- ಯಶ್ ಪಾತ್ರದ ಟೀಸರ್ ಬೆನ್ನಲ್ಲೇ ಮಹಿಳಾ ಕಲಾವಿದರ ಪೋಸ್ಟರ್ ರಿಲೀಸ್
- ಕುತೂಹಲ ಬೆನ್ನಲ್ಲೇ ಮಹಿಳಾ ಪಾತ್ರಗಳನ್ನು ಟೀಸರ್ ರಿಲೀಸ್ ಮಾಡಿದ ಚಿತ್ರತಂಡ
- ಆಗಸ್ಟ್ 26ಕ್ಕೆ ಸಿನಿಮಾ ತೆರೆಗೆ
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಚಿತ್ರದ ಯಶ್ ಪಾತ್ರ ಪರಿಚಯಿಸುವ ಟೀಸರ್, ಆ್ಯಕ್ಷನ್ ಝಲಕ್‌ಗಳು ರಿಲೀಸ್ ಆಗಿತ್ತು. ಅದರ ಬೆನ್ನಲ್ಲೇ ಕಿಯಾರಾ ಆಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ನಯನತಾರಾ, ರುಕ್ಮಿಣಿ ವಸಂತ್ ಪಾತ್ರ ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆದರೆ, ಪಾತ್ರದ ಟೀಸರ್ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ, ಈ ಐವರು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತುಹೂಲ ಪ್ರೇಕ್ಷಕರಲ್ಲಿತ್ತು. ಇದೀಗ ಚಿತ್ರತಂಡವು ‘ಲೇಡೀಸ್ ಆ್ಯಂಡ್ ಲೇಡೀಸ್’ ಎಂಬ ಹೊಸ ಟೀಸರ್ ಮೂಲಕ ಈ ಐವರ ಪಾತ್ರದ ಸಣ್ಣ ಝಲಕ್ ಪರಿಚಯಿಸಿದೆ. ಕತ್ತಲೆ ಜಗತ್ತಿನಲ್ಲಿ ಮಹಿಳೆಯರ ಧೈರ್ಯ, ಸಾಹಸ ತೋರಿಸುವ ಪ್ರಯತ್ನ ಇದಾಗಿದೆ. 1 ನಿಮಿಷ 40 ಸೆಕೆಂಡ್‌ನ ಈ ಟೀಸರ್ ಮಹಿಳಾ ಪಾತ್ರಗಳ ಮೇಲೆ ಕೇಂದ್ರೀಕೃತವಾಗಿದ್ದು, ಯಶ್ ರಾಯ ಮತ್ತು ಟಿಕೆಟ್ ಪಾತ್ರಗಳನ್ನೂ ವೈಭವೀಕರಿಸಿದೆ. ಮೊದಲಿಗೆ ಸಣ್ಣ ಮಕ್ಕಳಿಗೆ ಟೀಸರ್ ತೋರಿಸಬೇಡಿ ಎಂಬ ಎಚ್ಚರಿಕೆ ಸಹ ನೀಡಲಾಗಿದೆ. ಹಿನ್ನೆಲೆ ಧ್ವನಿ ಮತ್ತು ಒನ್‌ಲೈನರ್‌ಗಳು ಗಮನ ಸೆಳೆಯುವಂತಿವೆ. ಬಳಿಕ ಒಂದೊಂದೇ ಪಾತ್ರವನ್ನು ತೋರಿಸಲಾಗಿದೆ. ಆ್ಯಕ್ಷನ್ ಜತೆಗೆ ಅಲ್ಲಲ್ಲಿ ಬೋಲ್ಡ್ ದೃಶ್ಯಗಳೂ ಇಣುಕು ಹಾಕಿವೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಆಗಸ್ಟ್ 26ಕ್ಕೆ ಕನ್ನಡ, ಇಂಗ್ಲೀಷ್ ಸೇರಿ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
‘ಲೇಡೀಸ್ ಆ್ಯಂಡ್ ಲೇಡೀಸ್’ ಟೀಸರ್‌ನಲ್ಲಿ ನಟಿಯರೇ ಪ್ರಮುಖ ಆಕರ್ಷಣೆ. ಜತೆಗೆ ಒಬ್ಬೊಬ್ಬ ನಟಿಯೂ ಒಂದೊಂದು ಅಂಶವನ್ನು ಪ್ರತಿನಿಧಿಸುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಗಂಗಾ ಪಾತ್ರಧಾರಿ ನಯನತಾರಾ ಧೈರ್ಯ, ಸಾಹಸ ಮತ್ತು ಕಿಯಾರಾ ಆಡ್ವಾಣಿ (ನಾಡಿಯಾ) ಸೌಂದರ್ಯ, ತಾರಾ ಸುತಾರಿಯಾ (ರೆಬೆಕಾ) ಉತ್ಸಾಹ, ರುಕ್ಮಿಣಿ ವಸಂತ್ (ಮೆಲಿಸಾ) ಉಗ್ರರೂಪ ಮತ್ತು ತಾರಾ ಸುತಾರಿಯಾ (ಎಲಿಜಬೆತ್) ತಂತ್ರಗಾರಿಕೆಯ ರೂಪವಾಗಿ ‘ಟಾಕ್ಸಿಕ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.