ನ್ಯೂಸ್

ಪ್ರಚಾರ ಜಾಸ್ತಿ ಅಭಿವೃದ್ಧಿ ನಾಸ್ತಿ; ಬಿಎಸ್ ವೈ ಟೀಕೆ | Cong govt utterly flap

ಮೃತ್ಯುಂಜಯ ಕಪಗಲ್

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಹುತೇಕ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಜನರ ಸಂಕಷ್ಟಗಳನ್ನು ಯಾರೂ ಕೇಳುವವರಿಲ್ಲ ಎಂಬಂಥ ದುಸ್ಥಿತಿ ಬಂದಿದೆ. ಕೇವಲ ಪ್ರಚಾರ ಜಾಸ್ತಿ, ಅಭಿವೃದ್ಧಿ ನಾಸ್ತಿಯಾಗಿದೆ ಎಂದು ಟೀಕಿಸಿದರು.

ನೀರಾವರಿ ಯೋಜನೆಗಳು ಸಂಪೂರ್ಣ ಸ್ಥಗಿತವಾಗಿವೆ. ಕರ್ನಾಟಕದ ಯಾವುದೇ ಮೂಲೆಯಲ್ಲಾದರೂ ಒಂದು ಕಿಮೀ ರಸ್ತೆ ಆಗುತ್ತಿರುವುದನ್ನು ಕಾಂಗ್ರೆಸ್ ಸರ್ಕಾರ ತೋರಿಸಲಿ ಎಂದು ಸವಾಲು ಹಾಕಿದರು.

ಅಲ್ಪಸಂಖ್ಯಾತರ ವಿರೋಧಿಗಳಲ್ಲ

ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಆದರೆ, ಅಲ್ಪಸಂಖ್ಯಾತರಿಗೆ ಮಿತಿ ಮೀರಿ ನೆರವು ಕೊಡುವುದು ಅಕ್ಷಮ್ಯ ಅಪರಾಧ. ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕಾದ ಈ ಸರ್ಕಾರವು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸುವ ಕೆಲಸದಲ್ಲಿ ತೊಡಗಿದ್ದು, ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.

ಈಗಲಾದರೂ ಸರ್ಕಾರ ಜಾಗೃತವಾಗಿ ಅಭಿವೃದ್ಧಿ ಕಡೆ ಗಮನ ಕೊಡಬೇಕು. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು.

ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದು ನೂರಕ್ಕೆ ನೂರು ಸತ್ಯ. ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ನುಡಿದರು. ಬಡವರು ಮನೆ ಬೇಕೆಂದರೂ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗಿದೆ. ಸರ್ಕಾರ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಲಿ ಎಂದು ಹೇಳಿದರು.

ಒಟ್ಟಾಗಿ ಮುಂದುವರಿಯುತ್ತೇವೆ

ಬಿಜೆಪಿ- ಜೆಡಿಎಸ್ ಬೇರೆಯಲ್ಲ; ನಾವು ಒಟ್ಟಾಗಿ ಮುಂದುವರೆಯುತ್ತೇವೆ. ಎಚ್.ಡಿ.ದೇವೇಗೌಡರು ಕೂಡ ಹಲವು ಬಾರಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಂಬಿಕೆ- ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ- ಜೆಡಿಎಸ್ ಮುಂದಿನ ದಿನಗಳಲ್ಲಿ ಒಟ್ಟಾಗಿ ಮುನ್ನಡೆದು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡುತ್ತೇವೆ ಎಂದರು.

ಅಸಮಾಧಾನಿತರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಯತ್ನವನ್ನು ನಾನು ಸ್ವಾಗತಿಸುವೆ. ಅಸಮಾಧಾನದಿಂದ ಯಾರೇ ಇದ್ದರೂ ಅವರ ಜೊತೆ ಮಾತನಾಡಲು ನಾನು ಸಿದ್ಧ. ಪ್ರತಿನಿತ್ಯ ಈ ಕಚೇರಿಗೆ ಬಂದು ಮಧ್ಯಾಹ್ನದ ವರೆಗೆ ಇಲ್ಲಿ ಇರಲು ನಿರ್ಧರಿಸಿದ್ದೇನೆ. ಪ್ರತಿ ವಾರ ಒಂದೆರಡು ಜಿಲ್ಲೆಗೆ ಭೇಟಿ ನೀಡುವೆ ಎಂದು ಯಡಿಯೂರಪ್ಪ ತಿಳಿಸಿದರು.