ಜುಲೈ 1 ವಿಶ್ವ ಜೋಕ್ ದಿನ. ಕ್ಯಾಲೆಂಡರ್ ವರ್ಷದ ಉತ್ತರಾರ್ಧ ಆರಂಭವಾಗುವ ಈ ದಿನವನ್ನು ಜೋಕ್ ಅಥವಾ ಹಾಸ್ಯವನ್ನು ಹಂಚಿಕೊಳ್ಳುವ ಮೂಲಕ ಆನಂದದಿಂದ ಕಳೆಯಬೇಕೆಂಬುದು ಇದರ ಉದ್ದೇಶ. ಆದರೆ ನನಗೆ ಜುಲೈ 1 ಜೋಕ್ ದಿನ ಅಂತ ಕೇಳಿದಾಗಿನಿಂದ ವಿಪರೀತ ಚಿಂತೆ, ಮಂಡೆ ಬಿಸಿ. ಕರೊನಾದ ಕರಿನೆರಳು ವಿಶ್ವವನ್ನೇ ವ್ಯಾಪಿಸಿರುವಾಗ ಜನರನ್ನು ಜೋಕ್ ಮಾಡಿ ನಗಿಸುವುದು ಹೇಗೆ? ಎಂಬುದೇ ನನ್ನ ಚಿಂತೆಗೆ ಕಾರಣ. ನಗಿಸುವುದು ಹೇಗೆಂಬ ನನ್ನ ಚಿಂತೆಗೆ ಇನ್ನೊಂದು ಕಾರಣ ಜೋಕುಗಳನ್ನು ಜೋಕಾಗಿ ಸ್ವೀಕರಿಸದೆ, ಈ ರೀತಿ ಜೋಕ್ ಮಾಡಿದರೆ ಜೋಕೆ, ಹುಷಾರ್ ಎಂದು ಬೆದರಿಸುವವರ ಉಪಟಳ ಹೆಚ್ಚಾಗುತ್ತಿರುವುದು.
ಗಣನಾಯಕನಿಗೆ ಸಲ್ಲಿಸಬಹುದು
ಆನ್ ಲೈನಲ್ಲಿ ಇ ಕಾಣಿಕೆ
ಜನನಾಯಕರಿಗೆ ಮಾತ್ರ ಎಂದಿನಂತೆ
ನಗದಾಗಿಯೇ ಬೇಕಂತೆ ಆ ‘ಕಾಣಿಕೆ’
ನಮ್ಮ ಜನನಾಯಕರು ತಮ್ಮ ನಡೆ ನುಡಿಗಳಿಂದ ಹಾಸ್ಯಕ್ಕೆ ಬೇಕಾದಷ್ಟು ಸಾಮಗ್ರಿ ಒದಗಿಸುತ್ತಾರೆ. ತಮ್ಮ ಬಗ್ಗೆ ಯಾರಾದರೂ ಹಾಸ್ಯ ಮಾಡಿದರೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವರ ಅಂಧ ಭಕ್ತರದ್ದೇ ಸಮಸ್ಯೆ. ರಾಹುಲ್, ಸಿದ್ದು, ಡಿಕೆಶಿ ಬಗ್ಗೆ ಹಾಸ್ಯ ಮಾಡಿದರೆ ಕೈ ಪಕ್ಷದ ಕಾರ್ಯಕರ್ತರು ರೇಗಿ ಮೈಮೇಲೆ ಬರುತ್ತಾರೆ. ಮೋದಿ, ಶಾ, ಬಿಎಸ್ವೈ ಬಗ್ಗೆ ಜೋಕ್ ಮಾಡಿದರೆ ಕಮಲ ಪಕ್ಷದ ಅಭಿಮಾನಿಗಳು ಅಮಲೇರಿದವರಂತೆ ಬಯ್ಯುತ್ತಾರೆ. ಹಿಂದಿನ ಕಾಲವೇ ಚೆನ್ನಾಗಿತ್ತು. ರಾಜಮಹಾರಾಜರು ಹಾಸ್ಯ ಮಾಡಿಲಿಕ್ಕೆಂದೇ ತಮ್ಮ ಆಸ್ಥಾನದಲ್ಲಿ ವಿದೂಷಕರಿಗೆ ಆಶ್ರಯ ನೀಡುತ್ತಿದ್ದರು. ವಿದೂಷಕರು ರಾಜರ ಮೇಲೂ ಹಾಸ್ಯ ಮಾಡಬಹುದಾದ ಮುಕ್ತ ವಾತಾವರಣ ಇರುತ್ತಿತ್ತು. ಈ ಪ್ರಜಾಪ್ರಭುತ್ವದ ಕಾಲದಲ್ಲಿ ದೇವರು ಮತ್ತು ನಾಯಕರು ಜೋಕಾತೀತರಾಗುತ್ತಿದ್ದಾರೆ. ಇದೇ ದೊಡ್ಡ ಜೋಕಲ್ಲವೆ?
ದೇವರು, ಧರ್ಮ ಮತ್ತು ನಾಯಕರ ಮೇಲೆ ಜೋಕ್ ಮಾಡುವುದು ಈಗ ಅಷ್ಟು ಸುರಕ್ಷಿತವಲ್ಲ. ಹೀಗಾಗಿ ಹಾಸ್ಯ ಮಾಡುವ ನನ್ನಂಥವರು ತಮ್ಮ ಸ್ವಂತ ಹೆಂಡತಿಯ ಮೇಲೆ ಹೆಚ್ಚು ಹೆಚ್ಚು ಹಾಸ್ಯ ಮಾಡುವುದು ಅನಿವಾರ್ಯ. ಹಾಸ್ಯಕ್ಕಾಗಿ ಹೆಂಡತಿಯನ್ನು ಟೀಕಿಸಿದರೆ ಆಕೆಗೆ ಕೋಪ ಬರುವುದಿಲ್ಲವೆ? ಅಂತ ನೀವು ಕೇಳಬಹುದು. ಖಂಡಿತವಾಗಿಯೂ ಇಲ್ಲ. ಇದಕ್ಕೆ ಎರಡು ಕಾರಣಗಳಿವೆ. ಮೊದಲ ಕಾರಣ ಆಕೆ ನಾನು ಬರೆದದ್ದನ್ನು ಓದುವ ಗೋಜಿಗೆ ಹೋಗುವುದಿಲ್ಲ. ಎರಡನೆಯ ಕಾರಣವೆಂದರೆ ಹನಿಗವನ ಅಥವಾ ಲೇಖನದಲ್ಲಿ ನಾನು ಪತ್ನಿ, ಮಡದಿ ಎಂದು ಬರೆದು ಟೀಕಿಸಿದರೆ ಅದು ಬೇರೆಯವರ ಹೆಂಡತಿಗೆ ಮತ್ತು ಪ್ರಿಯೆ, ನಲ್ಲೆ ಎಂದು ಹೊಗಳಿದರೆ ಮಾತ್ರ ನನ್ನವಳಿಗೆ ಅನ್ವಯಿಸುತ್ತದೆ ಎಂದು ಆಕೆ ಭಾವಿಸುತ್ತಾಳೆ. ಮೂರು ದಶಕಗಳ ಹಿಂದೆ ಮದುವೆಯಾದ ಹೊಸದರಲ್ಲಿ ನಾನು ಹೇಳಿದ ಈ ಸುಳ್ಳನ್ನು ನನ್ನಾಕೆ ನಿಜವೆಂದು ಈಗಲೂ ನಂಬಿರುವುದರಿಂದ ನಾನು ಸೇಫ್!
ಈ ಕೋವಿಡ್ ಕಾಲದಲ್ಲಿ ಜೋಕ್ ಮಾಡಿದರೆ ಜನರು ನಗುತ್ತಾರೆಯೇ ಎಂದು ಪರೀಕ್ಷಿಸಲು ನನ್ನವಳ ಹತ್ತಿರ ಸ್ವಲ್ಪ ನಾಟಕೀಯವಾಗಿ ‘ಪ್ರಿಯೆ, ಜುಲೈ ಒಂದು ಜೋಕ್ ದಿನ. ನಾನು ಹಾಸ್ಯ ಮಾಡಿದ ರೆ ನಗಬೇಕು.’ ಅಂದೆ. ನನ್ನ ಮಾತಿಗೆ ನನ್ನಾಕೆ:
ಏನೆಂದೆ ಪ್ರಿಯಾ?
ನಗಬೇಕು ಎಂದೆಯಾ
ನಗಬೇಕಾದರೆ
ಮೈ ತುಂಬ ನಗ
ಬೇಕು, ತರುವೆಯಾ?
ಎಂದು ಮೂರು ದಶಕಗಳ ಹಿಂದೆ ಕೇಳಿದ್ದ ಪ್ರಶ್ನೆಯನ್ನೇ ಪುನಃ ಕೇಳಿದಳು. ಚಿನ್ನದ ದರ ಕೈಗೆಟಕುವಂತಿದ್ದ ಆ ಕಾಲದಲ್ಲಿಯೇ ಈ ಪ್ರಶ್ನೆಗೆ ಬಾಯಿ ಮುಚ್ಚಿಕೊಂಡಿದ್ದೆ. ಈಗ ಚಿನ್ನದ ಬೆಲೆ ಗ್ರಾಮಿಗೆ 5000 ಆಗಿರುವಾಗ ನಗ ತರಲು ಸಾಧ್ಯವೆ? ಮಾಸ್ಕ್ ಧರಿಸಿ ಬಾಯಿಯ ಜತೆ ಮೂಗನ್ನೂ ಮುಚ್ಚಿಕೊಂಡು ವಾಕಿಂಗ್ ನೆಪದಲ್ಲಿ ಜಾಗ ಖಾಲಿ ಮಾಡಿದೆ.
ಹಿಂದೆಲ್ಲ ವಾಕಿಂಗ್ ಮಾಡುವಾಗ ದಾರಿಯಲ್ಲಿ ಎದುರಾಗುವ ನಾಲ್ಕಾರು ಅಭಿಮಾನಿ ಓದುಗರು ಕೈ ಬೀಸಿ ವಿಶ್ ಮಾಡುತ್ತಿದ್ದರು. ಈಗ ಅವರೆಲ್ಲ ನನ್ನನ್ನು ನೋಡಿಯೂ ನೋಡದವರಂತೆ ಹೋಗುವುದನ್ನು ಕಂಡು ನನ್ನ ಜನಪ್ರಿಯತೆ ದಿಢೀರ್ ಕುಸಿಯಿತೆ ಎಂದು ಆತಂಕವಾಗಿತ್ತು. ಮೊನ್ನೆ ಒಬ್ಬರು ‘ಈ ಮಾಸ್ಕಿನಿಂದಾಗಿ ನಿಮ್ಮ ಗುರುತೇ ಸಿಗುತ್ತಿಲ್ಲ ಸಾರ್’ ಅಂದಾಗ ನನ್ನ ಆತಂಕ ದೂರವಾಯಿತು. ಮಾಸ್ಕ್ ಧರಿಸುವುದರಿಂದ ಕರೊನಾ ಬರದಂತೆ ತಡೆಯಬಹುದು. ಆದರೆ ಅದರಿಂದ ಕೆಲವು ತೊಂದರೆಗಳೂ ಇವೆ. ಕನ್ನಡಕ ಹಾಕುವ ನನ್ನಂಥವರಿಗೆ ಮಾಸ್ಕಿನಿಂದ ಬರುವ ಬಿಸಿ ಗಾಳಿ ಕನ್ನಡಕದ ಗಾಜಿಗೆ ತಾಗಿ ಅದು ಮಸುಕಾಗುತ್ತದೆ. ವಾಕಿಂಗಿಗೆ ಬರುವವರ ಮುಖಾರವಿಂದ ಸರಿಯಾಗಿ ಕಾಣಿಸುವುದಿಲ್ಲ. ಇದನ್ನು ನನ್ನಾಕೆಯ ಹತ್ತಿರ ಹೇಳಿದಾಗ ‘ಓಹೋ! ನೀವ್ ವಾಕಿಂಗಿಗೆ ಬಪ್ಪುದು ಹೆಣ್ವುಕ್ಳ ಮುಖ ಕಾಂಬುಕಾ? ನಾಳೆ ನಿಮ್ಮ ಕನ್ನಡಕದ ಗಾಜಿಗೆ ವೈಪರ್ ಹಾಕುವ’ ಅಂದಳು.
ಆಷಾಢದಲ್ಲಿ ಪತ್ನಿಯನ್ನು ತೌರಿಗೆ ಕಳಿಸುವಂತೆ ಕರೊನಾವನ್ನೂ ಅದರ ತೌರುಮನೆ ಚೀನಾಕ್ಕೆ ಕಳಿಸಬೇಕೆಂಬ ಜೋಕ್ಸ್ ಹರಿದಾಡುತ್ತಿದೆ. ತೌರಿಗೆ ಹೋದ ಮಡದಿ ಮರಳಿ ಬರುತ್ತಾಳೆ. ಬರಲಿ ಎಂದು ಗಂಡ ಕಾಯುತ್ತಾನೆ. ಆದರೆ ಕರೊನಾ ಮರಳಿ ಬರುವುದು ಬೇಡ. ಇನ್ನು ಒಂದೂವರೆ ತಿಂಗಳಲ್ಲಿ ಸ್ವಾತಂತ್ರ್ಯ ದಿನ ಬರುತ್ತದೆ. ಅಷ್ಟು ಹೊತ್ತಿಗಾದರೂ ಕರೊನಾ ಹಾವಳಿ ಕಡಿಮೆಯಾಗಿ ನಾವೆಲ್ಲ ಮಾಸ್ಕ್ ತೆಗೆದು ಸ್ವತಂತ್ರವಾಗಿ ಎಲ್ಲೆಡೆ ತಿರುಗಾಡುವಂತಾಗಲಿ. ಆಗಸ್ಟ್ 22ಕ್ಕೆ ಗಣೇಶನ ಹಬ್ಬ. ಆಗಲೂ ಕರೊನಾ ಹೀಗೆ ಅಬ್ಬರಿಸುತ್ತಿದ್ದರೆ ಮಾಸ್ಕ್ ಹಾಕಿಕೊಂಡು, ಅಂತರ ಕಾಯ್ದುಕೊಂಡು ಹಬ್ಬ ಮಾಡುವುದು ಹೇಗೆ? ಅಲ್ಲದೆ ಗಣೇಶ ‘ನೀವು ಮಾತ್ರ ಮಾಸ್ಕ್ ಧರಿಸಿದರೆ ಸಾಕೆ? ನನಗೂ ಮಾಸ್ಕ್ ಹಾಕಿ’ ಅಂದರೆ ಅವನ ಬಾಯಿ, ಸೊಂಡಿಲು ಮುಚ್ಚುವ ಮಾಸ್ಕನ್ನು ಎಲ್ಲಿಂದ ತರೋಣ?
ಮುಗಿಸುವ ಮುನ್ನ: ಸ್ವಂತ ಹೆಂಡತಿಯೇ ಆದರೂ ಸದಾ ಆಕೆಯನ್ನು ಟೀಕಿಸಿ ಜೋಕ್ ಮಾಡುವುದು ಸೇಫ್ ಅಲ್ಲ. ಅಪರೂಪಕ್ಕೆ ಒಮ್ಮೆ ಅವಳನ್ನು ಹೊಗಳುವ ಇಂಥ ಹನಿಗವನವನ್ನೂ ಬರೆಯಬೇಕು.
ಹಿಂದೆಲ್ಲ ವಾರಕ್ಕೊಮ್ಮೆ ತಪ್ಪದೆ
ಹೋಟೆಲ್ಗಳಿಗೆ ಹೋಗಿ
ತಿನ್ನುತ್ತಿದ್ದೆವು ಚೈನೀಸ್
ನಾರ್ತ್, ಈಸ್ಟ್, ವೆಸ್ಟ್
ಈಗ ತಿಳಿಯಿತು ಅವೆಲ್ಲ ವೇಸ್ಟ್
ಮಡದಿಯ ತಿಳಿಸಾರೇ ಬೆಸ್ಟ್!
(ಲೇಖಕರು ಕವಿ ಹಾಗೂ ನಾಟಕಕಾರರು)