ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ನ್ಯೂಸ್

ವಕ್ಫ್ ವಿರೋಧಿ ಹೋರಾಟಕ್ಕೆ ಟಾಂಗ್, ಇದು ಬಿಜೆಪಿ ನಾಟ್ಯ ಮಂಡಳಿಯ ಸುಳ್ಳು ಪ್ರಚಾರ ಎಂದ ಸಚಿವ ಎಂ.ಬಿ. ಪಾಟೀಲ...!

ವಿಜಯಪುರ: ಪಕ್ಷದ ಆಂತರಿಕ ತಿಕ್ಕಾಟ ಮರೆ ಮಾಚಲು ವಕ್ಫ್ ವಿವಾದ ಮುನ್ನೆಲೆಗೆ ತಂದ ಬಿಜೆಪಿ ನಾಟ್ಯ ಮಂಡಳಿ ಸತ್ಯವನ್ನು ಅಸತ್ಯವನ್ನಾಗಿಸಿ ಸುಳ್ಳು ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಕಿಡಿ ಕಾರಿದರು.

ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಜೋರಾಗಿದೆ. ‘ಯಡಿಯೂರಪ್ಪ ವರ್ಸೆಸ್ ಅದರ್ಸ್’ ಮಧ್ಯೆ ತಿಕ್ಕಾಟ ಶುರುವಾಗಿದೆ. ಗಮನಿಸಿ ನೋಡಿ ಈ ವಕ್ಫ್ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಆರ್.ಅಶೋಕ ಕಾಣಿಸಿಕೊಂಡಿಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಂದು ಫುಟ್‌ಪಾತ್ ಮೇಲೆ ಮಲಗಿ ನಾಟಕವಾಡಿದ್ದಾರೆ. ಇದೇ ಶೋಭಕ್ಕೆ ಹಿಂದೆ ಸಂಸತ್‌ನಲ್ಲಿ ವಕ್ಫ್ ಹಿತ ಬಯಸಿ ಪ್ರಶ್ನೆ ಕೇಳಿದ್ದು, ಆ ಕುರಿತ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ್ದಾರೆ. ಅಷ್ಟೇ ಅಲ್ಲದೇ, ಕೇಂದ್ರದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರನ್ನೂ ಕರೆತಂದು ಬಕ್ರಾ ಮಾಡಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸಿಎಂ ಸಿದ್ದರಾಮಯ್ಯರಾದಿಯಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಕ್ಫ್ ಸಚಿವ ಜಮೀರ್‌ಅಹ್ಮದ್ ಖಾನ್ ಹಾಗೂ ನಾನು ಬಹಳ ಸ್ಪಷ್ಟವಾಗಿ ಹೇಳಿದ್ದು, ‘ರೈತರ, ಮಠ-ಮಾನ್ಯಗಳ, ದೇವಸ್ಥಾನಗಳ ಒಂದೇ ಒಂದು ಇಂಚು ಜಮೀನು ಸಹ ವಕ್ಫ್‌ಗೆ ಹೋಗಲು ಬಿಡಲ್ಲ ಮತ್ತು ವಕ್ಫ್‌ನ ಒಂದೇ ಒಂದು ಇಂಚು ಆಸ್ತಿ ಅನಧಿಕೃತವಾಗಿ ಕಬಳಿಕೆಯಾಗಲು ಬಿಡಲ್ಲ’ ಎಂದರೂ ಬಿಜೆಪಿ ನಾಟ್ಯ ಮಂಡಳಿ ಮಠಾಧೀಶರು-ರೈತರನ್ನು ದಿಕ್ಕು ತಪ್ಪಿಸಿ ಫುಟ್‌ಪಾತ್ ಮೇಲೆ ಮಲಗಿಸಿ ನಾಟಕವಾಡುವ ಜರೂರತ್ತು ಏನಿತ್ತು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮತ್ತು ಕೇಂದ್ರದಲ್ಲಿ ಕಳೆದ 2014 ರಿಂದ ಅಧಿಕಾರದ್ದಲ್ಲಿರುವ ವಕ್ಫ್ ಆಸ್ತಿ ರಕ್ಷಣೆ ಕುರಿತು ಅಪಾರ ಕಾಳಜಿ ತೋರಿದ ಬಿಜೆಪಿ ಈಗ ವಿಜಯಪುರವನ್ನು ಹಿಂದುತ್ವದ ಪ್ರಯೋಗ ಶಾಲೆಯಾಗಿ ಉಪಯೋಗಿಸಲು ಹೊರಟಿದೆ. ಕಾರಣವಿಷ್ಟೇ-ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು ಅದಕ್ಕೆ ಪೂರಕವೆಂಬಂತೆ ಈ ನಾಟಕ ನಡೆದಿದೆ. ಹಿಂದು-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರಲಾಗುತ್ತಿದೆ. ದೇಶವನ್ನು ಹಿಂದು-ಮುಸ್ಲಿಂ ಆಧಾರದ ಮೇಲೆ ಒಡೆದಾಳು ನೀತಿ ರೂಪಿಸಲಾಗುತ್ತಿದೆ. ಇದೆಲ್ಲ ಹಿಂದು ಮಠಾಧೀಶರಿಗೆ ಗೊತ್ತಿಲ್ಲ. ಗೊತ್ತಾದರೆ ಅವರೇ ತಿರುಗಿ ಬೀಳುತ್ತಾರೆಂದರು.

ಬಿಜೆಪಿಯ ಇಬ್ಬಗೆ ನೀತಿ

ವಕ್ಫ್ ಕಾಯ್ದೆಯನ್ನೇ ತೆಗೆದು ಹಾಕಬೇಕು, ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಬೇಕೆನ್ನುವ ಬಿಜೆಪಿಗರಿಗೆ 2014ರ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುವುದಾಗಿ ಉಲ್ಲೇಖಿಸಿದ್ದು ಮರೆತು ಹೋಯಿತೇ?

2014 ರ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ನೀಡುವುದಾಗಿ ಹೇಳುತ್ತಾರಲ್ಲದೇ ವಕ್ಫ್‌ಗೆ ಶಕ್ತಿ ತುಂಬುವುದು, ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಉಲ್ಲೇಖಿಸಿದ್ದಾರೆ. ಆಗೆಲ್ಲ ಈ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದರು? ಸೋ ಕಾಲ್ಡ್ ಹಿಂದು ರಕ್ಷಕರು ಏನು ಮಾಡುತ್ತಿದ್ದರು? ಬಹುಶಃ ಯತ್ನಾಳರ ಗಮನಕ್ಕಿಲ್ಲವೆನ್ನಿಸುತ್ತದೆ. ಇದ್ದಿದ್ದರೆ ಬಹುಶಃ ರಾಜೀನಾಮೆ ಕೊಡುತ್ತಿದ್ದರೇನೋ ಎಂದು ಲೇವಡಿ ಮಾಡಿದರು.

ಇದೇ ಶೋಭಾ ಕರಂದ್ಲಾಜೆ ಅವರು, 2019 ಜು.18ರಂದು ಸಂಸತ್ ಅಧಿವೇಶನದಲ್ಲಿ ವಕ್ಫ್ ಹಿತರಕ್ಷಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿದ್ದ ಮುಕ್ತಾರ ಅಬ್ಬಾಸ ನಕ್ವಿ ನೀಡಿದ ಉತ್ತರ ಮರೆತು ಹೋಯಿತೇ? ಅಂದು ಸಚಿವರು, ರಾಜ್ಯ ವಕ್ಫ್ ಬೋರ್ಡ್‌ಗಳು, ಐಐಟಿ ರೂರ್ಕಿ ಹಾಗೂ ಎಎಂಯು (ಅಲಿಘರ್), ದೇಶ್ಯಾದಂತ ಶೇ.100 ರಷ್ಟು ವಕ್ಫ್ ಆಸ್ತಿಗಳನ್ನು ಹಂತಹಂತವಾಗಿ ಜಿಐಎಸ್ ಮ್ಯಾಪಿಂಗ್ ಮತ್ತು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಶೇ.85 ರಷ್ಟು ಕೆಲಸ ಪೂರ್ಣವಾಗಿದ್ದು, ಸಮರೋಪಾದಯಲ್ಲಿ ಅತಿಕ್ರಮಣ ತೆಗೆದು ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದರು.

ಮುಂದುವರಿದು ಕೇಂದ್ರ ವಕ್ಫ್ ಕೌನ್ಸಿಲ್ (ಸಿ.ಡಬ್ಲ್ಯೂ.ಸಿ) ಮೂಲಕ ರಾಜ್ಯ ವಕ್ಫ್ ಮಂಡಳಿಗಳಿಗೆ ಹಣಕಾಸಿನ ನೆರವು ಒದಗಿಸಲಾಗಿದೆ. ಆಸ್ತಿಗಳ ಡೇಟಾ ನಮೂದಿಸಲು ವಕ್ಫ್ ಮ್ಯಾನೇಜಮೆಂಟ್ ಸಿಸ್ಟಮ್ ಆಫ್ ಇಂಡಿಯಾ (ಡಬ್ಲ್ಯೂಎಎಂಎಸ್‌ಐ) ಪೋರ್ಟಲ್ ಅಭಿವೃದ್ಧಿ ಪಡಿಸಿದೆ ಎಂದಿದ್ದರು. ನಿರ್ವಹಣೆ ಮತ್ತು ಮೂಲ ಸೌಕರ್ಯಕ್ಕಾಗಿ ಹಣಕಾಸಿ ನೆರವುದು ನೀಡಿವುದು ಸೇರಿದಂತೆ ಒಟ್ಟಾರೆ ವಕ್ಫ್ ಹಿತರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ್ದು ನೆನಪಿಲ್ಲವೇ? ಆಗಿದ್ದ ಕಾಳಜಿ ಈಗೇಕಿಲ್ಲ? ಕೇವಲ ಕಾಂಗ್ರೆಸ್ ಮೇಲೆ ದೂರುವುದೇಕೆ? ಎಂದರು.

ದಾಖಲೆಗಳ ಬಿಡುಗಡೆ

ಬಿಜೆಪಿ ಅವಧಿಯಲ್ಲಿ ವಕ್ಫ್‌ಗೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆಗಳು, ಸರ್ಕಾರದ ಆದೇಶಗಳು, ಆಸ್ತಿಗಳ ಇಂದೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆ ಬಿಡುಗಡೆಗೊಳಿಸಿದ ಸಚಿವ ಎಂ.ಬಿ. ಪಾಟೀಲರು, ದೇವರಹಿಪ್ಪರಗಿಯ ಮಣ್ಣೂರಿನಲ್ಲಿ ಮುರುಗೇಂದ್ರ ಶಿವಪ್ಪ ಖ್ಯಾಡಿ, ಮಾಶಾಬಿ ಮುಲ್ಲಾ ಎಂಬುವರ ಜಮೀನು, ಸುಭಾಷ ತಮ್ಮಣ್ಣ ಆನೆಗುಂದಿ, ನಿಂಗಪ್ಪ ಶಿರಶ್ಯಾಡ ಇವರ ಜಮೀನು ಸಹ ಇಂದೀಕರಣ ಮಾಡಿದ ದಾಖಲೆ ಪ್ರದರ್ಶಿಸಿದರು.

ಬಿಜೆಪಿ ಸರ್ಕಾರ ಹೊರಡಿಸಿದ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ 2020 ಜ.4ರಂದು ಹೊರಡಿಸಿದ ಸುತ್ತೋಲೆ, ಅಕ್ರಮವಾಗಿ ಕಬಳಿಕೆ ಮಡಿಕೊಂಡ ಆಸ್ತಿಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ 2010 ರಲ್ಲಿ ಹೊರಡಿಸಿದ ಸುತ್ತೋಲೆ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆ ಕ್ರಮಬದ್ದಗೊಳಿಸಲು ಕಲಬುರಗಿಯ ಆಯುಕ್ತ ರಜನೀಶ ಮೂಲಕ 2011 ಏ.2ರಂದು ಹೊರಡಿಸಿದ ಸುತ್ತೋಲೆ, ಭೂಮಿ ತಂತ್ರಾಂಶದಲ್ಲಿ ಫ್ಲಾೃಗಿಂಗ್ ಮಾಡಲು ಕವಿತಾ ರಾಣಿ ಮೂಲಕ ಹೊರಡಿಸಿದ 2020 ಆ.29ರ ಸುತ್ತೋಲೆ ಹೀಗೆ ಇನ್ನೂ ಅನೇಕ ಸುತ್ತೋಲೆಗಳು, ಆದೇಶಗಳನ್ನು ಸಚಿವರು ಪ್ರದರ್ಶನ ಮಾಡುತ್ತಾ, ಇದೆಲ್ಲ ಕನ್ಹೇರಿಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೂ ಗೊತ್ತಿಲ್ಲವೆನ್ನಿಸುತ್ತದೆ. ಅವರಿಗೂ ಮನವರಿಕೆ ಮಾಡಿಕೊಡಲಾಗುವುದು. ಸತ್ಯ ಮನವರಿಕೆಯಾದರೆ ಅವರೇ ಬಿಜೆಪಿ ವಿರುದ್ಧ ತಿರುಗಿಬೀಳುವರು ಎಂದರು.

ನಕಲಿ ಹಿಂದುತ್ವ ಬಿಡಿ

ಬಿಜೆಪಿಗರು ತಾವು ಅಧಿಕಾರದಲ್ಲಿದ್ದಾಗ ಹಿಂದು ವಿರೋಧಿ ನೀತಿ ಅನುಸರಿಸಿ, ಈಗ ನಾವು ಹಿಂದುಗಳ ಪರವಾಗಿದ್ದೇವೆ ಎಂದು ಫೋಸ್ ಕೊಡುತ್ತಿದ್ದಾರೆ. ಇವರ ಈ ಎಲ್ಲ ದ್ವಂದ್ವ ನಿಲುವುಗಳ ಕುರಿತು ಬುಕ್‌ಲೆಟ್ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ, ಈ ವಿಚಾರಗಳು ಗೊತ್ತಿಲ್ಲದ ಮುಗ್ದ ಸ್ವಾಮೀಜಿಗಳು ಬಿಜೆಪಿ ಅವರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಎಲ್ಲ ಸ್ವಾಮೀಜಿಗಳಿಗೆ ನಿಜಾಂಶ ಕುರಿತ ದಾಖಲೆಗಳನ್ನು ತಲುಪಿಸುತ್ತೇವೆ ಎಂದರು.

ಬಿ.ಎಲ್. ಸಂತೋಷನಂಥವರು ಬಸವಾದಿ ಶರಣರ ಆಶಯಗಳಿಗೆ ಧಕ್ಕೆ ತರಲು ಹೊರಟಿದ್ದಾರೆ. ವಚನ ದರ್ಶನದ ಮೂಲಕ ನಮ್ಮ ಅಸ್ಮಿತೆಗೆ ಕೈ ಹಾಕಿದ್ದಾರೆ. ಅವರಿಗೆ ವಚನಗಳ ನಿಜ ದರ್ಶಣ ಮಾಡಿಸಲಾಗುವುದು. ನಿಮ್ಮ ವೇದಗಳ ಅಸ್ಮಿತೆ ಬಗ್ಗೆ ನಮ್ಮ ತಕರಾರಿಲ್ಲ ಆದರೆ ನಮ್ಮ ವಚನಗಳ ಅಸ್ಮಿತೆಗೆ ಧಕ್ಕೆ ತಂದರೆ ಸಹಿಸಲ್ಲ ಎಂದರು.

ಮಾಜಿ ಶಾಸಕ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲಹಮೀದ ಮುಶ್ರೀಫ್ ಉಪಸ್ಥಿತರಿದ್ದರು.