ನ್ಯೂಸ್

ಟೊಮ್ಯಾಟೊ ಆವಕ ಭರಪೂರ

Kolar

ಕೋಲಾರ : ಎಪಿಎಂಸಿಯಲ್ಲಿ ಟೊಮ್ಯಾಟೊ ಆವಕ ಜಾಸ್ತಿಯಾಗುತ್ತಿರುವುದರಿಂದ ಸ್ಥಳಾವಕಾಶದ ಅಭಾವದಿಂದಾಗಿ ಕಿಷ್ಕಿಂಧೆಯಂತಹ ವಾತಾವರಣ ನಿರ್ಮಾಣವಾಗಿದ್ದು, ಆಕ್ಷೇಪಣೆ ಹಿನ್ನೆಲೆಯಲ್ಲಿ ಪ್ರಾಂಗಣದ ಹೊರಗಡೆ ಕೈಗೆತ್ತಿಕೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿ ಮುಂದುವರಿಸುವ ವಿಚಾರದಲ್ಲಿ ಜು.27ರ ಸಭೆಯಲ್ಲಿ ತೀರ್ಮಾನ ತೆಗದುಕೊಳ್ಳಲು ಆಡಳಿತ ಸಮಿತಿ ನಿರ್ಧರಿಸಿದೆ.

ಏಷ್ಯಾದಲ್ಲೇ ಟೊಮ್ಯಾಟೊ ಮಾರುಕಟ್ಟೆಯಲ್ಲಿ ನಾಸಿಕ್‌ಗೆ ಪ್ರಥಮ ಸ್ಥಾನವಾದರೆ 2ನೇ ಸ್ಥಾನ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ. ವರ್ಷದ 365 ದಿನವೂ ಟೊಮ್ಯಾಟೊ ವಹಿವಾಟು ನಡೆಯುವ ಪ್ರಮುಖ ಮಾರುಕಟ್ಟೆ. ದೇಶದ ದಕ್ಷಿಣ, ಉತ್ತರ ಭಾರತ ಸೇರಿ ಅಪರೂಪಕ್ಕೊಮ್ಮೆ ಗಡಿಯಾಚೆಗಿನ ಬಾಂಗ್ಲಾದೇಶಕ್ಕೂ ಇಲ್ಲಿಂದಲೇ ಟೊಮ್ಯಾಟೊ ರ‌್ತಾಗುವುದೂ ಉಂಟು.

ಎಪಿಎಂಸಿ ಆರಂಭವಾಗಿದ್ದು 1979ರ ಜೂ. 8ರಂದು. ಕೋಲಾರ-ಬೆಂಗಳೂರು ರಸ್ತೆಯ ಪಕ್ಕದಲ್ಲಿ 23.31 ಗುಂಟೆ ಎಕರೆ ವಿಸ್ತೀರ್ಣ ಹೊಂದಿದ್ದು, 19 ಎಕರೆ ಪ್ರದೇಶವನ್ನು ಎಪಿಎಂಸಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿದ್ದು, ನೂರಾರು ಮಂಡಿಗಳು ಕಾರ್ಯನಿರ್ವಹಿಸುತ್ತಿವೆ. ಟೊಮ್ಯಾಟೊ ವಹಿವಾಟಿನ ಕೇಂದ್ರ ಸ್ಥಾನ, ಇತರ ಎಲ್ಲ ರೀತಿಯ ತರಕಾರಿಗಳ ವಹಿವಾಟು ಇಲ್ಲಿ ನಡೆಯುತ್ತದೆ.

ಆವಕ ಅಧಿಕ: ಜೂನ್ ತಿಂಗಳಲ್ಲಿ ಎಪಿಎಂಸಿಗೆ ಒಟ್ಟು 9,37,863 ಕ್ವಿಂಟಾಲ್ ಟೊಮ್ಯಾಟೊ ಅವಕ ಆಗಿದ್ದರೆ, ಜುಲೈ 1ರಿಂದ 21ರ ಅವಧಿಗೆ 7,44,678 ಕ್ವಿಂಟಾಲ್ ಅವಕ ಆಗಿದೆ. ಜು. 1ರಂದು 4171 ಕ್ವಿಂಟಾಲ್‌ನಷ್ಟೇ ಅವಕ ಆಗಿತ್ತು. ಕಳೆದ 15 ದಿನಗಳಲ್ಲಿ ಆವಕದ ಪ್ರಮಾಣ 34,764 ಕ್ವಿಂಟಾಲ್‌ಗೆ ಏರಿಕೆಯಾಗಿತ್ತು. ಕಳೆದ ಶನಿವಾರ ಈವರೆಗಿನ ಗರಿಷ್ಠ 40,249 ಕ್ವಿಂಟಾಲ್ ಆವಕ ಆಗಿತ್ತು. ಬುಧವಾರ ಬಕ್ರೀದ್ ಹಿನ್ನೆಲೆಯಲ್ಲಿ ಅವಕ ಸ್ವಲ್ಪ ಕಡಿಮೆ ಇತ್ತಾದರೂ 34,979 ಕ್ವಿಂಟಾಲ್ ಅವಕವಾಗಿದೆ.

ಜಾಗದ್ದೇ ಸಮಸ್ಯೆ: ಎಪಿಎಂಸಿಯಲ್ಲಿ 70ಕ್ಕೂ ಅಧಿಕ ಟೊಮ್ಯಾಟೊ ಮಂಡಿಗಳಿದ್ದು, 80-90 ಮಂದಿ ಟೊಮ್ಯಾಟೊ ವ್ಯಾಪಾರಸ್ಥರಿದ್ದಾರೆ. ಜಿಲ್ಲೆ ಸೇರಿ ನೆರೆಯ ಚಿಕ್ಕಬಳ್ಳಾಪುರ, ಆಂಧ್ರಪ್ರದೇಶದಿಂದಲೂ ಇಲ್ಲಿಗೆ ಟೊಮ್ಯಾಟೊ ಬರುತ್ತದೆ. ಪ್ರಾಂಗಣದಲ್ಲಿ ಸ್ಥಳಾವಕಾಶ ಕೊರತೆಯಿಂದ ಲೋಡಿಂಗ್, ಅನ್‌ಲೋಡಿಂಗ್ ಸಮಸ್ಯೆ ಆಗುತ್ತಿದೆ. ಏರು ಹಂಗಾಮಿನಲ್ಲಿ ನಿತ್ಯ 100ಕ್ಕೂ ಅಧಿಕ ಲಾರಿ ಬರುವುದರಿಂದ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲ.

ಕಾಮಗಾರಿ ಸ್ಥಗಿತ: ಎಪಿಎಂಸಿ ಬಳಿಯ ಎದುರಿನ ರಾಷ್ಟ್ರೀಯ ಹೆದ್ದಾರಿ 75ರ ಸೇವಾ ರಸ್ತೆ, ಮಾಲೂರು ರಸ್ತೆಯುದ್ದಕ್ಕೂ ಲಾರಿಗಳು ಸಾಲುಗಟ್ಟಿ ನಿಲ್ಲುವಂತಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಮಸ್ಯೆ ಬಗೆಹರಿಸಲು ಕಾನೂನಿನಡಿ ಇರುವ ಅವಕಾಶ ಬಳಸಿಕೊಂಡು ಮಾಲೂರು ಬೈಪಾಸ್‌ನ ನರಸಿಂಹಸ್ವಾಮಿ ದೇವಾಲಯದಿಂದ ಎಪಿಎಂಸಿ ಮುಖ್ಯದ್ವಾರದವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇವಾ ರಸ್ತೆಯಲ್ಲಿನ ಮಳೆ ನೀರು ಚರಂಡಿ ತೆಗೆದು ಪ್ರಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡು 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆಚರಂಡಿ ನಿರ್ಮಿಸಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಸಮಿತಿ ನಿರ್ಧರಿಸಿ ಕಾಮಗಾರಿ ಆರಂಭಿಸಿತ್ತು.

ಹೆದ್ದಾರಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಇಲ್ಲದೆ ಪ್ರಾಂಗಣದ ಹೊರಗೆ ಕಾಮಗಾರಿ ನಡೆಸಲು ಸಮಿತಿ ಸದಸ್ಯರೊಬ್ಬರು ಆಕ್ಷೇಪಿಸಿದ್ದರಿಂದ ಕೆಲಸ ನಿಲ್ಲಿಸಲಾಯಿತು. ಈ ಮಧ್ಯೆ ವಿಷಯ ಜಿಲ್ಲಾಧಿಕಾರಿವರೆಗೆ ತಲುಪಿತ್ತು. ಹೆದ್ದಾರಿ ಪ್ರಾಧಿಕಾರದ ಜತೆ ಚರ್ಚಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಧಿಕಾರದಿಂದಲೇ ಕಾಮಗಾರಿ ನಡೆಸಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಈಡೇರಿಲ್ಲ ಜಾಗದ ಸಮಸ್ಯೆ: ಪ್ರಾಂಗಣದಲ್ಲಿ ಸ್ಥಳಾವಕಾಶ ಕೊರತೆಯಿಂದ ಹೊರಗಡೆ ಮಾಲೂರು ರಸ್ತೆ, ಬೆಂಗಳೂರು ರಸ್ತೆಯ ಖಾಸಗಿ ಜಾಗದಲ್ಲಿ ಟೊಮ್ಯಾಟೊ ವಹಿವಾಟು ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಮಾರುಕಟ್ಟೆ ವಿಸ್ತರಣೆಗೆ 30ರಿಂದ 40 ಎಕರೆಗೆ ಒಂದೂವರೆ ದಶಕಗಳಿಂದ ಇಟ್ಟಿರುವ ಬೇಡಿಕೆ ಇನ್ನೂ ಈಡೇರಿಲ್ಲ. ಮಡೇರಹಳ್ಳಿ ಬಳಿ ಅರಣ್ಯ ಇಲಾಖೆಯ ಜಮೀನು ಗುರುತಿಸಲಾಗಿದ್ದು, ವಶಕ್ಕೆ ಪಡೆಯುವ ಸಂಬಂಧ ಪ್ರಕ್ರಿಯೆ ಮುಂದುವರಿದಿದೆ.

ಕಳೆದ ಕೆಲ ದಿನಗಳಿಂದ ಟೊಮ್ಯಾಟೊ ಆವಕ ಹೆಚ್ಚಾಗುತ್ತಿದ್ದು, ಜಾಗದ ಸಮಸ್ಯೆ ಇದೆ. ಪ್ರಸ್ತುತ ಒರಿಸ್ಸಾ, ಛತ್ತೀಸ್‌ಗಢ, ತಮಿಳುನಾಡು, ಗುಜರಾತ್, ಪಶ್ಚಿಮಬಂಗಾಳ ಇನ್ನಿತರೆಡೆ ಟೊಮ್ಯಾಟೊ ರವಾನೆಯಾಗುತ್ತಿರುವುದರಿಂದ ಧಾರಣೆಯಲ್ಲಿ ಏರಿಕೆ ಕಂಡಿದೆ. ಮಳೆಯಿಂದಾಗಿ ಟೊಮ್ಯಾಟೊ ಗುಣಮಟ್ಟ ಕಳೆದುಕೊಂಡರೆ ದರ ಕುಸಿತದ ಸಾಧ್ಯತೆ ಇದೆ.

ಜಿ.ಪಿ. ವಸೀಂ, ಟೊಮ್ಯಾಟೊ ಖರೀದಿದಾರ, ಕೋಲಾರ

ಎಪಿಎಂಸಿಗೆ ಮಡೇರಹಳ್ಳಿ ಬಳಿ 35 ಎಕರೆ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದೆ. ಸೇವಾ ರಸ್ತೆ ಪಕ್ಕದ ಸಮಿತಿಯಿಂದ ರಸ್ತೆ, ಚರಂಡಿ ಅಭಿವೃದ್ಧಿಪಡಿಸುವ ಸಂಬಂಧ ಹೆದ್ದಾರಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿದೆ. ಜು 27ರಂದು ನಡೆಯುವ ಸಮಿತಿ ಸಭೆಯಲ್ಲಿ ಕಾಮಗಾರಿ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ