ಬೆಂಗಳೂರು: ವಿಭಿನ್ನತೆಯ ನೆಪದಲ್ಲಿ ಪರೀಕ್ಷೆಯ ಹಿಂಸೆಯನ್ನು ಮಕ್ಕಳ ಮೇಲೆ ಹೇರುವ, ನಂತರ ಕೃಪಾಂಕಗಳನ್ನು ನೀಡಿ ಎಡವಟ್ಟು ಮಾಡಿರುವುದು ವಿಶ್ವಾಸ ಕದಡುವ ಪ್ರಯತ್ನವೆಂದು ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ಅಸಹನೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಸುದೀರ್ಘವಾದ ಪತ್ರ ಬರೆದು, ಬೋಧನಾ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲು ನಿವೇದಿಸಿಕೊಂಡಿದ್ದಾರೆ. ಅಲ್ಲದೆ, ತಾವು ಶಾಲಾ ಶಿಕ್ಷಣ ಸಚಿವರಾಗಿದ್ದಾಗ ಕೈಗೊಂಡ ಕ್ರಮಗಳನ್ನು ಉದಾಹರಿಸಿದ್ದಾರೆ.
ಯಾವ ಸಮೂಹ ಶಕ್ತಿಯನ್ನೂ ಹೊಂದದ ವಿದ್ಯಾರ್ಥಿಗಳ ಕುರಿತು ಸಹಾನುಭೂತಿಯೂ ಮುಖ್ಯ. ಈ ಬಗ್ಗೆ ಸಂಬಂಧಿಸಿದವರಿಗೆ ಸೂಕ್ತ ಕಠಿಣ ನಿರ್ದೇಶನ ನೀಡಿದರೆ ಬದಲಾವಣೆ ಸಾಧ್ಯವೆಂಬ ವಿಶ್ವಾಸವನ್ನು ಎಸ್.ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸುತ್ತಿರುವ ಕ್ರಮವೇನು ಎಂದು ಈ ಪತ್ರದ ಮುಖೇನ ತಿಳಿಸಿರುವ ಸುರೇಶ್‌ಕುಮಾರ್, ಲೋಪ-ದೋಷಗಳನ್ನು ಎಳೆಎಳೆಯಾಗಿ ವಿವರಿಸುತ್ತಾ, 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಲಿತಾಂಶಗಳು ಆಡಳಿತ ವ್ಯವಸ್ಥೆಯ ಲೋಪದೋಷಗಳ ಜತೆಗೆ ನೀತಿ ನಿರೂಪಕರ ಜವಾಬ್ದಾರಿರಾಹಿತ್ಯವನ್ನು ಬಯಲು ಮಾಡಿದೆ ಎಂದಿದ್ದಾರೆ.
ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆ ಎಂದು ೋಷಿಸಿಕೊಳ್ಳುವುದು, ಮಕ್ಕಳನ್ನು ಸಿಸಿಟಿವಿಗಳ ಕಣ್ಗಾವಲೊಳಗೆ ಇರಿಸಿ ಭಯೋತ್ಪಾದನೆ ಮಾಡುವುದು, ನಂತರ ಕೃಪಾಂಕಗಳನ್ನು ನೀಡಿ ಲಿತಾಂಶ ಹೆಚ್ಚಿಸುವುದು ವ್ಯವಸ್ಥೆಯ ಕ್ರೂರ ಅಣಕವಾಗಿ ಕಂಡಿದೆ ಎಂದು ಚಾಟಿ ಬೀಸಿದ್ದಾರೆ.
ಕಳೆದ ಸಾಲಿನ ಪರೀಕ್ಷೆಗಳಿಗೆ ಹೋಲಿಸಿದರೆ ಶೇಕಡ 83 ರಿಂದ 53ಕ್ಕೆ ಕುಸಿದಿದೆ. ನಂತರ ಕೇವಲ ಕೃಪಾಂಕದ ಕಾರಣವೇ 1.79 ಲಕ್ಷ ವಿದ್ಯಾರ್ಥಿಗಳು ಪಾಸಾಗಿ ನಿಟ್ಟುಸಿರು ಬಿಟ್ಟಿದ್ದಾರೆ ಎಂದರೆ ಪರಿಸ್ಥಿತಿ ಗಂಭೀರತೆ ಎತ್ತಿ ತೋರಿಸುತ್ತದೆ.
ಅನೂಚಾನವಾಗಿ ನಡೆದು ಬಂದ ಪರೀಕ್ಷೆ ವ್ಯವಸ್ಥೆ ಬದಲಾಯಿಸುವಾಗ ಸಮಗ್ರ ಆಲೋಚನೆ ಕೂಡ ಮುಖ್ಯವಾಗುತ್ತದೆ. ಈಗಿನ ಬೆಳವಣಿಗೆ ಗಮನಿಸಿದರೆ ಇಷ್ಟು ದಿನಗಳ ಸರ್ಕಾರಗಳು ಕೇವಲ ಜನರನ್ನು ಸುಳ್ಳೇ ನಂಬಿಸುವ ಕೆಲಸ ಮಾಡುತ್ತಿದ್ದರು ಎಂಬ ಅನುಮಾನ ಉಂಟಾಗುತ್ತದೆ.
ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿಗಳಿಗೆ ನೀಡಲಾದ ಶಿಕ್ಷಣದ ಗುಣಮಟ್ಟ, ಕಲಿಕಾ ಸಿದ್ಧತೆ ಬಗ್ಗೆ ಚರ್ಚಿಸದೆ ಪರೀಕ್ಷಾ ಅಕ್ರಮ ತಡೆಯಲು ವೆಬ್‌ಕಾಸ್ಟ್ ನಿರ್ಣಯ ತೆಗೆದುಕೊಂಡು ಅನುಷ್ಠಾನಕ್ಕೆ ತರಲಾಗಿದೆ ಎಂದು ದೂರಿದ್ದಾರೆ.
ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಬೋಧನೆಗೆ ಮಹತ್ವ, ವಿದ್ಯಾಗಮ, ಕಲಿಕಾ ಚೇತರಿಕೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ಥೈರ್ಯ ಹೆಚ್ಚಿಸುವ ಕ್ರಮ ಕೈಗೊಂಡಿದ್ದನ್ನು ಸಿಎಂಗೆ ಬರೆದ ಪತ್ರದಲ್ಲಿ ಸುರೇಶ್‌ಕುಮಾರ್ ಉಲ್ಲೇಖಿಸಿದ್ದಾರೆ.