ನ್ಯೂಸ್

ಪಂಚಾಯಿತಿ ಚುನಾವಣೆ ಬಹಿಷ್ಕಾರ ಎಚ್ಚರಿಕೆ: ಬೇವೂರು ತಾಪಂ, ಜಿಪಂ ಕ್ಷೇತ್ರ ಬದಲಾವಣೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

Ramanagara

 ಚನ್ನಪಟ್ಟಣ : ಜಿಪಂ, ತಾಪಂಗಳ ಮರುವಿಂಗಡನೆಯಲ್ಲಿ ಬೇವೂರು ತಾಪಂ ಹಾಗೂ ಜಿಪಂ ಕ್ಷೇತ್ರಗಳನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ತಾಲೂಕಿನ ಹಲವು ಮುಖಂಡರು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಬೇವೂರು ತಾಪಂ ಮತ್ತು ಜಿಪಂ ಕ್ಷೇತ್ರವನ್ನು ಬದಲಾಯಿಸಿ ನೂತನವಾಗಿ ಮೈಲನಾಯ್ಕನಹಳ್ಳಿ ಜಿಪಂ, ಮಾಕಳಿಯನ್ನು ತಾಪಂ ಕ್ಷೇತ್ರವೆಂದು ಚುನಾವಣೆ ಆಯೋಗ ಘೋಷಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಬೇವೂರು ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಬೇವೂರು ಜಿಪಂ ಕ್ಷೇತ್ರವನ್ನು ಕೈಬಿಟ್ಟಿರುವುದು ಸರಿಯಲ್ಲ. ಇದು ಪ್ರಮುಖ ಕೇಂದ್ರವಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಭೌಗೋಳಿಕವಾಗಿಯೂ ಕೇಂದ್ರಸ್ಥಾನವಾಗಿದೆ. ಗ್ರಾಮದಲ್ಲಿ ಬ್ಯಾಂಕ್, ಅಂಚೆ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಬೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಪಶುಪಾಲನಾ ಇಲಾಖೆ, ಪ್ರೌಢಶಾಲೆ ಮತ್ತು ಕಾಲೇಜುಗಳು ಸೇರಿದಂತೆ ಹಲವು ಕಚೇರಿಗಳಿವೆ. ಇದರೊಂದಿಗೆ ತಾಲೂಕಿನ ಗಡಿಭಾಗದ ಪ್ರಮುಖ ಕೇಂದ್ರವಾಗಿರುವ ಬೇವೂರು ಜಿಪಂ ಹಾಗೂ ತಾಪಂ ಕ್ಷೇತ್ರವನ್ನು ಕೈಬಿಟ್ಟಿರುವುದು ಸರಿಯಾದ ತೀರ್ಮಾನವಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಟ್ಟರು.

ಈ ಬದಲಾವಣೆಯಿಂದ ಗಡಿಗ್ರಾಮಗಳ ಅಭಿವೃದ್ಧಿ ಕುಂಠಿತವಾಗಬಹುದು. ಈ ಎರಡು ಕ್ಷೇತ್ರವನ್ನು ಈ ಹಿಂದಿನಂತೆಯೇ ಉಳಿಸಬೇಕು. ಇಲ್ಲವಾದರೆ ಮುಂಬರು ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಈ ಭಾಗದ ಜನತೆ ಬಹಿಷ್ಕರಿಸಲಿದ್ದಾರೆ ಎಂದರು.

ಕೇವಲ ಬೇವೂರು ಮಾತ್ರವಲ್ಲದೇ ನಮ್ಮ ತಾಲ್ಲೂಕಿನ ಜಿಪಂ ಹಾಗೂ ತಾಪಂಗಳ ಪುನರ್ ವಿಂಗಡನೆ ಮಾಡುವಾಗ ಸಾಕಷ್ಟು ವ್ಯತ್ಯಾಸವಾಗಿದೆ. ನಗರದಿಂದ ಒಂದು ಕಿ.ಮೀ ದೂರದಲ್ಲಿರುವ ಲಾಳಾಘಟ್ಟ ಗ್ರಾಮವನ್ನು ನೂತನ ಜಿಪಂ ಕ್ಷೇತ್ರವನ್ನಾಗಿ ಘೋಷಣೆ ಮಾಡಲಾಗಿದೆ.

ಹೊಸ ಜಿಪಂನ್ನು ದೇವರಹೊಸಳ್ಳಿ ಅಥವಾ ಕೆಂಗಲ್ ಕ್ಷೇತ್ರವೆಂದು ಘೋಷಣೆ ಮಾಡಬಹುದಿತ್ತು. ಚುನಾವಣಾ ಆಯೋಗ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕೊಟ್ಟಿರುವ ಅನುಬಂಧವನ್ನು ತಿರಸ್ಕರಿಸಿ ತಮಗೆ ಇಷ್ಟ ಬಂದಂತೆ ಅನುಬಂಧ ಹೊರಡಿಸಿರುವುದು ಖಂಡನೀಯ. ಇದನ್ನು ಯಥಾಸ್ಥಿತಿ ಕಾಪಾಡಬೇಕೆಂದು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದರು.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ. ಜಯರಾಂ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ಗ್ರಾ.ಪಂ. ಮಾಜಿ ಸದಸ್ಯ ಮಧುಸೂಧನ್, ಮುಖಂಡರುಗಳಾದ ವೈ.ಕೆ. ಆರ್. ರಾಮಲಿಂಗಯ್ಯ, ವಿಜಿಕುಮಾರ್ ಉಪಸ್ಥಿತರಿದ್ದರು.