ನ್ಯೂಸ್

ಅಗತ್ಯ ವಸ್ತುಗಳ ಬೆಲೆ ಏರಿಕೆ; ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ ಟೊಮ್ಯಾಟೊ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಯಾಗುತ್ತಲೇ ಇವೆ. ಇದೀಗ ಟೊಮ್ಯಾಟೊ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ 20-30 ರೂಪಾಯಿ ಇದ್ದ ಟೊಮ್ಯಾಟೊ ದರ, ಈಗ ಏಕಾಏಕಿ 130(Per KG) ರೂಪಾಯಿ ಆಗಿದೆ. ಕೆ.ಆರ್​.ಮಾರ್ಕೆಟ್​ನ ಕೆಲ‌ ಅಂಗಡಿಗಳಲ್ಲಿ ಕೆ.ಜಿಗೆ 120 ರೂಪಾಯಿಯಂತೆ ಟೊಮ್ಯಾಟೊ ಮಾರಾಟವಾಗುತ್ತಿದೆ.

ಬೆಂಗಳೂರಿನ ಬಹುತೇಕ ಕಡೆ ನಿನ್ನೆ ಟೊಮ್ಯಾಟೊ ಬೆಲೆ 80 ರೂ. ಇತ್ತು. ಇದೀಗ ಏಕಾಏಕಿ 20-30 ರೂ. ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಹಿನ್ನೆಲೆ ಜನರು ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಎರಡೇ ದಿನದಲ್ಲಿ ನಾಟಿ‌ ಟೊಮ್ಯಾಟೊ ದರ 70 ರೂ. ಏರಿಕೆ!

ನಾಟಿ‌ ಟೊಮ್ಯಾಟೊ 110 ರೂ. ಹಾಗೂ ಸೀಡ್ ಲೆಸ್ ಟೊಮ್ಯಾಟೊ 120 ರೂ.ಗೆ ಮಾರಾಟವಾಗುತ್ತಿದೆ. ನಿನ್ನೆ ನಾಟಿ ಟೊಮ್ಯಾಟೊ 60 ರೂ. ಇತ್ತು‌. ಎರಡೇ ದಿನದಲ್ಲಿ ನಾಟಿ‌ ಟೊಮ್ಯಾಟೊ ದರ 70 ರೂಪಾಯಿ ಏರಿಕೆಯಾಗಿದೆ. ಸೀಡ್ ಲೆಸ್ ಟೊಮ್ಯಾಟೊ ದರ ಎರಡೇ ದಿನದಲ್ಲಿ 80 ರೂಪಾಯಿ ಹೆಚ್ಚಳವಾಗಿದೆ.

ಟೊಮ್ಯಾಟೊ ಇಳುವರಿಗೆ ಇಲ್ಲದೆ ರೈತರು ಕಂಗಾಲು!

ತಿಂಗಳ ಹಿಂದೆ ಕೆ.ಜಿಗೆ ಹತ್ತು ರೂಪಾಯಿ ಇದ್ದಾಗ 70 ಟನ್ ಟೊಮ್ಯಾಟೊ ಇಳುವರಿ ಬಂದಿತ್ತು. ಈಗ ಎಕರೆಗೆ ಈಗ ಕೇವಲ 36 ಟನ್ ಇಳುವರಿ ಬರುತ್ತಿದೆ. ಹೆಚ್ಚಿನ ಬಿಸಿಲು ಇರುವ ಕಾರಣ ಇಳುವರಿ ಕಡಿಮೆಯಾಗಿದೆ. ಬಿಸಿಲು ಹೆಚ್ಚಾಗಿ, ಗಿಡಗಳು ಬಾಡಿ ಹೋಗುತ್ತಿವೆ.

ಮೇ ತಿಂಗಳಿನಲ್ಲಿ ಬಂದ ಅಕಾಲಿಕ‌ ಮಳೆಯಿಂದ ಗಿಡದಲ್ಲಿದ್ದ ಹೂವು ಉದುರಿ ಹೋಗಿದೆ. ಕೆಲ ಗಿಡಗಳು ರೋಗ ಬಂದು ಸತ್ತು ಹೋಗಿವೆ. ಇದೀಗ ಸರಿಯಾದ ಮಳೆ ಇಲ್ಲದೆ, ಗಿಡ ಬಾಡಿದ್ದು ಇಳುವರಿ ಕುಸಿತವಾಗಿದೆ ಎಂದು ಚನ್ನಪಟ್ಟಣದ ರೈತರೊಬ್ಬರು ದಿಗ್ವಿಜಯ ನ್ಯೂಸ್​ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.