ಆಂಧ್ರಪ್ರದೇಶ: ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಖತ್ ಬ್ಯುಸಿಯಾಗಿರುವ ಪವನ್ ಕಲ್ಯಾಣ್ರನ್ನು ಟಾಲಿವುಡ್‌ನ ಹೆಸರಾಂತ ನಿರ್ಮಾಪಕರು ನಾಳೆ (ಜೂ.24) ಮುಖಾಮುಖಿ ಭೇಟಿಯಾಗಲಿದ್ದಾರೆ. ಪ್ರತಿನಿತ್ಯ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ರಾಜ್ಯದಲ್ಲಿ ಪ್ರಸ್ತುತ ಇರುವ ಬಹುವಿಧದ ಸಮಸ್ಯೆಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಿರುವ ಡಿಸಿಎಂ, ಇದೀಗ ಚಿತ್ರರಂಗದ ನಿರ್ಮಾಪಕರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ.
ತಮ್ಮ ನೆರವು ಪಡೆಯಲು ಬಂದ ಜನಸಾಮಾನ್ಯರನ್ನು ನೇರವಾಗಿ ಭೇಟಿ ಮಾಡಿ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುತ್ತಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ನಾಳೆ ಮಧ್ಯಾಹ್ನ ಟಾಲಿವುಡ್‌ನ ಉನ್ನತ ನಿರ್ಮಾಪಕರನ್ನು ವಿಜಯವಾಡದಲ್ಲಿರುವ ತಮ್ಮ ಕ್ಯಾಂಪ್ ಕಚೇರಿಯಲ್ಲಿ ಭೇಟಿ ಮಾಡಲಿದ್ದಾರೆ. ಈ ಸಭೆಯಲ್ಲಿ ಅಶ್ವಿನಿ ದತ್, ಚೈನಾ ಬಾಬು, ನವೀನ್ ಯೆರ್ನೇನಿ, ರವಿಶಂಕರ್, ನಾಗ ವಂಶಿ, ಟಿಜಿ ವಿಶ್ವಪ್ರಸಾದ್, ವಿವೇಕ್ ಕೂಚಿಬೋಟ್ಲ, ತೆಲುಗು ಫಿಲಂ ಚೇಂಬರ್ ಅಧ್ಯಕ್ಷ ದಿಲ್ ರಾಜು, ದಾಮೋಧರ್ ಪ್ರಸಾದ್, ಭೋಗವಲ್ಲಿ ಪ್ರಸಾದ್, ಡಿವಿವಿ ದಾನಯ್ಯ ಭಾಗವಹಿಸಲಿದ್ದಾರೆ.
2024ರ ಆಂಧ್ರಪ್ರದೇಶ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ಮೈತ್ರಿ ಸರ್ಕಾರವನ್ನು ಅಭಿನಂದಿಸುವುದು ಹಾಗೂ ಈ ಹಿಂದಿನ ಸರ್ಕಾರದ ನಿರ್ಧಾರಗಳು ಮತ್ತು ನೀತಿಗಳಿಂದಾಗಿ ತೆಲುಗು ಚಿತ್ರರಂಗವು ಪ್ರಸ್ತುತ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಚರ್ಚಿಸುವುದು ನಾಳಿನ ಸಭೆಯ ಮುಖ್ಯ ಉದ್ದೇಶವಾಗಿದೆ. ಟಿಕೆಟ್ ದರದಲ್ಲಿನ ಗೊಂದಲ ಮತ್ತು ಚಿತ್ರಮಂದಿರಗಳು ಎದುರಿಸುತ್ತಿರುವ ಸಮಸ್ಯೆಗಳಂತಹ ಪ್ರಮುಖ ವಿಷಯಗಳನ್ನು ಈ ಸಭೆಯಲ್ಲಿ ಪವನ್ ಕಲ್ಯಾಣ್ ಅವರ ಗಮನಕ್ಕೆ ತರಲಾಗುವುದು ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).