ನ್ಯೂಸ್

ಗ್ರಾಮಪಂಚಾಯತ್​​ಗಳಿಗೆ ಟವರ್ ಪವರ್: ನಿಯಂತ್ರಣದ ಜತೆಗೆ ತೆರಿಗೆ ಬಲ, 100 ಕೋಟಿ ರೂಪಾಯಿ ನಿರೀಕ್ಷೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಹಳ್ಳಿಗಾಡುಗಳಲ್ಲಿ ನಿಯಮ ಉಲ್ಲಂಘಿಸಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಮೊಬೈಲ್ ಟವರ್​ಗಳನ್ನು ನಿಯಂತ್ರಿಸುವ ಜತೆಯಲ್ಲೇ ಕರೊನಾ ಹಾಗೂ ಇನ್ನಿತರ ಕಾರಣಗಳಿಂದ ಸೊರಗಿ ಹೋಗಿರುವ ಗ್ರಾಮ ಪಂಚಾಯಿತಿಗೆ ತೆರಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಈ ಸಂಬಂಧ ಕಠಿಣ ನಿಯಮಗಳ ಜಾರಿಗೆ ಮುಂದಾಗಿದೆ.

ಗ್ರಾಮೀಣ ಭಾಗದಲ್ಲಿ ಮೊಬೈಲ್ ಟವರ್​ಗಳ ಜತೆಗೆ ಟೆಲಿ ಕಮ್ಯುನಿಕೇಷನ್ ಅಂಗವಾಗಿ ಹಾಕುವ ಆಪ್ಟಿಕಲ್ ಫೈಬರ್ ಕೇಬಲ್ ಸಹ ಯಾವುದೇ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಅಳವಡಿಸುವುದಕ್ಕೆ ನಿಯಮಗಳ ಮೂಲಕ ಕಡಿವಾಣ ಹಾಕಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಗ್ರಾಮ ಸ್ವರಾಜ್ ಕಾಯ್ದೆಯಲ್ಲಿ ಮೊಬೈಲ್ ಟವರ್, ಟೆಲಿಪೋನ್ ಕಂಬಗಳ ಅಳವಡಿಕೆ, ಆಪ್ಟಿಕಲ್ ಫೈಬರ್ ಕೇಬಲ್ ಹಾಕುವುದಕ್ಕೆ ಶುಲ್ಕ ವಿಧಿಸಲು ನಿರ್ಧರಿಸಲಾಗಿತ್ತು. ಇದೀಗ ಅದಕ್ಕೆ ತಕ್ಕಂತೆ ನಿಯಮ ರೂಪಿಸಲಾಗುತ್ತಿದೆ.

ಕ್ರಮ ಸಕ್ರಮ: ಗ್ರಾಮೀಣ ಭಾಗದಲ್ಲಿ 9276 ಮೊಬೈಲ್ ಟವರ್​ಗಳಿದ್ದು, ಅದರಲ್ಲಿ ಬಹಳಷ್ಟು ಟವರ್​ಗಳ ಅಳವಡಿಕೆಯಲ್ಲಿ ನಿಯಮ ಪಾಲಿಸಿಲ್ಲ. ಆದ್ದರಿಂದ ನಿಯಮ ಜಾರಿ ಬಳಿಕ ಸಮೀಕ್ಷೆ ನಡೆಸಿ ಅಕ್ರಮ ಟವರ್​ಗಳನ್ನು ಸಕ್ರಮ ಮಾಡಲು ನಿರ್ಧರಿಸಲಾಗಿದೆ. ಸಕ್ರಮಕ್ಕೆ ಸಹಕರಿಸದಿದ್ದರೆ ಕೂಡಲೇ ತೆರವು ಮಾಡುವ ಕಾರ್ಯವನ್ನು ಇಲಾಖೆ ಮಾಡಲಿದೆ.

ನಿಯಂತ್ರಣವೇಕೆ?: ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಟವರ್ ಅಳವಡಿಸುವುದರಿಂದ ಜನ ಸಾಮಾನ್ಯರ ಆರೋಗ್ಯದ ಜತೆಗೆ ಅನೇಕ ಸಮಸ್ಯೆ ಸೃಷ್ಟಿಸುತ್ತಿದೆ. ಕೇಬಲ್​ಗಳಿಗೆ ಭೂಮಿ ಅಗೆಯುವುದರಿಂದಲೂ ಮೂಲಸೌಕರ್ಯ ಹಾಳಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದಲೇ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಸಮಿತಿ ರಚನೆ: ಮೊಬೈಲ್ ಟವರ್, ಟೆಲಿಪೋನ್ ಕಂಬ, ಕೇಬಲ್ ನಿಯಂತ್ರಣಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಪಂಚಾಯಿತಿ ಮಟ್ಟದ ಸಮಿತಿ ರಚಿಸಲಾಗುತ್ತದೆ. ಜಿಪಂನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಇದರ ಅಧ್ಯಕ್ಷರಾಗಿರುತ್ತಾರೆ. ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ, ಟೆಲಿಕಾಮ್ ಇಲಾಖೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಗ್ರಾಪಂ ಪಿಡಿಒ ಸಮಿತಿಯಲ್ಲಿರುತ್ತಾರೆ. ಟವರ್, ಕೇಬಲ್, ಪೋಲ್ ಅಳವಡಿಕೆಗೆ ಸಮಿತಿಯಿಂದ ಟೆಲಿಕಾಮ್ ಸಂಸ್ಥೆ ಪರವಾನಗಿ ಪಡೆಯಬೇಕಾಗುತ್ತದೆ. ಗ್ರಾಮ ಪಂಚಾಯಿತಿಗಳು ಪರಿಶೀಲನೆ ಹಕ್ಕು ಹೊಂದಿರುತ್ತವೆ.

ಒಂದು ತಿಂಗಳು ಸಮೀಕ್ಷೆ: ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್​ಗಳು ತಿಂಗಳ ಅವಧಿಯಲ್ಲಿ ಗ್ರಾಮೀಣ ಮೊಬೈಲ್ ಟವರ್ ಹಾಗೂ ಇತರ ಟೆಲಿಕಮ್ಯೂನಿಕೇಷನ್ ಮೂಲಸೌಕರ್ಯಗಳ ಸಮೀಕ್ಷೆ ನಡೆಸಲಿದ್ದಾರೆ. ಆ ನಂತರ ಅಕ್ರಮ ಎಷ್ಟು ಎಂಬುದರ ನಿಖರ ಮಾಹಿತಿ ತಿಳಿಯಲಿದೆ. ಅಲ್ಲಿಂದ ಒಂದು ತಿಂಗಳೊಳಗೆ ಸಕ್ರಮ ಮಾಡುವ ಕಾರ್ಯ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಆನ್​ಲೈನ್ ವ್ಯವಸ್ಥೆ: ಸಕ್ರಮಕ್ಕೆ ಅರ್ಜಿ ಹಾಕಲು ಆನ್​ಲೈನ್ ವ್ಯವಸ್ಥೆ ಮಾಡಲಾಗುತ್ತದೆ. ಏಕಗವಾಕ್ಷಿ ವ್ಯವಸ್ಥೆಯೂ ಇರುತ್ತದೆ. ಏಕೆಂದರೆ ಕಂದಾಯ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಅನುಮತಿ ಬೇಕಾಗುತ್ತದೆ. ಆದ್ದರಿಂದಲೇ ಏಕಗವಾಕ್ಷಿಯಲ್ಲಿ ಎಲ್ಲ ಇಲಾಖೆಗಳ ಅನುಮತಿಯೂ ಇಲ್ಲೇ ಸಿಗುವ ವ್ಯವಸ್ಥೆ ಇರುತ್ತದೆ.

ಡೀಮ್್ಡ ಒಪ್ಪಿಗೆ: ಗ್ರಾ. ಪಂ.ಗೆ ಟೆಲಿಕಾಮ್ ಸಂಸ್ಥೆ ಅರ್ಜಿ ಸಲ್ಲಿಸಿ 2 ತಿಂಗಳಲ್ಲಿ ಅನುಮತಿ ನೀಡಬೇಕು, ಇಲ್ಲ ತಿರಸ್ಕರಿಸಬೇಕು. ಇಲ್ಲದಿದ್ದರೆ ಅವಧಿ ಮುಗಿದ ಐದು ದಿನದಲ್ಲಿ ಡೀಮ್್ಡ ಒಪ್ಪಿಗೆ ಎಂದು ಭಾವಿಸಬಹುದೆಂದು ಇಲಾಖೆ ನಿಯಮದಲ್ಲಿ ಸ್ಪಷ್ಟಪಡಿಸಿದೆ.

ಮೊಬೈಲ್ ಟವರ್ ನಿಯಂತ್ರಿಸಲೇಬೇಕಿದೆ. ಆ ಮೂಲಕ ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕಾಗಿದೆ. ಅದಕ್ಕಾಗಿ ನಿಯಮ ರೂಪುಗೊಂಡಿವೆ. ಅಧಿಕಾರಿಗಳಿಗೆ ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿದ್ದೇನೆ. 2 ದಿನಗಳಲ್ಲಿ ವರದಿ ಬರಲಿದೆ. ಆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

| ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ

ನಿಯಮಗಳಲ್ಲಿ ಏನಿದೆ?

  • ಶಾಲೆ, ಆಸ್ಪತ್ರೆ, ನದಿ, ನಾಲೆ, ವಿದ್ಯುತ್ ಮಾರ್ಗ, ಮೀಸಲು ಅರಣ್ಯ, ಹೆದ್ದಾರಿಯಲ್ಲಿ ಟವರ್ ನಿಷಿದ್ಧ
  • ಕೇಂದ್ರ ಸರ್ಕಾರದ ಒಪ್ಪಿಗೆ ಕಡ್ಡಾಯ, ಭೂಮಿಗೆ ಕಂದಾಯ ಇಲಾಖೆ ಅನುಮತಿ ಬೇಕೇ ಬೇಕು
  • ನಿಯಮ ಉಲ್ಲಂಘಿಸಿದರೆ ಶುಲ್ಕದ 2 ಪಟ್ಟು ದಂಡ, ಸಿಇಒ ನೇತೃತ್ವದ ಸಮಿತಿ ಪರಿಶೀಲನೆ
  • ಕೇಬಲ್ ಅಳವಡಿಸುವವರು ಬ್ಯಾಂಕ್ ಗ್ಯಾರಂಟಿ ನೀಡಬೇಕು, ರೈಲ್ವೆ ಇಲಾಖೆ ಭೂಮಿಯಲ್ಲಿ ನಿಷಿದ್ಧ
  • ಟವರ್, ಕೇಬಲ್, ಪೋಲ್​ಗೆ ಪ್ರತ್ಯೇಕ ಅನುಮತಿ ಪಡೆಯಬೇಕು , ಜನರಿಗೆ ತೊಂದರೆಯಾದರೆ ಸಂಸ್ಥೆಯೇ ಜವಾಬ್ದಾರಿ, ಇಂಜಿನಿಯರಿಂಗ್ ವಿಭಾಗದಿಂದ ನಕ್ಷೆಗೆ ಅನುಮತಿ ಪಡೆಯಬೇಕು
  • ವಿದ್ಯುತ್ ಮಾರ್ಗ ಹಾದು ಹೋಗುವ ಕಡೆ ಮೀಸಲು ಅರಣ್ಯದಲ್ಲಿಯೂ ಟವರ್​ಗೆ ಒಪ್ಪಿಗೆ ಇಲ್ಲ
  • ಉಲ್ಲಂಘನೆಗೆ ಶುಲ್ಕದ ದುಪ್ಪಟ್ಟು ದಂಡ, ಅನುಮತಿ ಪಡೆಯದಿದ್ದರೆ ತೆರವು ಅಧಿಕಾರ ಪಂಚಾಯಿತಿಗೆ
  • ಆಪ್ಟಿಕಲ್ ಕೇಬಲ್ ಎಷ್ಟು ಪಂಚಾಯಿತಿಗಳ ನಡುವೆ ಹಾದು ಹೋಗುವುದೋ ಅಷ್ಟು ಪಂಚಾಯಿತಿಗಳ ಅನುಮತಿ ಕಡ್ಡಾಯ

ಪಂಚಾಯಿತಿಗೂ ಹಣ: ಬಹಳಷ್ಟು ಕಡೆ ಮೊಬೈಲ್ ಟವರ್​ಗಳಿಂದ ಪಂಚಾಯಿತಿಗಳಿಗೆ ತೆರಿಗೆ ಬರುತ್ತಿಲ್ಲ. ಆದರೆ ಸಕ್ರಮ ಮಾಡುವುದರಿಂದ ವಾರ್ಷಿಕ ಹಣ ತೆರಿಗೆ ರೂಪದಲ್ಲಿ ಬರಲಿದೆ. ಪ್ರತಿ ಟವರ್​ಗೆ 12 ಸಾವಿರ ರೂ.ಗಳ ವಾರ್ಷಿಕ ತೆರಿಗೆ ನಿಗದಿ ಮಾಡಲಾಗಿದೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಟವರ್ ಕನಿಷ್ಠ ಇರುತ್ತದೆ. ಅದರಿಂದ ವರ್ಷಕ್ಕೆ 50 ಸಾವಿರ ರೂ.ಗಳ ತನಕ ತೆರಿಗೆ ಬರಲಿದೆ ಎಂಬುದು ಒಂದು ಅಂದಾಜು.

ಕೇಬಲ್​ಗೂ ಶುಲ್ಕ ನಿಗದಿ: ಟೆಲಿ ಕಮ್ಯುನಿಕೇಷನ್ ಸಲುವಾಗಿ ಆಪ್ಟಿಕಲ್ ಫೈಬರ್ ಕೇಬಲನ್ನು ಭೂಮಿಯ ಒಳಗೆ ಹಾಗೂ ಮೇಲ್ಭಾಗದಲ್ಲಿ ಅಳವಡಿಸಲಾಗುತ್ತದೆ. ಇದಕ್ಕಾಗಿ ಭೂಮಿ ಅಗೆಯಲಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಇದುವರೆಗೆ ಕೆಲ ಟೆಲಿಕಾಮ್ ಸಂಸ್ಥೆಗಳು ಗ್ರಾ.ಪಂಗಳಿಂದ ಅನುಮತಿಯನ್ನೇ ಪಡೆದಿಲ್ಲ. ಇನ್ಮುಂದೆ ಕೇಬಲ್ ಅಳವಡಿಕೆಗೆ ಪ್ರತಿ ಮೀಟರ್​ಗೆ 450 ರೂ. ಶುಲ್ಕ ನಿಗದಿ ಮಾಡಲಾಗುತ್ತದೆ. ಕೇಬಲ್ 3 ನಾಳ ಹೊಂದಿದ್ದರೆ ಹೆಚ್ಚುವರಿಯಾಗಿ 75 ರೂ. ಶುಲ್ಕ ನಿಗದಿ ಮಾಡಲಾಗುತ್ತದೆ.

ಎಷ್ಟಿರಬೇಕು ಅಂತರ?

  • ಟವರ್ ನದಿ ಮೂಲದಿಂದ 6 ಮೀಟರ್
  • ಕೆರೆ, ಕುಂಟೆ-5 ಮೀಟರ್
  • ನಾಲೆಗಳಿಂದ 5 ಮೀಟರ್
  • 11 ಕೆವಿ ವಿದ್ಯುತ್ ಮಾರ್ಗದಿಂದ 7 ಮೀಟರ್
  • 400 ಕೆವಿ ವಿದ್ಯುತ್ ಮಾರ್ಗ-52 ಮೀಟರ್
  • ಪಾರಂಪರಿಕ ಕಟ್ಟಡದಿಂದ 100 ಮೀಟರ್

ಶತಕೋಟಿ ರೂ. ಸಂಗ್ರಹ: ಟವರ್​ಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿದ ಬಳಿಕ ರಾಜ್ಯದ ಗ್ರಾ.ಪಂ.ಗಳಿಂದ ಒಟ್ಟಾರೆ 100 ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ. ಪಂಚಾಯಿತಿಗಳ ಮಟ್ಟದ ಹೊಂದಾಣಿಕೆ ವ್ಯವಹಾರಕ್ಕೂ ಕಡಿವಾಣ ಬೀಳಲಿದೆ.