| ಅತುಲ್ ಭಟ್ ಉಡುಪಿ
Lunar eclipse : ಚಂದ್ರನು ಭೂಮಿಯ ಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ ಸೂರ್ಯನಿಂದ ಭೂಮಿಯ ಹಿಂಬದಿ ಬಂದಾಗ ಚಂದ್ರಗ್ರಹಣವಾಗಲಿದೆ. ಚಂದ್ರನು ಪೂರ್ತಿ ಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಸೆ.7 ರಂದು ಹುಣ್ಣಿಮೆ ರಾತ್ರಿ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಭಾರತದ ಎಲ್ಲ ಭಾಗಗಳಿಂದ ಈ ಖಗೋಳ ವಿದ್ಯಮಾನ ವೀಕ್ಷಿಸಬಹುದು.
ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೇಂದ್ರ ಭಾಗ, ಮಲೇಷಿಯಾ, ಸಿಂಗಾಪುರ, ಇಂಡೋನೇಷಿಯಾ, ಶ್ರೀಲಂಕಾ, ಏಷ್ಯಾ ಖಂಡದ ವಿವಿಧ ದೇಶಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಪ್ ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿಯೂ ಗೋಚರಿಸುತ್ತದೆ.
ರಾತ್ರಿ 8.50ಕ್ಕೆ ಗ್ರಹಣ ಆರಂಭವಾಗುವಾಗ ಭೂಮಿಯ ಅರೆನೆರಳು ಚಂದ್ರನ ಮೇಲೆ ಬೀಳಲು ಆರಂಭವಾಗುತ್ತದೆ. ಸುಮಾರು 9.57ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹರಿದಾಡುತ್ತದೆ. ಗ್ರಹಣ ಮುಂದುವರಿಯುತ್ತಾ 11 ಗಂಟೆಗೆ ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಬಂದಿರುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12.22ರವರೆಗೆ (ಸುಮಾರು 1 ಗಂಟೆ 22 ನಿಮಿಷ) ಗ್ರಹಣ ವೀಕ್ಷಿಸಬಹುದು. 11.41ಕ್ಕೆ ಗರಿಷ್ಠ ಗ್ರಹಣದ ಕಾಲದಲ್ಲಿ ಕೆಂಪುಚಂದ್ರನನ್ನು ವೀಕ್ಷಿಸಬಹುದು. 1.26ಕ್ಕೆ ಚಂದ್ರನು ಭೂಮಿಯ ನೆರಳಿನಿಂದ, ನಂತರ 2.25ಕ್ಕೆ ಭೂಮಿಯ ಅರೆನೆರಳಿನಿಂದ ಹೊರಬರುತ್ತಾನೆ. ಈ ಗ್ರಹಣದ ವಿವಿಧ ಹಂತಗಳನ್ನು ಸುಮಾರು 5 ಗಂಟೆ 27 ನಿಮಿಷ ವೀಕ್ಷಿಸಬಹುದು.
ತಾಮ್ರದ ಕೆಂಪು ಬಣ್ಣದ ಚಂದ್ರ: ಗ್ರಹಣದ ವೇಳೆ ಚಂದ್ರನು ತಾಮ್ರದ ಕೆಂಪು ಬಣ್ಣ ಹೊಂದಿರುತ್ತಾನೆ. ಭೂಮಿಯು ಚಂದ್ರನ ಮೇಲೆ ನೇರವಾಗಿ ಬೀಳುವ ಸೂರ್ಯಕಿರಣ ಗಳನ್ನು ತಡೆಗಟ್ಟುತ್ತದೆ. ಈ ಕಾರಣ ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು ಚಂದ್ರನ ಮೈಮೇಲಿನಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಖಗೋಳಶಾಸ್ತ್ರಜ್ಞರು ಆಕಾಶಕಾಯಗಳ ಬೆಳಕನ್ನು ಪರಿಮಾಣ ಮಾಪನದಿಂದ ಗುರುತಿಸುತ್ತಾರೆ. ಸಾಮಾನ್ಯವಾಗಿ ಹುಣ್ಣಿಮೆಯ ಚಂದ್ರನ ಪರಿಮಾಣ ಸುಮಾರು ಮೈನಸ್ 13 ಇರುತ್ತದೆ. ಆದರೆ, ಈ ಗ್ರಹಣದ ಸಮಯ ಮೈನಸ್ 1.35ರಷ್ಟಾಗಲಿದೆ.