ಶಿವಮೊಗ್ಗ ಮಹಾನಗರ ಪಾಲಿಕೆ.  
ನ್ಯೂಸ್

ಶಿವಮೊಗ್ಗ ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಕಠಿಣ ಸವಾಲು

ಶಿವಮೊಗ್ಗ: ನಗರಸಭೆಯು ಪಾಲಿಕೆಯಾಗಿ ಮೇಲ್ದರ್ಜೆಗೇರಿದ 10 ವರ್ಷಗಳ ಬಳಿಕ ವ್ಯಾಪ್ತಿ ವಿಸ್ತರಣೆಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಸಮಾಲೋಚಿಸಿದ್ದಾರೆ. ಜನಪ್ರತಿನಿಧಿಗಳ ಅನಿಸಿಕೆ ಆಲಿಸಿ 15 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈಗ ಅಧಿಕಾರಿಗಳು ಸಿದ್ಧಪಡಿಸಿರುವ ಯೋಜನೆ ಪ್ರಕಾರ ಶಿವಮೊಗ್ಗಕ್ಕೆ ಹೊಂದಿಕೊಂಡಿರುವ ಎರಡು ದೊಡ್ಡ ಗ್ರಾಪಂಗಳು ಪಾಲಿಕೆ ವ್ಯಾಪ್ತಿಗೆ ಸೇರಬೇಕು. ಹೊಸದಾಗಿ ನಿರ್ಮಾಣವಾಗಿರುವ ಹತ್ತಾರು ಬಡಾವಣೆಗಳು ಪಾಲಿಕೆ ತೆಕ್ಕೆಗೆ ಬರಲಿವೆ. ಕೈಗಾರಿಕಾ ಪ್ರದೇಶಗಳು ಪಾಲಿಕೆಗೆ ಸೇರ್ಪಡೆಯಾಗಲಿವೆ.

ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಭಾಗವನ್ನು ಒಂದು ಭಾಗದಲ್ಲಿ ಪಾಲಿಕೆ ಗಡಿಯನ್ನಾಗಿ ಈಗ ಗುರುತಿಸಲಾಗಿದೆ. ಪ್ರಸ್ತುತ ನಗರ ಪಾಲಿಕೆ ವ್ಯಾಪ್ತಿ 77 ಚದರ ಕಿ.ಮೀ ಇದೆ. ಈಗ ಉದ್ದೇಶಿಸಿರುವ ಎಲ್ಲ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ತಂದರೆ ಅದರ ವ್ಯಾಪ್ತಿ 144 ಚದರ ಕಿ.ಮೀ ಆಗಲಿದೆ. 20 ವಾರ್ಡ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ.

ಒಂದು ದಶಕದ ಅವಧಿಯಲ್ಲಿ ಶಿವಮೊಗ್ಗ ನಗರದ ಜನಸಂಖ್ಯೆ ಏರಿಕೆಯಾಗಿದ್ದು, ವ್ಯಾಪ್ತಿ, ವಿಸ್ತೀರ್ಣ ಹೆಚ್ಚಾಗಿದೆ. ಹೊರವಲಯದ ಪ್ರದೇಶಗಳಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಪ್ರದೇಶಗಳಲ್ಲೂ ದೊಡ್ಡ ಜನವಸತಿ ಬಡಾವಣೆಗಳು ರಚನೆಯಾಗಿವೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಸಬೇಕು ಎಂಬ ಆಗ್ರಹ ನಗರಸಭೆ ಆಡಳಿತ ಇದ್ದಾಗ ಸಾರ್ವಜನಿಕರಿಂದ ಕೇಳಿಬಂದಿತ್ತು. ಈ ನಡುವೆ ರಾಜ್ಯ ಸರ್ಕಾರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿತ್ತು.

2018ರ ಚುನಾವಣೆ ವೇಳೆ ನಗರದಂಚಿನ ಗ್ರಾಮಗಳು ಪಾಲಿಕೆಗೆ ಸೇರ್ಪಡೆಯಾಗುವ ಲಕ್ಷಣಗಳಿದ್ದವು. ಆದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹಿಂದಿನ ನಗರಸಭೆ ವ್ಯಾಪ್ತಿ ಹಾಗೂ 35 ವಾರ್ಡ್‌ಗಳನ್ನು ಉಳಿಸಿಕೊಂಡು ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ಪ್ರಕ್ರಿಯೆ ನಡೆಸುವ ನಿರ್ಣಯ ಕೈಗೊಳ್ಳಲಾಗಿತ್ತು. ಜಿಲ್ಲಾಡಳಿತ ಕೂಡ ಹೊಸ ಪ್ರದೇಶಗಳ ಸೇರ್ಪಡೆ ಮಾಡಿಕೊಳ್ಳದೆ 35 ವಾರ್ಡ್‌ಗಳನ್ನು ಉಳಿಸಿಕೊಂಡೇ ಪುನರ್ವಿಂಗಡಣೆ ಪ್ರಕ್ರಿಯೆ ನಡೆಸಲಾಗಿತ್ತು. ಈಗ ಹೊಸ ಪ್ರದೇಶಗಳ ಸೇರ್ಪಡೆಗೆ ಪ್ರಕ್ರಿಯೆ ಆರಂಭವಾಗಿದೆ.

ಈಗ ಗುರುತಿಸಿರುವ ಪ್ರದೇಶಗಳಂತೆ ಅಬ್ಬಲಗೆರೆ, ನಿದಿಗೆ ಗ್ರಾಪಂಗಳು ಪಾಲಿಕೆ ವ್ಯಾಪ್ತಿಗೆ ಬಂದರೆ ಪಾಲಿಕೆ ಆದಾಯ ಹೆಚ್ಚಾಗಲಿದೆ. ಕೆಲ ಕೈಗಾರಿಕಾ ಪ್ರದೇಶಗಳು ಪಾಲಿಕೆಗೆ ಸೇರಲಿವೆ. ಪಾಲಿಕೆ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಲಿದೆ. ಜತೆಗೆ ಅನೇಕ ಸವಾಲುಗಳೂ ಎದುರಾಗಲಿವೆ. ಹೊಸ ಪ್ರದೇಶದಲ್ಲಿರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಕುಡಿಯುವ ನೀರು, ಬೀದಿ ದೀಪ, ರಸ್ತೆ ನಿರ್ಮಾಣ, ವಸತಿ ಯೋಜನೆಗಳ ಅನುಷ್ಠಾನ ಎಲ್ಲವೂ ಪಾಲಿಕೆ ಹೆಗಲೇರಲಿದೆ. ಈಗ ಇರುವ ಪ್ರದೇಶದ ಎರಡರಷ್ಟು ಪ್ರದೇಶದ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಕೊರತೆ ಎದುರಾಗಲಿದೆ.