕನಿಷ್ಠ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಶತಾಯ ಗತಾಯ ಹೋರಾಟ ಮಾಡಲೇಬೇಕು ಎಂದು ನಿರ್ಧರಿಸಿರುವ ದಳಪತಿಗಳು ಚುನಾವಣೆಗೆ ಕಾರ್ಯಕರ್ತರ ಪಡೆಗೆ ಸಜ್ಜುಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆಯನ್ನು ಪ್ರಾರಂಭಿಸಿದ್ದಾರೆ.