ಶಿಕಾರಿಪುರ: ಸದ್ವಿಚಾರ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳೇ ಧರ್ಮದ ಸಾಕ್ಷಿರೂಪ. ಧರ್ಮದ ದಾರಿ ಎಂದರೆ ಅದು ರಾಜಪಥ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮಗೆ ನೆರಳಾಗಿ ನಿಲ್ಲುತ್ತದೆ ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಶ್ರೀ ಗಿಡ್ಡೇಶ್ವರ ಸೇವಾ ಸಮಿತಿ ಮಂಗಳವಾರ ಆಯೋಜಿಸಿದ್ದ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಎಲ್ಲ ಧರ್ಮಗಳ ಸಾರವೂ ಒಂದೇ. ಸಹನೆ, ಶಾಂತಿ, ಪರಸ್ಪರ ಪ್ರೀತಿ, ವಿಶ್ವಾಸ ಹಂಚುವುದು. ಧರ್ಮೋತ್ಥಾನ ಕಾರ್ಯದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮಹತ್ತರ ಪಾತ್ರವಹಿಸುತ್ತವೆ ಎಂದರು
ಈ ಮಣ್ಣಿನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳು ಅದ್ಭುತವಾಗಿವೆ. ಅವುಗಳನ್ನು ನಾವು ಉಳಿಸಿ ಬೆಳೆಸಬೇಕಾಗಿದೆ. ಒಂದೊಂದು ಸಮುದಾಯದ ಆಚರಣೆಯೂ ಅತ್ಯಂತ ವಿಶೇಷ. ಪ್ರಕೃತಿಯಲ್ಲಿ ಗಿರಿ, ಬೆಟ್ಟ, ನದಿ, ಗಿಡ-ಮರ, ಪ್ರಾಣಿಗಳಲ್ಲಿ ದೈವತ್ವ ಕಂಡವರು ಮತ್ತು ಪೂಜಿಸುವವರು ನಾವು. ದೈವ ಚಿಂತನೆಗಳಿಂದ ನಮ್ಮ ಮನಸ್ಸುಗಳು ರಾಗಾದ್ವೇಷಗಳಿಂದ ಮುಕ್ತವಾಗಿ ನಿರ್ಮಲವಾಗುತ್ತದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾಕ್ಯ ಪರಿಪಾಲಕರು. ಮಠದಿಂದ ಧರ್ಮೋತ್ಥಾನ ಕಾರ್ಯಕ್ಕೆ ಸಮಾಜದ ಮತ್ತು ಸಮುದಾಯದ ಅಭಿವೃದ್ಧಿಗೆ ಏನೇ ಆದೇಶ ಬಂದರೂ ಶಿರಸಾವಹಿಸಿ ಮಾಡುತ್ತಾರೆ. ಅದು ಒಬ್ಬ ಜನನಾಯಕನಿಗೆ ಇರಬೇಕಾದ ಗುಣ ಎಂದರು
ಬಿ.ವೈ.ರಾಘವೇಂದ್ರ ನಾಲ್ಕು ಬಾರಿ ಸಂಸದರಾದರೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ಎಂದಿಗೂ ಅಹಂಕಾರ ತೋರಿದವರೇ ಅಲ್ಲ. ಅವರ ಮೂರು ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಾಗಿರುವುದು ನಮಗೆ ಪ್ರತ್ಯಕ್ಷವಾಗಿ ಕಾಣುತ್ತಿದೆ. ಶಾಸಕ ಬಿ.ವೈ.ವಿಜಯೇಂದ್ರ ಸಹ ತಂದೆಯಂತೆಯೇ ಛಲಬಿಡದ ತ್ರಿವಿಕ್ರಮ. ಅವರ ಆಡಳಿತಾವಧಿಯಲ್ಲಿ ಶಿಕಾರಿಪುರ ತಾಲೂಕು ಅಭಿವೃದ್ಧಿಯಿಂದ ಬೆಳಗಲಿ ಎಂದು ಆಶಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಕುರುಬ ಸಮಾಜ ಅತ್ಯಂತ ಸ್ವಾಭಿಮಾನಿ, ದೇಶಪ್ರೇಮಿ ಹಾಗೂ ಧಾರ್ಮಿಕ ನೆಲೆಗಟ್ಟಿನ ಮೇಲೆ ನಡೆದು ಬಂದ ಸಮುದಾಯ. ಶುಭ್ರ ಹಾಲಿನಂತಿರುವ ಹಾಲುಮತ ಸಮಾಜದವರು ಅತ್ಯಂತ ಪರಿಶ್ರಮಿಗಳು, ಉತ್ತಮ ಕೃಷಿಕರೂ ಹೌದು. ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಈ ಸಮುದಾಯ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ತಂದೆ ಪುರಸಭೆಯಿಂದ ರಾಜಕೀಯ ಪ್ರವೇಶಿಸಿ, ರಾಜ್ಯಾಧ್ಯಕ್ಷ, ವಿಪಕ್ಷದ ನಾಯಕರಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು, ರಾಘಣ್ಣ ಸಂಸದನಾಗಲು ಮತ್ತು ನಾನು ಶಾಸಕನಾಗಿ ಆಯ್ಕೆಯಾಗಲು ಹಾಲುಮತ ಸಮುದಾಯದ ಕೊಡುಗೆ ಸಾಕಷ್ಟಿದೆ. ಕನಕ ಗುರುಪೀಠ ಕಾಗಿನೆಲೆ, ಕನಕದಾಸರ ಜನ್ಮಸ್ಥಳ ಬಾಡ ಅಭಿವೃದ್ಧಿಗೆ ತಂದೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.
ಶ್ರೀ ಗಿಡ್ಡೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನಗರದ ಅಶೋಕಪ್ಪ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಹಿರಿಯರಾದ ನಗರದ ಮಹದೇವಪ್ಪ, ಹುಲ್ಮಾರ್ ಮಹೇಶ್, ಗೋಣಿ ಪ್ರಕಾಶ್, ಬಿ.ಎಲ್.ರಾಜು, ಶ್ರೀ ಮಾರಿಕಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರಳೆಣ್ಣೆ ಗಿಡ್ಡಪ್ಪ, ಸಂಕ್ರಿ ಸೋಮಪ್ಪ, ಮಂಜಪ್ಪ ಗೌಡ, ಟಿ.ಎಸ್.ಮೋಹನ್ ಇತರರಿದ್ದರು.