ನ್ಯೂಸ್

ಇಂದು ವಿಶ್ವ ನಾಗರಿಕ ಪಡೆ ದಿನ: ಆಪತ್ಬಾಂಧವ ಸಿವಿಲ್ ಡಿಫೆನ್ಸ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಪ್ರಕೃತಿ ವಿಕೋಪ, ಅಗ್ನಿ ಅನಾಹುತ, ರಸ್ತೆ ಅಪಘಾತ, ಕಟ್ಟಡ ಕುಸಿತದಂತಹ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಸ್ಪಂದಿಸುವಲ್ಲಿ ಪೌರ ರಕ್ಷಣೆ (ಸಿವಿಲ್ ಡಿಫೆನ್ಸ್) ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿ ವರ್ಷ ಮಾರ್ಚ್ 1ರಂದು ‘ವಿಶ್ವ ಸಿವಿಲ್ ಡಿಫೆನ್ಸ್ ದಿನಾಚರಣೆ’ ಆಚರಿಸಲಾಗುತ್ತದೆ. 2ನೇ ಮಹಾಯುದ್ಧದಲ್ಲಿ ಉದಯಿಸಿದ ಸಿವಿಲ್ ಡಿಫೆನ್ಸ್ ವಿಶ್ವದಲ್ಲೆಡೆ ಮನ್ನಣೆ ಪಡೆದುಕೊಂಡಿದೆ.

ಭಾರತದ ವಿರುದ್ಧ ಪಾಕಿಸ್ತಾನ, ಚೀನಾ ಯುದ್ಧ ನಡೆಸಿದಾಗಲೂ ನಾಗರಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಸೇವೆಯನ್ನು ಪರಿಗಣಿಸಿ 1968ರಲ್ಲಿ ಕೇಂದ್ರ ಸರ್ಕಾರ ಸಂವಿಧಾನಿಕ ಮನ್ನಣೆ ನೀಡಿ ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯವ್ಯಾಪ್ತಿಯನ್ನು ಗುರುತಿಸಿತು. ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಸೇವಾ ಮನೋಭಾವನೆ ಯಿಂದ ಸದಾ ಮುನ್ನುಗುವ ಸಿವಿಲ್ ಡಿಫೆನ್ಸ್​ಗೆ ಪೊಲೀಸರು ಮತ್ತು ಅಗ್ನಿ ಶಾಮಕ ಇಲಾಖೆ ಜತೆಗೆ ಕೈಜೋಡಿಸುವ ಜವಾಬ್ದಾರಿ ನೀಡಿದೆ. ಸಿವಿಲ್ ಡಿಫೆನ್ಸ್ ರಾಜ್ಯದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕರ ವ್ಯಾಪ್ತಿಯಲ್ಲಿದೆ. ಬೆಂಗಳೂರು ನಗರದಲ್ಲಿ 10,500 ಸ್ವಯಂ ಸೇವಕರು ಸೇರಿ ರಾಜ್ಯದಲ್ಲಿ 13,500 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಕನಿಷ್ಠ 4 ದಿನದಿಂದ 40 ದಿನದವರೆಗೆ ತರಬೇತಿ ನೀಡಲಾಗುತ್ತದೆ. ನೆರೆ ಹಾವಳಿ, ಪ್ರವಾಹದ ವೇಳೆ ನೀರಿನ ಜತೆ ಸೆಣೆಸಾಡಿ ಸಂತ್ರಸ್ತರನ್ನು ರಕ್ಷಣೆ ಮಾಡುವುದು. ಅಗ್ನಿ ಅನಾಹುತ, ವಿಮಾನ ಪತನ ಸೇರಿ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಬಗ್ಗೆ ತರಬೇತಿ ನೀಡಲಾಗುತ್ತದೆ.

ಜನರ ಮೆಚ್ಚುಗೆ: ಕೊಡಗು ನೆರೆ ಹಾವಳಿ, ಕೊಪ್ಪಳದ ತುಂಗಾಭದ್ರ ನದಿ ಉಕ್ಕಿ ಹರಿಯುತ್ತಿದ್ದಾಗ ಹಂಪಿ ನಡುಗೆಡ್ಡೆಯಲ್ಲಿ ಸಿಲುಕಿದವರ ರಕ್ಷಣೆ, ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಸಹಾಯ, ಸಿಲಿಕಾನ್ ಸಿಟಿಯಲ್ಲಿ ಭಾರಿ ಮನೆಯಿಂದ ಆಗುವ ಅನಾಹು ತದ ವೇಳೆ ನಾಗರಿಕರ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ತುರ್ತು ಸ್ಪಂದನಾ ಪಡೆ: ಬೆಂಗಳೂರು ನಗರದಲ್ಲಿ 200 ಜನರ ತುರ್ತು ಸ್ಪಂದನಾ ಪಡೆಯನ್ನು ರಚಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಎಲ್ಲಿಯೇ ಅನಾಹುತ, ಪ್ರಕೃತಿ ವಿಕೋಪ ಜರುಗಿದಾಗ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರು 40 ದಿನಗಳ ತರಬೇತಿ ಪಡೆದಿದ್ದು, ಪ್ರತ್ಯೇಕ ಸಲಕರಣೆಗಳನ್ನು ಹೊಂದಿದ್ದಾರೆ.

ಸಿವಿಲ್ ಡಿಫೆನ್ಸ್ ಪ್ರಮುಖ ಕಾರ್ಯ ಚಟುವಟಿಕೆ

  • ಅಪಾಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು
  • ಅನಾಹುತಕ್ಕೆ ಸಿಲುಕಿರುವರಿಗೆ ಆಶ್ರಯ, ಉಳಿಯಲು ಸ್ಥಳದ ಬಗ್ಗೆ ಮಾಹಿತಿ ನೀಡುವುದು
  • ತುರ್ತ ಸೇವೆಗಳಲ್ಲಿ ಅಗ್ನಿ ಶಾಮಕದ ಜತೆ ಕೈ ಜೋಡಿಸುವುದು
  • ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆಗದಂತೆ ಜನರನ್ನು ದೂರ ಕಳುಹಿಸುವುದು
  • ಸಂತ್ರಸ್ತರಿಗೆ ವೈದ್ಯಕೀಯ ಸೇವೆ ಒದಗಿಸುವುದು
  • ಸ್ವಯಂಪ್ರೇರಿತ ಆಹಾರ, ಆಶ್ರಯ, ಉಡುಪು ಪೂರೈಕೆ
  • ಮರುಪಡೆಯುವಿಕೆ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಿ
  • ಗುರುತಿಸಿದ ಸ್ಥಳವನ್ನು ಸಂರಕ್ಷಣೆ ಮಾಡುವುದು
  • ಪ್ರವಾಹ, ಅಗ್ನಿ ಅನಾಹುತದಲ್ಲಿ ಸಿಲುಕಿದವರ ರಕ್ಷಣೆ
ಸೇವಾ ಮನೋಭಾವನೆ ಮತ್ತು ಸಂಕಷ್ಟದಲ್ಲಿ ಸಿಲುಕಿರುವ ನಾಗರಿಕರ ರಕ್ಷಣೆ ಮುಖ್ಯ ಧ್ಯೇಯವಾಗಿದೆ. ಈ ಕಾರ್ಯವನ್ನು ಸಿವಿಲ್ ಡಿಫೆನ್ಸ್ ಸಮರ್ಥವಾಗಿ ನಿರ್ವಹಿಸುತ್ತಿದ್ದು, ಜನರ ಮೆಚ್ಚುಗೆ ಸಹ ಲಭಿಸಿದೆ. | ಡಾ.ಪಿ.ಆರ್.ಎಸ್.ಚೇತನ್ ಸಿವಿಲ್ ಡಿಫೆನ್ಸ್, ಚೀಫ್ ಕಮಾಂಡಿಂಗ್

| ಗೋವಿಂದರಾಜು ಚಿನ್ನಕುರ್ಚಿ