ನ್ಯೂಸ್

ಖಲಿಸ್ತಾನ್​ ಲಿಬರೇಷನ್​ ಫೋರ್ಸ್​ನ ಹರ್ಮೀತ್​ಸಿಂಗ್​ ಹತ್ಯೆ: ಪಾಕಿಸ್ತಾನದ ಲಾಹೋರ್​ ಬಳಿ ಕೊಲೆ

ಲಾಹೋರ್​: ಖಲಿಸ್ತಾನ್​ ಲಿಬರೇಷನ್​ ಫೋರ್ಸ್​ನ (ಕೆಎಲ್​ಎಫ್​) ಮುಖ್ಯಸ್ಥ ಹರ್ಮೀತ್ ಸಿಂಗ್ ಅಲಿಯಾಸ್​ ಹ್ಯಾಪಿ ಪಿಎಚ್​ಡಿ ಅನ್ನು ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಸ್ಥಳೀಯ ಗುಂಪು ಹತ್ಯೆ ಮಾಡಿದೆ.

ಮಾದಕ ವಸ್ತು ಕಳ್ಳಸಾಗಣೆಯಿಂದ ಬಂದ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಗುಂಪು ಪಾಕಿಸ್ತಾನದ ಲಾಹೋರ್​ ಬಳಿ ಇರುವ ಡೇರಾ ಚಹಲ್​ ಗುರುದ್ವಾರದಲ್ಲಿ ಹರ್ಮೀತ್ ಸಿಂಗ್ ನನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನದ ಪೊಲೀಸರು ತಿಳಿಸಿದ್ದಾರೆ.

ಹರ್ಮೀತ್ ಸಿಂಗ್ 2016-2017ರಲ್ಲಿ ಭಾರತದ ಪಂಜಾಬ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನಾಯಕರ ಹತ್ಯೆಯಲ್ಲಿ ಭಾಗಿಯಾಗಿದ್ದ.

ಅಲ್ಲದೆ ಪಾಕಿಸ್ತಾನ ಹಾಗೂ ಭಾರತದಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿ ಈತ 2 ರಾಷ್ಟ್ರಗಳಿಗೆ ಬೇಕಾದ ಪ್ರಮುಖ ಆರೋಪಿಯಾಗಿದ್ದ.

ಹರ್ಮಿಂದರ್ ಮಿಂಟೂ ಮರಣದ ನಂತರ ಹರ್ಮೀತ್ ಸಿಂಗ್ ಕೆಎಲ್​ಎಫ್ ಮುಖ್ಯಸ್ಥನ ಸ್ಥಾನ ವಹಿಸಿಕೊಂಡರು. ಹರ್ಮೀತ್ ಸಿಂಗ್ ಪಂಜಾಬ್​ನ ಅಮೃತಸರದ ಬಳಿ ಇರುವ ಚಿಹಿಹರ್ತಾದವರು. ಈತ ಪಿಎಚ್​ಡಿ ಪದವಿ ಪಡೆದಿರುವ ಹಿನ್ನೆಲೆಯಲ್ಲಿ ಹ್ಯಾಪಿ ಪಿಎಚ್​ಡಿ ಎಂಬ ಹೆಸರು ಬಂದಿದೆ. ಈತ 20 ವರ್ಷಗಳಿಂದ ಪಾಕಿಸ್ತಾನದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದಾನೆ.

ಭಾರತದ ಮಾಹಿತಿಯ ಮೇರೆಗೆ ಅಕ್ಟೋಬರ್‌ನಲ್ಲಿ ಇಂಟರ್​ ಪೋಲ್​ ಈತನ ವಿರುದ್ಧ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿತ್ತು. (ಏಜೆನ್ಸೀಸ್​)