ನ್ಯೂಸ್

ಜಿಲ್ಲೆಯ ಪ್ರವಾಸಿ ತಾಣಗಳ ನಕ್ಷೆಯೇ ಇಲ್ಲ: ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ,ಪ್ರವಾಸಿಗರಿಗೆ ಬೇಕು ಪ್ರಮುಖ ಸ್ಥಳ, ಸೌಲಭ್ಯಗಳ ಮಾಹಿತಿ

ರಾಮನಗರ :  ಪ್ರವಾಸಿ ವೈವಿಧ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ನಕ್ಷೆಯೇ ಇಲ್ಲದಿರುವುದು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಕಾರಣ ಒಂದು ದಿನದ ಪ್ರವಾಸಕ್ಕೆ ರಾಮನಗರ ಜಿಲ್ಲೆ ಹೇಳಿ ಮಾಡಿಸಿದಂತಿದೆ. ಆದರೆ, ಬೆಂಗಳೂರಿನಿಂದ ಹಾಗೂ ಜಿಲ್ಲಾ ಕೇಂದ್ರದಿಂದ ಪ್ರವಾಸಿ ತಾಣಗಳಿಗೆ ಹೇಗೆ ಹೋಗಬೇಕು ಎನ್ನುವ ವಿವರಗಳನ್ನು ಒಳಗೊಂಡ ನಕ್ಷೆ ರೂಪಿಸಲು ಪ್ರವಾಸೋದ್ಯಮ ಇಲಾಖೆ ಆಸಕ್ತಿ ತೋರದಿರುವುದು ಸೋಜಿಗದ ಸಂಗತಿಯಾಗಿದೆ.

15 ವರ್ಷಗಳಾಗಿವೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ 2007ರ ಆಗಸ್ಟ್ ನಲ್ಲಿ ಬೇರ್ಪಟ್ಟು ಚನ್ನಪಟ್ಟಣ ಮಾಗಡಿ, ಕನಕಪುರ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯಾಗಿ ಉದಯಿಸಿತು. ಆದರೆ 14 ವಸಂತಗಳನ್ನು ಪೂರೈಸಿ 15 ವಸಂತಕ್ಕೆ ಕಾಲಿಟ್ಟರೂ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ನಕ್ಷೆ ಇಲ್ಲದೇ ಇರುವುದಕ್ಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.

ಇವುಗಳಿಗಷ್ಟೇ ಸೀಮಿತ: ರಾಮನಗರ ಜಿಲ್ಲೆ ಎಂದರೆ ಮೇಕೆದಾಟು, ಸಂಗಮ, ಕಣ್ವ, ಮಂಚನಬೆಲೆಯಂತಹ ಜಲ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟದಂತಹ ಬೃಹತ್ ಬಂಡೆಗಳ ಅದ್ಬುತ ತಾಣಗಳು, ಕೆಂಗಲ್, ರಂಗನಾಥ ಸ್ವಾಮಿ, ಕಬ್ಬಾಳು, ಅಪ್ರೇಮಯ ಸ್ವಾಮಿ ದೇವಾಲಯದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಎನ್ನುವಂತೆ ಆಗಿದೆ. ಈ ಪ್ರಮುಖ ಸ್ಥಳಗಳ ಹೊರತಾಗಿಯೂ ಸಾಕಷ್ಟು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿದ್ದು,ಇವುಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಪ್ರಚಾರ ಇಲ್ಲದಂತೆ ಆಗಿದೆ. ಇದರ ಹೊತರಾಗಿಯೂ ರಾಮನಗರಕ್ಕೆ ಪ್ರತಿದಿನ ನೂರಾರು ಮಂದಿ ಪ್ರವಾಸ ಬಂದು ಸಮಯವನ್ನು ಕಳೆಯುತ್ತಿದ್ದಾರೆ.

ಬೇಕಿದೆ ನಕ್ಷೆ: ಸರ್ಕಾರ ರಾಮನಗರ ಜಿಲ್ಲೆಯನ್ನು ಒಳಗೊಂಡ ಪ್ರವಾಸಿ ತಾಣಗಳಿಗೆ ವೀಕೆಂಡ್ ಟೂರಿಸಂ ಸರ್ಕೀಟ್ ನಿರ್ಮಾಣದ ಯೋಜನೆ ರೂಪಿಸಿತ್ತು. ಇದು ಸದ್ಯಕ್ಕೆ ಜಾರಿ ಆಗಿಲ್ಲವಾದರೂ ಕಾರ್ಯರೂಪಕ್ಕೆ ತರುವ ಪ್ರಯತ್ನ ಮುಂದುವರಿದಿದೆ. ಇದರ ಹೊರತಾಗಿಯೂ ಪ್ರತಿದಿನ ಹಾಗೂ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಪ್ರವಾಸಿಗರು ಸ್ವಂತ ವಾಹನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ.

ಇವರಿಗೆ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸಿಕೊಡುವ ಜತೆಗೆ, ಪ್ರವಾಸಿ ತಾಣಗಳಿಗೆ ಬೆಂಗಳೂರು, ಮೈಸೂರಿನಿಂದ ಹೇಗೆ ತಲುಪಬಹುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ಅಂತರ, ಲಭ್ಯವಿರುವ ಬಸ್, ರೈಲು ಮಾರ್ಗಗಳು ಯಾವುವು ಇತ್ಯಾದಿ ಮಾಹಿತಿಯಳ್ಳ ನಕ್ಷೆಯ ಅಗತ್ಯವಿದೆ. ಇದು ಪ್ರವಾಸಿಗರಿಗೆ ದೊರೆತರೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ, ಇಲ್ಲಿನ ಆರ್ಥಿಕ ಚಟುವಟಿಕೆಯೂ ಹೆಚ್ಚಳವಾಗುವ ಅವಕಾಶ ಹೇರಳವಾಗಿವೆ.

ಆರ್ಥಿಕ ಹೊಡೆತ: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಅಧಿಕಾರಿಗಳು ಬಂದದ್ದು ವಿರಳ. ಅಲ್ಲದೆ, ಕಳೆದ 6-7 ವರ್ಷಗಳಲ್ಲಿ ಪ್ರಭಾರ ಸಹಾಯಕ ನಿರ್ದೇಶಕರು ಕಾರ್ಯನಿರ್ವಹಿಸಿದ್ದು ಹೆಚ್ಚು. ಇದೀಗ ಹೊಸ ಸಹಾಯಕ ನಿರ್ದೇಶಕರು ಬಂದಿದ್ದರೂ ಕರೊನಾದಿಂದಾಗಿ ಆರ್ಥಿಕ ಹಿಂಜರಿತ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೆಟ್ಟು ನೀಡಿದೆ. ಇನ್ನು ಹಿಂದೆ ಇದ್ದ ಯಾವುದೇ ಅಧಿಕಾರಿಯೂ ಸಹ ಪ್ರವಾಸಿ ನಕ್ಷೆ ತಯಾರಿಸುವ ನಿಟ್ಟಿನಲ್ಲಿ ಗಮನಹರಿಸದೇ ಇರುವುದು ಪ್ರವಾಸ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದೆ.

ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಲು ಪ್ರವಾಸಿ ನಕ್ಷೆಯ ಅಗತ್ಯವಿದೆ. ಈ ಸಂಬಂಧ ಜಿಪಂಗೆ ಪತ್ರ ಬರೆಯಲಾಗಿದ್ದು, ಶೀಘ್ರವೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಂಬಂಧಿಸಿದ ನಕ್ಷೆ ದೊರೆಯುವ ವಿಶ್ವಾಸವಿದೆ. ಎಂ.ಎನ್.ಹರೀಶ್ ಸಹಾಯಕ ನಿರ್ದೇಶಕರು, ಪ್ರವಾಸೋಧ್ಯಮ ಇಲಾಖೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಪ್ರವಾಸಿ ನಕ್ಷೆ ಸಿದ್ಧಪಡಿಸುವಲ್ಲಿ ಇಲಾಖೆ ವಿಲವಾಗಿದೆ. ಈ ಬಗ್ಗೆ ಹಿಂದೆಯೂ ಕೋರಲಾಗಿತ್ತು, ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ ನಕ್ಷೆ ಸಿದ್ಧಪಡಿಸಿ ಪ್ರವಾಸಿಗರಿಗೆ ದೊರೆಯುವಂತೆ ಮಾಡಲಿ. ಮಹೇಶ್ ಮೆಂಗಳ್ಳಿ ಚನ್ನಪಟ್ಟಣ