ನ್ಯೂಸ್

ಭಾರತ-ಪಾಕ್​ ವಿಭಜನೆ ವೇಳೆ ಬೇರ್ಪಟ್ಟ ಇಬ್ಬರು ಸ್ನೇಹಿತರು; 41 ವರ್ಷದ ನಂತ್ರ ಏನಾಯ್ತು ನೋಡಿ..

ನವದೆಹಲಿ: 1947 ರಲ್ಲಿ ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನದ ವಿಭಜನೆ ಮಾಡಿದ್ದರಿಂದ ಅನೇಕ ಕುಟುಂಬಗಳು ಬೇರ್ಪಟ್ಟವು. ಈ ವೇಳೆ ಅನೇಕ ಸ್ನೇಹಿತರು ಬೇರ್ಪಟ್ಟರು. ಇಬ್ಬರು ದೂರವಾದ ಸ್ನೇಹಿತರು ಮತ್ತೆ ಭೇಟಿಯಾದ ಕಥೆ ಪ್ರಸ್ತುತ ಚರ್ಚೆಯಲ್ಲಿದೆ.

ಇಬ್ಬರೂ ಸ್ನೇಹಿತರು ಗುಜರಾತ್‌ನ ದೀಸಾದಲ್ಲಿ ಒಟ್ಟಿಗೆ ಬೆಳೆದರು. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ, ಇಬ್ಬರು ಆತ್ಮೀಯ ಸ್ನೇಹಿತರು ಪರಸ್ಪರ ಬೇರ್ಪಟ್ಟರು. ಆ ಸಮಯದಲ್ಲಿ ಅವರು ಕೇವಲ 12 ವರ್ಷ ವಯಸ್ಸಿನವರಾಗಿದ್ದರು. ಈ ಇಬ್ಬರು ದೂರವಾದ ಸ್ನೇಹಿತರು ಮತ್ತೊಮ್ಮೆ ಸಿಗುತ್ತಾರೆ ಎಂದು ಅಂದುಕೊಂಡಿರಲಿಲ್ಲ.  ಬಾಲ್ಯದ ಆತ್ಮೀಯ ಗೆಳೆಯರಾದ ಸುರೇಶ್ ಕೊಠಾರಿ ಮತ್ತು ಎಜಿ ಶಾಕಿರ್ ಅವರ ಪುನರ್ಮಿಲನವು ವೈರಲ್ ಆಗಿದೆ.

ಅಕ್ಟೋಬರ್ 2023ರಲ್ಲಿ  ಇಬ್ಬರು ಭೇಟಿಯಾದರು.32 ವರ್ಷದ ಮೇಗನ್ ಕೊಠಾರಿ ಅವರು ತನ್ನ ಅಜ್ಜ ಸುರೇಶ್ ಕೊಠಾರಿ ತನ್ನ ಬಾಲ್ಯದ ಆತ್ಮೀಯ ಸ್ನೇಹಿತ ಎಜಿ ಶಾಕಿರ್ ಅವರನ್ನು ಅಮೆರಿಕದಲ್ಲಿ ಭೇಟಿಯಾದ ಸಂಪೂರ್ಣ ಘಟನೆಯನ್ನು ವಿಡಿಯೋದಲ್ಲಿ ಹೇಳಿದ್ದಾರೆ. ಇಬ್ಬರು ಸ್ನೇಹಿತರು ತಬ್ಬಿಕೊಂಡು ಕೈ ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಬ್ರೌನ್‌ಹಿಸ್ಟರಿ ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಹೃದಯಸ್ಪರ್ಶಿ ವೀಡಿಯೊದ ಶೀರ್ಷಿಕೆ ಹೀಗಿದೆ, 'ಭೌಗೋಳಿಕ ಮತ್ತು ರಾಜಕೀಯ ಅಡೆತಡೆಗಳ ಹೊರತಾಗಿಯೂ, ಅವರು ಇನ್ನೂ ಪರಸ್ಪರ ಹೊಂದಿರುವ ಪ್ರೀತಿ ಮತ್ತು ಗೌರವವು ಆಳವಾಗಿದೆ. ಯಾವುದೇ ಸರ್ಕಾರ ಅಥವಾ ಗಡಿಯಿಂದ  ಈ ಸ್ನೇಹವನ್ನು ತಡೆಯಲು ಸಾಧ್ಯವಿಲ್ಲ  ಎಂದು ಬರೆಯಾಲಗಿದೆ.

ಈ ಇಬ್ಬರು ಸ್ನೇಹಿತರು ಏಪ್ರಿಲ್ 2024 ರಲ್ಲಿ ನ್ಯೂಜೆರ್ಸಿಯಲ್ಲಿ ಸುರೇಶ್ ಕೊಠಾ ಅವರ 90 ನೇ ಹುಟ್ಟುಹಬ್ಬದಂದು ಮತ್ತೆ ಭೇಟಿಯಾಗುತ್ತಾರೆ ಎಂದು ಮೇಗನ್ ಹೇಳಿದ್ದಾರೆ. ಗಡಿಯಿಂದ ಬೇರೆಯಾದ ಈ ಸ್ನೇಹಿತರ ಸ್ಟೋರಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.