ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 9.55 ಲಕ್ಷ ಮಂದಿಗೆ ಕೋವಿಡ್ ಲಸಿಕೆ ವಿತರಿಸಲಾಗಿದೆ. ಇದರೊಂದಿಗೆ ಲಸಿಕೆ ವಿತರಣೆಯ ಒಟ್ಟು ಡೋಸ್‌ಗಳು 4 ಕೋಟಿ (3.98 ಕೋಟಿ) ಸಮೀಪಿಸಿದೆ.
ಈವರೆಗೆ 3.02 ಕೋಟಿ ಮಂದಿ ಮೊದಲ ಡೋಸ್ ಹಾಗೂ 96.12 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶುಕ್ರವಾರ 6,648 ಸರ್ಕಾರಿ ಆಸ್ಪತ್ರೆಗಳು ಸೇರಿ 7,102 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಅಭಿಯಾನ ಕೈಗೊಳ್ಳಲಾಗಿದ್ದು, ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ದಿನವೊಂದಕ್ಕೆ ವಿತರಿಸುತ್ತಿದ್ದ ಲಸಿಕೆಯ ಡೋಸ್‌ಗಳ ಪ್ರಮಾಣ ಹೆಚ್ಚಿಸಲಾಗಿದೆ. ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ 2.75 ಲಕ್ಷ ಡೋಸ್ ಲಸಿಕೆ ವಿತರಿಸಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತರಲ್ಲಿ 7.62 ಲಕ್ಷ ಮಂದಿ ಮೊದಲ ಡೋಸ್ ಹಾಗೂ 5.96 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಕೋವಿಡ್ ಮುಂಚೂಣಿ ಕಾರ್ಯಕರ್ತರಲ್ಲಿ 9.36 ಲಕ್ಷ ಮಂದಿ ಮೊದಲ ಡೋಸ್ ಹಾಗೂ 4.97 ಲಕ್ಷ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
ಉಳಿದಂತೆ 45 ವರ್ಷ ಮೇಲ್ಪಟ್ಟವರಲ್ಲಿ 1.34 ಕೋಟಿ ಮಂದಿ ಮೊದಲ ಡೋಸ್ ಹಾಗೂ 66.86 ಲಕ್ಷ ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 18ರಿಂದ 44 ವರ್ಷದವರಲ್ಲಿ 1.48 ಕೋಟಿ ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಅವರಲ್ಲಿ 17.63 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.