ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾ.9ರಂದು ಜನ್ಮದಿನ ಆಚರಿಸಿಕೊಂಡ ಶಶಿ ತರೂರ್(64) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ನಿಮ್ಮ ಚಿಂತನಾಶೀಲತೆ ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದು ಹೇಳಿದ್ದಾರೆ.
ಶಶಿ ತರೂರ್ ಅವರು ಈ ಹಿಂದೆ ನರೇಂದ್ರ ಮೋದಿಯವರನ್ನು ಟೀಕಿಸಿದ್ದೂ ಉಂಟು. ಹಾಗೇ ಕೆಲವೊಮ್ಮೆ ಮೋದಿಯವರ ಪರ ವಹಿಸಿಕೊಂಡು ಮಾತನಾಡಿದ್ದೂ ಇದೆ. ಆದರೆ ತಮ್ಮ ಜನ್ಮದಿನದಂದೇ ಅವರನ್ನು ಮನತುಂಬಿ ಹೊಗಳಿದ್ದಕ್ಕೆ ಖಂಡಿತ ಕಾರಣವಿದೆ.
ಶಶಿ ತರೂರ್ ಕೇರಳದವರು. ಅವರ ಮಾತೃಭಾಷೆ ಮಲೆಯಾಳಂ. ಪ್ರಧಾನಿ ನರೇಂದ್ರ ಮೋದಿಯವರು ಮಲೆಯಾಳಂನಲ್ಲೇ ತಮಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ತರೂರ್ ಫುಲ್ ಖುಷಿಯಾಗಿದ್ದಾರೆ. ಮೋದಿಯವರು ತಮಗೆ ಕಳುಹಿಸಿದ ಗ್ರೀಟಿಂಗ್ ಕಾರ್ಡ್ನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ತರೂರ್, ನರೇಂದ್ರ ಮೋದಿಯವರೇ, ಮಲೆಯಾಳಂನ ಶುದ್ಧ ಸಾಹಿತ್ಯದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನನಗೆ ಹಾರೈಸಿದ ರೀತಿ ನನ್ನ ಹೃದಯ, ಮನಸನ್ನು ಸ್ಪರ್ಶಿಸಿತು ಎಂದು ಹೇಳಿದ್ದಾರೆ.
ಮಲೆಯಾಳಂನಲ್ಲಿ ಇರುವ ಮೋದಿಯವರ ಶುಭಾಶಯವನ್ನು ಶಶಿ ತರೂರ್ ಅವರೇ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಅದರ ಸಾರಾಂಶ ಹೀಗಿದೆ.: 'ನಿಮ್ಮ ಜನ್ಮದಿನಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರಲಿ. ಶಾಂತಿ, ಸಮಾಧಾನ, ಅದೃಷ್ಟಗಳೆಲ್ಲ ನಿಮ್ಮದಾಗಲಿ. ನಿಮ್ಮ ಸುದೀರ್ಘ ಕಾಲದ ಸಾರ್ವಜನಿಕ ಜೀವನದ ಅನುಭವ, ಪ್ರತಿಭೆಗಳು ಈ ರಾಷ್ಟ್ರನಿರ್ಮಾಣಕ್ಕೆ ವಿನಿಯೋಗವಾಗಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆ. ಮೋದಿಯವರಿಂದ ಶಶಿ ತರೂರ್ಗೆ ಕಳಿಸಲ್ಪಟ್ಟ ಮಲೆಯಾಳಂ ಸಾಹಿತ್ಯದ ಶುಭಾಶಯಕ್ಕೆ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೇ ಶಶಿ ತರೂರ್ ಅವರು ತಮ್ಮ ತಾಯಿಯೊಂದಿಗೆ ಬರ್ತ್ ಡೇ ಔತಣಕೂಟದಲ್ಲಿ ಪಾಲ್ಗೊಂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)