ಒಮ್ಮೆ ಎಲ್ಲರೂ ಸರಸ್ವತೀನದಿಯ ತೀರಕ್ಕೆ ಹೋಗಿದ್ದರು. ಅಲ್ಲಿ ಪಾರ್ವತಿ ಹಾಗೂ ರುದ್ರದೇವರ ಸನ್ನಿಧಾನ. ವಿಶೇಷ ಪೂಜೆ, ನೈವೇದ್ಯಾದಿಗಳನ್ನು ಸಮರ್ಪಣೆ ಮಾಡಿ ರಾತ್ರಿ ಅಲ್ಲಿಯೇ ಮಲಗಿದರು. ಆಗ ಒಂದು ದೊಡ್ಡ ಅಜಗರಸರ್ಪ ನಂದನನ್ನು ನುಂಗಿ ಬಿಟ್ಟಿದೆ. ಹಿಂದೆ ಶ್ರೀಕೃಷ್ಣ ನಂದನನ್ನು ವರುಣಪಾಶದಿಂದ ಬಿಡುಗಡೆ ಮಾಡಿಸಿದ್ದ. ಈಗ ನಂದನನ್ನು ಅಜಗರ ನುಂಗಿದ್ದಾನೆ. ಎಲ್ಲರಿಗೂ ಗಾಬರಿ. ಅವರು ತಮ್ಮ ಕೈಯಲ್ಲಿ ಆಗುವಷ್ಟು ಪ್ರಯತ್ನ ಮಾಡಿದರು.
ದೊಡ್ಡ ದೊಡ್ಡ ಕೊಳ್ಳೆಗಳಿಂದ ಅಜಗರನಿಗೆ ಹೊಡೆಯಲು ಯತ್ನಿಸಿದರು. ಕಲ್ಲುಗಳನ್ನು ಎಸೆದರು. ಏನು ಮಾಡಿದರೂ ಅಜಗರ ಸರಿಯಲಿಲ್ಲ. ಆಗ ಎಲ್ಲರೂ ಶ್ರೀಕೃಷ್ಣನಿಗೆ ಶರಣು ಹೋದರು. ಶ್ರೀಕೃಷ್ಣ ಸರ್ಪದ ಹತ್ತಿರ ಬಂದು ಕೇವಲ ತನ್ನ ಪಾದವನ್ನು ಸ್ಪರ್ಶ ಮಾಡಿದ. ಆ ಕೂಡಲೇ ಸುದರ್ಶನ ಎಂಬ ಸುಂದರ ವಿದ್ಯಾಧರ ಶ್ರೀಕೃಷ್ಣನ ಸ್ತೋತ್ರವನ್ನು ಮಾಡಲು ಆರಂಭಿಸಿದ. ಸುದರ್ಶನ ಅಂಗೀರಸ ಋಷಿಗಳನ್ನು ನೋಡಿ ಅಪಹಾಸ ಮಾಡಿದ್ದ. ಅಂಗೀರಸರು ಮಹಾಜ್ಞಾನಿಗಳು. ತಪಸ್ವಿಗಳು. ನೋಡುವುದಕ್ಕೆ ಅಷ್ಟು ಚೆನ್ನಾಗಿಲ್ಲ ಎಂದು ಅಪಹಾಸ್ಯ ಮಾಡಿದ್ದಕ್ಕೆ ಅವರ ಶಾಪದಿಂದ ಅಜಗರನಾಗಿ ಹುಟ್ಟಿ ಬಂದಿದ್ದ.
‘ಆ ಜ್ಞಾನಿಗಳು ನನಗೆ ಕೊಟ್ಟ ಶಾಪ ಅದು ಶಾಪ ಅಲ್ಲ ಅದು ವರ. ಏಕೆಂದರೆ ಅವರು ಶಾಪ ಕೊಟ್ಟದ್ದಕ್ಕೆ ಇಂದು ನೀನು ನಿನ್ನ ಪಾದದಿಂದ ನನ್ನನ್ನು ಮುಟ್ಟಿದೆ. ಅವರು ಶಾಪ ಕೊಡದೇ ಇದ್ದರೆ ವಿದ್ಯಾಧರನಾಗಿ ಓಡಾಡುತ್ತಿರಬೇಕಾಗಿತ್ತು. ನಿನ್ನ ಪಾದಧೂಳಿಯ ಸ್ಪರ್ಶದ ಭಾಗ್ಯ ಇನ್ನೆಂದು ಸಿಗುತ್ತಿತ್ತೋ ಗೊತ್ತಿಲ್ಲ. ಏಕೆಂದರೆ ನಿನ್ನ ಕಾಲನ್ನು ನೇರವಾಗಿ ಮುಟ್ಟಲು ವಾಯು ಮೊದಲಾದ ದೇವತೆಗಳು ಸಾಲಿನಲ್ಲಿ ನಿಂತಿರುತ್ತಾರೆ. ಈಗ ನೀನೇ ನೇರವಾಗಿ ಬಂದು ನನ್ನ ತಲೆಯ ಮೇಲೆ ಕಾಲು ಇಟ್ಟು ನನ್ನನ್ನು ಉದ್ಧರಿಸುತ್ತಿರುವೆ’ ಎಂದು ವಿದ್ಯಾಧರ ಉದ್ಗಾರ ಎತ್ತಿದ್ದಾನೆ. ಸ್ವಾಭಾವಿಕವಾಗಿ ಸಜ್ಜನನಾದ ವಿದ್ಯಾಧರ ಜ್ಞಾನಿಗಳಿಗೆ ಮಾಡಿದ ಒಂದು ದ್ರೋಹದಿಂದ ಈ ಗತಿಯನ್ನು ಹೊಂದಿದ್ದ. ಶ್ರೀಕೃಷ್ಣನ ಪಾದಸ್ಪರ್ಶದಿಂದ ಉದ್ಧಾರವಾದ.