ನ್ಯೂಸ್

'ಕಾಂತಾರ ಪ್ರೀಕ್ವೆಲ್​' ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಈ ಚಿತ್ರರಂಗದ ಸ್ಟಾರ್ ನಟಿ?

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ನ ಸ್ಟಾರ್ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಗೊಂಡು ಬ್ಲಾಕ್​ಬಸ್ಟರ್ ​ಸಿನಿಮಾವಾಗಿ ಹೊರಹೊಮ್ಮಿತು. ಇದೀಗ ಕಾಂತಾರ: ಎ ಲೆಜೆಂಡ್ ಭಾಗ 1ರ ಸಿನಿಮಾ ಸೆಟ್ಟೇರಿದ್ದು, ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.

ಇತ್ತೀಚಿನ ವರದಿ ಪ್ರಕಾರ, ಟಾಲಿವುಡ್​ ಅಂಗಳದಲ್ಲಿ ಬಿಡುಗಡೆಗೊಂಡಿದ್ದ 'ಮಗಳವಾರಂ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ  ನಟಿ ಪಾಯಲ್ ರಜಪೂತ್, ಇದೀಗ 'ಕಾಂತಾರ 2' ಚಿತ್ರದಲ್ಲಿ ನಟಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸ್ವತಃ ನಟಿಯೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

“ಕಾಂತಾರ ಮುಂದಿನ ಭಾಗದ ಚಿತ್ರಕ್ಕಾಗಿ ಆಡಿಷನ್‌ಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಾನು ಮಾಹಿತಿ ಪಡೆದೆ. ಈ ಸಿನಿಮಾಗೆ ನನ್ನದೊಂದು ಕೊಡುಗೆ ಕೊಡುವ ಬಯಕೆಯಿದೆ. ನಾನು ಅಭಿನಯಿಸಿದ ಇತ್ತೀಚಿನ 'ಮಗಳವಾರಂ' ಚಿತ್ರದಲ್ಲಿ ನನ್ನ ಅಭಿನಯಕ್ಕೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿದೆ. ಸಮಯ ಮಾಡಿಕೊಂಡು ನನ್ನ ಸಿನಿಮಾ ವೀಕ್ಷಿಸಿ. ಈ ಪ್ರಾಜೆಕ್ಟ್‌ಗಾಗಿ ಆಡಿಷನ್ ಪ್ರಕ್ರಿಯೆ ಯಾವಾಗ ಎಂದು ದಯವಿಟ್ಟು ಮಾಹಿತಿ ನೀಡಿ. ಕಾಂತಾರ ಚಿತ್ರದಲ್ಲಿ ನಟಿಸಲು ನನ್ನ ಹೆಸರನ್ನು ಸೂಚಿಸಿದ್ದಕ್ಕೆ ನನ್ನೆಲ್ಲಾ ಅಭಿಮಾನಿಗಳಿಗೂ ಧನ್ಯವಾದ" ಎಂದು ನಟಿ ಬರೆದುಕೊಂಡಿದ್ದಾರೆ.

'ಕಾಂತಾರ 2' ಚಿತ್ರೀಕರಣಕ್ಕೆ ಆರಂಭಗೊಂಡಿದ್ದು, ಶೀಘ್ರದಲ್ಲೇ ಚಿತ್ರತಂಡ ಪ್ರಮುಖ ಛಾಯಾಗ್ರಹಣ ಕೆಲಸಗಳನ್ನು ಪ್ರಾರಂಭಿಸಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).