ನ್ಯೂಸ್

ಅಂತ್ಯಸಂಸ್ಕಾರ ನಡೆದ 3 ಗಂಟೆ ನಂತ್ರ FIR ದಾಖಲಿಸಿದ್ದೇಕೆ? ಕೋಲ್ಕತ ಆಸ್ಪತ್ರೆ ವಿರುದ್ಧ ಸುಪ್ರೀಂಕೋರ್ಟ್​ ಕಿಡಿ

ನವದೆಹಲಿ: ದೇಶದೆಲ್ಲಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಭಾಯಿಸಿದ ರೀತಿಯನ್ನು ತೀವ್ರವಾಗಿ ಟೀಕಿಸಿದ ಸುಪ್ರೀಂಕೋರ್ಟ್​, ವೈದ್ಯರು ಸೇರಿದಂತೆ ಆರೋಗ್ಯ ಕ್ಷೇತ್ರದ ಉದ್ಯೋಗಿಗಳ ಸುರಕ್ಷತೆಯ ಶಿಫಾರಸಿಗಾಗಿ ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸುವುದಾಗಿ ಹೇಳಿದೆ.

ಕೋಲ್ಕತ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ಮಂಗಳವಾರ (ಆ.20) ವಿಚಾರಣೆ ನಡೆಸಿದ ಉನ್ನತ ನ್ಯಾಯಾಲಯ, ಘಟನೆ ನಡೆದ ಕೋಲ್ಕತ್ತದ ಆರ್​ಜಿ ಕರ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆಯ ಅಂತಿಮ ಸಂಸ್ಕಾರ ನಡೆದ 3 ಗಂಟೆಗಳ ಬಳಿಕ ಎಫ್​ಐಆರ್​ ದಾಖಲಿಸಲಾಗಿದೆ. ಇಷ್ಟೊಂದು ವಿಳಂಬವೇಕೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ​ ಕಿಡಿಕಾರಿತು.

ವೈದ್ಯೆಯ ಕೊಲೆಯಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಬಹಿರಂಗವಾಗಿದೆ. ಆದರೆ, ಎಫ್​ಐಆರ್​ ಅನ್ನು ರಾತ್ರಿ 11.45ಕ್ಕೆ ದಾಖಲಿಸಿರುವುದೇಕೆ? ಆಸ್ಪತ್ರೆಯ ಆಡಳಿತಾಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಸುಪ್ರೀಂಕೋರ್ಟ್​ ಪ್ರಶ್ನೆ ಮಾಡಿದೆ. ಅಲ್ಲದೆ, ತನ್ನ ಅಧಿಕಾರದ ಅಡಿಯಲ್ಲಿ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಲಾಗುತ್ತದೆ. ಇದರಲ್ಲಿ ವಿವಿಧ ಹಿನ್ನೆಲೆಯುಳ್ಳ ವೈದ್ಯರು ಇರಲಿದ್ದಾರೆ. ಅವರು ಕೆಲಸದ ಸುರಕ್ಷತಾ ಪರಿಸ್ಥಿತಿಗಳು ಮತ್ತು ಯುವ ಅಥವಾ ಮಧ್ಯವಯಸ್ಕ ವೈದ್ಯರು ತಮ್ಮ ಕೆಲಸದ ವಾತಾವರಣದಲ್ಲಿ ಸುರಕ್ಷಿತವಾಗಿರಲು ಭಾರತದಾದ್ಯಂತ ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಫೆಡರೇಶನ್ ಆಫ್ ರೆಸಿಡೆಂಟ್ಸ್ ಆಫ್ ಡಾಕ್ಟರ್ಸ್ ಅಸೋಸಿಯೇಷನ್ ​​(ಫೋರ್ಡಾ) ಮಧ್ಯಸ್ಥಿಕೆ ಮನವಿ ಸಲ್ಲಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ರಕ್ಷಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದೆ.

ಏನಿದು ಪ್ರಕರಣ?

ವಿರಾಮವಿಲ್ಲದೆ ಸುಮಾರು 36 ಗಂಟೆಗಳ ಕಾಲ ವಿಸ್ತರಿಸಿದ ಶಿಫ್ಟ್ ಮತ್ತು ಅಧ್ಯಯನದಿಂದ ಬಳಲಿದ ಬಳಿಕ ಆಗಸ್ಟ್​ 9ರಂದು ಆಸ್ಪತ್ರೆಯ ಸೆಮಿನಾರ್​ ರೂಮ್​ನಲ್ಲಿನ ವೇದಿಕೆಯ ಮೇಲೆ ಸಂತ್ರಸ್ತೆ ಮಲಗಿದ್ದಳು. ಈ ವೇಳೆ ಆಕೆಯ ಮೇಲೆ ಓರ್ವ ಅಥವಾ ಸಾಮೂಹಿಕವಾಗಿ (ಇನ್ನೂ ತನಿಖೆ ನಡೆಯುತ್ತಿದೆ) ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ ಬಳಿಕ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮರುದಿನ ಬೆಳಿಗ್ಗೆ ಸೆಮಿನಾರ್ ಹಾಲ್​ಗೆ ಬಂದ ಇಂಟರ್ನ್‌ಗಳು ಮತ್ತು ಸಹ ಸ್ನಾತಕೋತ್ತರ ಟ್ರೈನಿ ವೈದ್ಯರು ಆಕೆಯ ದೇಹವನ್ನು ಕಂಡಾಗ ಈ ಪ್ರಕರಣ ಬೆಳಕಿಗೆ ಬಂದಿತು. ಸಂತ್ರಸ್ತೆಯ ಮೃತದೇಹದ ಪಕ್ಕದಲ್ಲೇ ಲ್ಯಾಪ್‌ಟಾಪ್, ನೋಟ್‌ಬುಕ್ ಮತ್ತು ಸೆಲ್‌ಫೋನ್ ಹಾಗೇ ಇತ್ತು.

ಓರ್ವನ ಬಂಧನ

ಸದ್ಯ ಈ ಪ್ರಕರಣದಲ್ಲಿ ಸಂಜೋಯ್​ ರಾಯ್​ ಎಂಬಾತನನ್ನು ಆಗಸ್ಟ್ 10 ರಂದು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ 2019ರಿಂದ ಕೋಲ್ಕತ್ತ ಪೊಲೀಸರ ವಿಪತ್ತು ನಿರ್ವಹಣಾ ಗುಂಪಿನೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದನು. ನಂತರ, ಆತನನ್ನು ಪೊಲೀಸ್ ವೆಲ್​ಫೇರ್​ ಸೆಲ್​ಗೆ ವರ್ಗಾಯಿಸಲಾಯಿತು ಮತ್ತು ಆಸ್ಪತ್ರೆಯಲ್ಲಿನ ಪೊಲೀಸ್ ಔಟ್‌ಪೋಸ್ಟ್‌ಗೆ ನಿಯೋಜಿಸಲಾಯಿಗಿತ್ತು. ಈ ರಾಯ್, ಆಗಾಗ ಕೋಲ್ಕತ್ತ ಪೊಲೀಸ್ ಟೀ ಶರ್ಟ್ ಧರಿಸಿ ಅಧಿಕಾರಿಯಂತೆ ನಟಿಸುತ್ತಿದ್ದನು ಮತ್ತು ಬ್ಯಾರಕ್‌ಗಳಲ್ಲಿ ಉಳಿಯಲು ತಮ್ಮ ಸಂಪರ್ಕಗಳನ್ನು ಬಳಸುತ್ತಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಆಸ್ಪತ್ರೆಯಲ್ಲೇ ಈತ ದಂಧೆ ನಡೆಸುತ್ತಿದ್ದ. ರೋಗಿಗಳ ಸಂಬಂಧಿಕರಿಗೆ ಹಾಸಿಗೆ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆದಾಗ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಅರೋಪಿ ರಾಯ್, ಮೊಬೈಲ್ ಫೋನ್‌ನಲ್ಲಿ ಹಲವಾರು ಹಿಂಸಾತ್ಮಕ ಮತ್ತು ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿವೆ. ಈಗಾಗಲೇ ಆತ ಹಲವು ಬಾರಿ ಮದುವೆ ಆಗಿ ವಂಚನೆ ಮಾಡಿರುವ ಆರೋಪವೂ ಇದೆ.

ಭಾರಿ ಪ್ರತಿಭಟನೆ

ಈ ಭಯಾನಕ ಅಪರಾಧವು ದೇಶದೆಲ್ಲಡೆ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಪಶ್ಚಿಮ ಬಂಗಾಳ ಮತ್ತು ಭಾರತದ ಇತರ ಭಾಗಗಳಲ್ಲಿ ವೈದ್ಯರು ಮತ್ತು ನರ್ಸ್​ಗಳು ಭಾರಿ ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಸಿಬಿಐನಿಂದ ವಿಚಾರಣೆಗೆ ಒಳಪಡಿಸಲಾಗಿದೆ.

ಈ ಘಟನೆಗೆ ಪ್ರತಿಕ್ರಿಯೆಯಾಗಿ, ಪಶ್ಚಿಮ ಬಂಗಾಳ ಸರ್ಕಾರವು ಕೆಲಸದ ಸ್ಥಳಗಳಲ್ಲಿ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಘೋಷಿಸಿದೆ. ಈ ಕ್ರಮಗಳಲ್ಲಿ ಮಹಿಳೆಯರಿಗೆ ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಗೊತ್ತುಪಡಿಸಿದ ವಿಶ್ರಾಂತಿ ಕೊಠಡಿಗಳು ಮತ್ತು ಸಿಸಿಟಿವಿ ಮಾನಿಟರ್ ಒಳಗೊಂಡ ಸುರಕ್ಷಿತ ವಲಯಗಳ ಸ್ಥಾಪನೆಯನ್ನು ಒಳಗೊಂಡಿವೆ. (ಏಜೆನ್ಸೀಸ್​)