ಮುಳಬಾಗಿಲು ತಾಲೂಕಿನ ಆವಣಿಯಲ್ಲಿರುವ ರಾಮಲಿಂಗೇಶ್ವರ ದೇವಾಲಯ. 
ನ್ಯೂಸ್

ಪ್ರವಾಸಿತಾಣಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವ

Kolar

ಕೋಲಾರ: ಪ್ರಸಿದ್ಧ ತಿರುಮಲ ತಿರುಪತಿಗೆ ಹಾಗೂ ಚೆನ್ನೈಗೆ ಕೋಲಾರ ಮಾರ್ಗವಾಗಿ ಪ್ರವಾಸಿಗರು ಸಂಚರಿಸುವುದರಿಂದ ಜಿಲ್ಲೆ ಮಹತ್ವ ಪಡೆದುಕೊಂಡಿದೆ. ಸರ್ಕಾರ ಜಿಲ್ಲೆಯ ನೆಲ, ಜಲ, ಮಾನವಶಕ್ತಿಗೆ ಧಕ್ಕೆಯಾಗದಂತೆ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಸಾರ್ವಜನಿಕರ ಸಹಭಾಗಿತ್ವಕ್ಕೆ (ಪಬ್ಲಿಕ್ ಆ್ಯಂಡ್ ಪ್ರೈವೇಟ್ ಪಾರ್ಟ್‌ನರ್‌ಶಿಪ್) ವಹಿಸಿದಲ್ಲಿ ಸಾಮಾಜಿಕ, ಆರ್ಥಿಕವಾಗಿ ಜಿಲ್ಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಬಹುದು.

ಕೋಲಾರದಿಂದ 3 ಕಿಮೀ ದೂರದ ಅಂತರಗಂಗೆ ಬೆಟ್ಟ, ತೇರಹಳ್ಳಿ ಬೆಟ್ಟ ಪ್ರವಾಸಿಗರ ಆಕರ್ಷಕ ತಾಣ. ಅಂತರಗಂಗೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ತೇರಹಳ್ಳಿ ಬೆಟ್ಟ ಸಾಹಸಿಗರ ಟ್ರಕ್ಕಿಂಗ್ ಸೆಂಟರ್ ಆಗಿದೆ, ಇಲ್ಲಿನ ಶಿವಗಂಗೆಯ ಜಿಂಕೆ ರಾಮಯ್ಯ ತಾಣದಲ್ಲಿನ ಆದಿಮ ಸಂಸ್ಥೆ ಸಾಹಿತ್ಯ, ಸಂಸ್ಕೃತಿಯ ಆರಾಧಕರಿಗೆ ಮೆಚ್ಚಿನ ಸಂಶೋಧನಾ ಕೇಂದ್ರ. ತೇರಹಳ್ಳಿಯಲ್ಲಿರುವ ಸೋಮೇಶ್ವರ ದೇವಾಲಯ ಆಸ್ತಕರ ನಂಬಿಕೆಯ ಜಗತ್ತಾಗಿದೆ.

ಕೋಲಾರ ನಗರದ ಕೋಟೆ ಪ್ರದೇಶದಲ್ಲಿನ ಪುರಾಣ ಪ್ರಸಿದ್ಧ ಸೋಮೇಶ್ವರ, ಕೋಲಾರಮ್ಮ ದೇವಾಲಯ ಪ್ರವಾಸಿಗರ ಆಕರ್ಷಣೀಯ ಮಂದಿರಗಳಾಗಿವೆ.

ಕೋಲಾರದ ಕ್ಲಾಕ್ ಟವರ್‌ನಲ್ಲಿರುವ ಹೈದರಾಲಿ ವಂಶಜರ ಗೋರಿಗಳು, ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯ ಮಲೆಯಪ್ಪನ ಬೆಟ್ಟ, ಹೊಗಳಗೆರೆಯಲ್ಲಿರುವ ಮಾವು ಸಂಶೋಧನಾ ಕೇಂದ್ರ, ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ನೆಲೆಸಿರುವ 108 ಅಡಿ ಏಕಶಿಲೆಯ ವಿನಾಯಕ ರಾಜಕಾರಣಿಗಳ ಅಚ್ಚುಮೆಚ್ಚಿನ ದೇವರಾಗಿದೆ.

ಇದೇ ತಾಲೂಕಿನ ಕೊಲದೇವಿಯಲ್ಲಿರುವ ಪುರಾಣ ಪ್ರಸಿದ್ಧ ಗರುಡ ದೇವಾಲಯ, ಮುಳಬಾಗಿಲು ಪಟ್ಟಣದಲ್ಲಿರುವ ಅರ್ಜುನ ಸ್ಥಾಪಿತ ಆಂಜನೇಯ ದೇವಾಲಯ, ಆವಣಿಯಲ್ಲಿರುವ ಶ್ರೀರಾಮೇಶ್ವರ ದೇವಾಲಯ, ಲವಕುಶ ಜನ್ಮಸ್ಥಳ, ವಾಲ್ಮೀಕಿ ಆಶ್ರಮ, ಧನುಷ್ಕೋಟಿ, ವಿರೂಪಾಕ್ಷಿಯಲ್ಲಿರುವ ಶ್ರೀ ವಿರೂಪಾಕ್ಷಿ ದೇವಾಲಯ, ಮುಳಬಾಗಿಲು ಸಮೀಪದ ನರಸಿಂಹ ತೀರ್ಥ, ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿಯಲ್ಲಿರುವ ಬಂಗಾರು ತಿರುಪತಿ, ಕೆಜಿಎಫ್‌ನಲ್ಲಿರುವ ಬ್ರಿಟಿಷರ ಕಾಲದ ಬಂಗಲೆಗಳು, ಪುರಾತನ ಚರ್ಚ್‌ಗಳು, ಚಿನ್ನದ ಗಣಿ ಪ್ರದೇಶ, ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯ, ಬಂಗಾರಪೇಟೆ ತಾಲೂಕಿನ ಬ್ಯಾಟರಾಯನಪುರದಲ್ಲಿರುವ ಪ್ರಾಚೀನ ಶ್ರೀ ಬ್ಯಾಟರಾಯಸ್ವಾಮಿ ಬೆಟ್ಟ, ಬೂದಿಕೋಟೆಯಲ್ಲಿರುವ ಮಾರ್ಕಂಡೇಯ ಜಲಾಶಯ, ಮಾಲೂರು ತಾಲೂಕಿನ ಉಳದೇನಹಳ್ಳಿಯಲ್ಲಿರುವ ಭೂತಮ್ಮನ ಬೆಟ್ಟ, ವ್ಯಾಸರಾಜರು ಸ್ಥಾಪಿತ ಪ್ರಾಣದೇವರ ದೇವಾಲಯ, ಚಿಕ್ಕತಿರುಪತಿಯಲ್ಲಿನ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯ, ಮಾಲೂರಿನ ಅಧಿದೇವತೆ ಮಾರಿಕಾಂಬಾ ದೇವಾಲಯ, ಶಿಲೆಗಳ ತವರು ಶಿವಾರಪಟ್ಟಣ, ಕೋಲಾರ ತಾಲೂಕಿನ ವಕ್ಕಲೇರಿಯಲ್ಲಿರುವ ಬೆಳ್ಳಿಬೆಟ್ಟ, ಮಾರ್ಕಂಡೇಯ ಬೆಟ್ಟ, ಮಾಸ್ತಿಯಲ್ಲಿರುವ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹುಟ್ಟಿದ ಮನೆ, ಮುಳಬಾಗಿಲಿನಲ್ಲಿರುವ ಡಿವಿಜಿ ಅವರ ಜನ್ಮಸ್ಥಳ ಹೀಗೇ ನೂರಾರು ಐತಿಹಾಸಿಕ ಸಂಗತಿಗಳನ್ನು ಒಳಗೊಂಡ ಕೋಲಾರ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಸರ್ಕಾರ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದಲ್ಲಿ ಸ್ಥಳೀಯರಿಗೆ ಉದ್ಯೋಗ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ.

ಸರ್ಕಾರದಿಂದಲೇ ಜಿಲ್ಲೆಯ ಅಭಿವೃದ್ಧಿ ಸಾಧ್ಯವೆಂಬ ಭ್ರಮೆ ಸಲ್ಲ, ಜಿಲ್ಲೆಯ ನೆಲ, ಜಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಖಾಸಗಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಜಿಲ್ಲೆಯನ್ನು ಸಾಮಾಜಿಕ, ಆರ್ಥಿಕವಾಗಿ ಬಲಪಡಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಟ್ಟಿ ಮನಸ್ಸು ಮಾಡಬೇಕಿದೆ.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಕೊರತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಅನುದಾನ ಸಾಕಾಗದಿದ್ದರೆ ಖಾಸಗಿಯವರ ಸಹಕಾರ ಪಡೆದು ಪ್ರವಾಸಿತಾಣ ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಣೆ ಮಾಡಲು ಯೋಜನೆ ಜಾರಿಗೆ ತರಬಹುದು, ಕೋವಿಡ್ ತಹಬದಿಗೆ ಬಂದ ಮೇಲೆ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಿ ಚರ್ಚಿಸಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರುತ್ತೇನೆ. ಎಸ್.ಮುನಿಸ್ವಾಮಿ, ಸಂಸದ, ಕೋಲಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳಿಗೆ ಪ್ರವಾಸಿತಾಣಗಳ ಅಭಿವೃದ್ಧಿ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ಕಾಳಜಿ ಇತ್ತು. ವಿಶೇಷ ಸಭೆ ಕರೆಯಲು ನಾನು ಮತ್ತು ಹಳೇ ಡಿಸಿ ನಿರ್ಧರಿಸಿದ್ದೆವು, ಅಷ್ಟರಲ್ಲಿ ಅವರಿಗೆ ವರ್ಗಾವಣೆಯಾಯಿತು, ಹೊಸ ಡಿಸಿ ಸೋಮವಾರ ಬರುವ ನಿರೀಕ್ಷೆಯಿದೆ, ಖಂಡಿತ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಂಟಿಯಾಗಿ ಕಾರ್ಯಕ್ರಮ ರೂಪಿಸುತ್ತೇವೆ. ಉಕೇಶ್ ಕುಮಾರ್, ಜಿಪಂ ಸಿಇಒ ಮತ್ತು ಪ್ರಭಾರ ಜಿಲ್ಲಾಧಿಕಾರಿ, ಕೋಲಾರ