ಸಾಮಾನ್ಯ ಆರೋಗ್ಯ ತಪಾಸಣೆಗೆಂದು ವೈದ್ಯರ ಬಳಿ ಹೋದಾಗ ತಪ್ಪದೆ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ಏಕೆಂದರೆ ನಾಲಿಗೆಯು ದೇಹದ ಆರೋಗ್ಯದ ಸ್ಥಿತಿಯನ್ನು ಸೂಚಿಸುತ್ತದೆ. ಹಾಗಾದರೆ ದೇಹದಲ್ಲಾಗುವ ಬದಲಾವಣೆಗಳನ್ನು ನಾಲಿಗೆಯು ಯಾವುದೆಲ್ಲ ರೀತಿಗಳಿಂದ ಸೂಚಿಸುತ್ತದೆಂದು ತಿಳಿಯೋಣ.
ಜಿಯಾಗ್ರ್ಯಾಫಿಕ್ ಟಂಗ್: ನಾಲಿಗೆಯ ಮೇಲಿನ ತೊಟ್ಟುಗಳು ನಷ್ಟವಾಗಿ ಆ ಭಾಗವು ನಕ್ಷೆಯನ್ನು ಹೋಲುವುದರಿಂದ
ಹೇರಿ ಟಂಗ್: ನಾಲಿಗೆಯ ಮೇಲೆ ಕೂದಲಿನಂತೆ ಕಂಡುಬಂದು ಕೆಲವು ಬಾರಿ ನಾಲಿಗೆಯ ಬಣ್ಣ ಕೂಡ ಬದಲಾಗುವುದು. ಇದು ಸಾಮಾನ್ಯವಾಗಿ ಕಪ್ಪು ಅಥವಾ ಕಾಫಿ ಬಣ್ಣವನ್ನು ಹೋಲುತ್ತದೆ. ಬಾಯಿಯ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ, ನಾಲಿಗೆಯನ್ನು ಸ್ವಚ್ಛವಾಗಿರಿಸಲು ವಿಫಲವಾದಾಗ ಈ ರೀತಿ ಕಾಣುತ್ತದೆ. ಇದರೊಂದಿಗೆ ಬಾಯಿಯಿಂದ ಅಸಹಜ ದುರ್ವಾಸನೆ ಸಹ ಇರುತ್ತದೆ. ಅತಿಯಾದ ಧೂಮಪಾನ, ಹೆಚ್ಚು ಕಾಫಿ ಸೇವನೆ ಮತ್ತು ಅನಿಯತವಾಗಿ ತೆಗೆದುಕೊಳ್ಳುವ ರೋಗನಿರೋಧಕ ಔಷಧಗಳ ಅಡ್ಡಪರಿಣಪರಿಣಾಮಗಳಿಂದಾಗಿ ಈ ರೀತಿ ಉಂಟಾಗುತ್ತದೆ. ಹಲ್ಲುಗಳು ಮತ್ತು ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸುವ ಮೂಲಕ ಇದನ್ನು ಹತೋಟಿಯಲ್ಲಿಡಬಹುದು.
ವೈಟ್ ಪ್ಯಾಚಸ್ (ಬಿಳಿ ಮಚ್ಚೆಗಳು): ನಾಲಿಗೆಯ ಬಣ್ಣವು ಬಿಳಿಯಾಗಿದ್ದು ಅಥವಾ ನಾಲಿಗೆಯ ಮೇಲೆ ಬಿಳಿಯ ಲೇಪನವಿದ್ದಲ್ಲಿ ಸಾಮಾನ್ಯವಾಗಿ ಅದು ಬಾಯಿಯ ನೈರ್ಮಲ್ಯ ಅಥವಾ ಉದರಸಂಬಂಧಿ ಕಾಯಿಲೆಗಳನ್ನು ಸೂಚಿಸುತ್ತದೆ. ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದಲ್ಲಿ ಬಿಳಿಯ ಲೇಪನ ಉಂಟಾಗುವುದಲ್ಲದೆ ದುರ್ವಾಸನೆಯೂ ಸಹಜ. ಕೆಲವು ಬಾರಿ ಈ ರೀತಿಯ ಮಚ್ಚೆಗಳು ಸಾಮಾನ್ಯ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು, ಶಿಲೀಂಧ್ರಗಳಿಂದ ಉಂಟಾಗುವ ಸೋಂಕು candidiasisನಿಂದ ಹಿಡಿದು leukoplakia ಅಥವಾ lichen planus ಸಹ ಹೌದು, ಕೆಲವು ಸಂದರ್ಭಗಳಲ್ಲಿ ಇದು precancerous ಕೂಡ ಹೌದು.
ಸ್ಟ್ರಾಬೆರಿ ಟಂಗ್: ನಾಲಿಗೆಯು ಕೆಂಪಾಗಿ ಊದಿಕೊಂಡು, ನೋಡಲು ಸ್ಟ್ರಾಬೆರಿ ಹಣ್ಣನ್ನು ಹೋಲುವ ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಅನ್ನಾಂಗ ಬಿ 12 ಕೊರತೆಯಿಂದಾಗಿ ಅಥವಾ ಕೆಲವು ಔಷಧ, ಹಣ್ಣು ಮತ್ತು ತರಕಾರಿಗಳಿಂದಾಗಿ ಉಂಟಾಗುವ ಅಲರ್ಜಿಯಿಂದಲೂ ಈ ರೀತಿ ಕಾಣಬಹುದು. ಅಲ್ಲದೆ ಸ್ಕಾರ್ಲಿಟ್ ಫೀವರ್ ಇರುವವರಲ್ಲೂ ನಾಲಿಗೆಯು ಸ್ಟ್ರಾಬೆರಿಯಂತೆ ಕಾಣುತ್ತದೆ. ನಾಲಿಗೆ ಬೋಳಾಗಿ ಕೆಂಪಾಗಿದ್ದಲ್ಲಿ ಅದನ್ನು ನಾಲಗೆಯ ಉರಿಯೂತ ಎನ್ನುತ್ತಾರೆ. ರಕ್ತಹೀನತೆ ಇರುವವರಲ್ಲಿ ಇದು ಸಾಮಾನ್ಯ.
ಆರೋಗ್ಯಕರ ನಾಲಿಗೆಯ ಮೇಲ್ಮೈ ಒರಟಾಗಿದ್ದು ಸದಾ ತೇವವಾಗಿರುವುದಲ್ಲದೆ ತಿಳಿಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನಾಲಗೆಯಲ್ಲಿ ಯಾವುದೇ ರೀತಿಯ ನೋವು, ಉರಿಯೂತ, ಬಾವು ಅಥವಾ ಅಸಹಜ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಉತ್ತಮ.
ಹೇಗೆ ಹಲ್ಲುಗಳನ್ನು ಪ್ರತಿದಿನವೂ ಸ್ವಚ್ಛಗೊಳಿಸುತ್ತೇವೋ ಅದೇ ರೀತಿ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮುಖ್ಯ. ಅದಕ್ಕೆಂದೇ ನಾಲಗೆಯನ್ನು ಸ್ವಚ್ಛಗೊಳಿಸುವ ಸಾಧನ ಪ್ರತ್ಯೇಕವಾಗಿ ಲಭ್ಯವಿದ್ದು, ಉಪಯೋಗಿಸುವುದು ಒಳ್ಳೆಯದು. ಒಬ್ಬರು ಬಳಸಿದ್ದನ್ನು ಮತ್ತೊಬ್ಬರು ಬಳಸಬಾರದು. ಇದನ್ನು ಕೂಡ ಟೂತ್ಬ್ರಷ್ನಂತೆ 3-4 ತಿಂಗಳಿಗೊಮ್ಮೆ ಬದಲಾಯಿಸುವುದು ಸೂಕ್ತ. ಆರೋಗ್ಯಕರ ಆಹಾರಕ್ರಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನಾಲಿಗೆ ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಧೂಮಪಾನ ಮತ್ತು ಮದ್ಯಪಾನಗಳು ನಾಲಿಗೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತವೆ. ಪ್ರತಿ ಆರು ತಿಂಗಳಿಗೊಮ್ಮೆ ನಿಯತವಾಗಿ ದಂತವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದರಿಂದ ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.