ರಾಷ್ಟ್ರದ ಏಕತೆ, ಸಾರ್ವಭೌಮತೆಯನ್ನು ಕಾಪಾಡಿದ ಹಾಗೂ ಅವುಗಳನ್ನು ತಮ್ಮ ಕಾರ್ಯಗಳ ಮೂಲಕವೇ ಎತ್ತಿ ಹಿಡಿದ ನಮ್ಮ ದೇಶದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲರ ಜೀವನಾದರ್ಶ ಸದಾ ಪ್ರಸ್ತುತ.
‘ಭಾರತದ ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭ ಭಾಯಿ ಪಟೇಲ್, ಹರಿದು ಹಂಚಿಹೋಗಿದ್ದ ಭಾರತದ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆದರೆ ಅದು ಸುಲಭದ ತುತ್ತಾಗಿರಲಿಲ್ಲ. ಸಂಸ್ಥಾನಗಳ ರಾಜ-ಮಹಾರಾಜರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟೇಲ್ ಹಾಗೂ ಭಾರತದ ಕೊನೆಯ ವೈಸ್ರಾಯ್ ಮೌಂಟ್ಬ್ಯಾಟನ್ರ ರಾಜಕೀಯ ಸಲಹೆಗಾರ ವಿ.ಪಿ. ಮೆನನ್ರಿಗೆ ಹೊರಿಸಿದರು.
ಕುಶಲ ರಾಜನೀತಿಯ ಫಲ: ಪರಿಣಾಮಕಾರಿ ರಾಜನೀತಿ, ದೂರದೃಷ್ಟಿ ಯೊಂದಿಗೆ ಅಡಿಯಿಟ್ಟ ಪಟೇಲರು ಜಟಿಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು. ದೇಶದ ಉದ್ದಗಲ ಸಂಚರಿಸಿ ನೂರಾರು ಪ್ರಾಂತಗಳ ರಾಜ- ಮಹಾರಾಜರನ್ನು ಭೇಟಿಯಾಗಿ ಸ್ವತಂತ್ರ ಭಾರತದ ಒಕ್ಕೂಟದೊಂದಿಗೆ ತಂತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸುವಂತೆ ಅವರ ಮನವೊಲಿಸಿದರು.
ಹೈದರಾಬಾದ್ ವಿಲೀನ: ಹೈದರಾಬಾದ್ ಸಂಸ್ಥಾನದ ಜನಸಂಖ್ಯೆಯ ಶೇಕಡ 87ರಷ್ಟು ಭಾಗ ಹಿಂದೂಗಳಿಂದ ಕೂಡಿದ್ದರೂ, ಅಲ್ಲಿನ ನಿಜಾಮ ಒಸ್ಮಾನ್ ಆಲಿ ಖಾನ್ ಮುಸ್ಲಿಮನಾಗಿದ್ದ ಮತ್ತು ಅಲ್ಲಿನ ಪ್ರಭುತ್ವದಲ್ಲಿ ಮುಸ್ಲಿಂ ಗಣ್ಯರದ್ದೇ ಪ್ರಾಬಲ್ಯವಿತ್ತು. ಸ್ವತಂತ್ರವಾಗಿ ಉಳಿಯಲು ಹೈದರಾಬಾದ್ಗೆ ಅವಕಾಶ ನೀಡಿದರೆ ಭಾರತ ಸರ್ಕಾರದ ಪ್ರತಿಷ್ಠೆಗೆ ಚ್ಯುತಿ ಬರುತ್ತದೆ ಎಂಬ ಪಟೇಲರ ಎಚ್ಚರಿಕೆ ಅನುಸರಿಸಿ, ಭಾರತೀಯ ಸೇನೆಯನ್ನು ಹೈದರಾಬಾದ್ಗೆ ಕಳಿಸಲಾಯಿತು. ತರುವಾಯದಲ್ಲಿ ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಭಿನ್ನಾಭಿಪ್ರಾಯದ ಪ್ರಾಂತೀಯ ಮನಸ್ಸುಗಳು ವಿಲೀನ ಗೊಂಡು, ಒಗ್ಗೂಡಿ ಭಾರತ ಒಕ್ಕೂಟ ಸ್ಥಾಪನೆಯಾಗು ವಂತಾಗಿದ್ದಕ್ಕೆ ಪಟೇಲರ ದಣಿವರಿಯದ ಪ್ರಯತ್ನವೇ ಕಾರಣ. ಕದಲದ ಇಚ್ಛಾಶಕ್ತಿ, ನಿರ್ಭಯತೆಯ ಸಮ್ಮಿಶ್ರಣ ವಾಗಿದ್ದ ಪಟೇಲರು 550ಕ್ಕೂ ಹೆಚ್ಚಿನ ಸಂಸ್ಥಾನಗಳಲ್ಲಿ ತಲೆದೋರಿದ್ದ ಪ್ರಶ್ನೆಗಳು, ಅನುಮಾನ ಗಳನ್ನು ನಿರ್ವಹಿಸಿದ ರೀತಿ ಕಂಡು ಅವರ ಕಡುಟೀಕಾಕಾರರೇ ನಿಬ್ಬೆರಗಾದರು.
ಸರ್ದಾರರಾಗಿದ್ದು ಹೇಗೆ?: ವಲ್ಲಭಭಾಯಿ ಪಟೇಲರು ಸರ್ದಾರರಾಗಿದ್ದಕ್ಕೂ ಒಂದು ಐತಿಹ್ಯವಿದೆ. ಸರ್ದಾರ ಎಂದರೆ ಮಂಡಳಿಯ ನಾಯಕ, ಯುದ್ಧದ ದಳಪತಿ, ಕಮಾಂಡರ್ ಎಂದೆಲ್ಲ ಅರ್ಥ. ಹೀಗೆ ಅವರನ್ನು ಸರ್ದಾರ್ ಎಂದು ಕರೆದವರು ಬಡೋಲಿ ತಾಲೂಕಿನ ರೈತರು. ಪ್ರತಿವರ್ಷ ಕೊಡುವುದಕ್ಕಿಂತ ಒಂದೂವರೆ ಲಕ್ಷದಷ್ಟು ಹೆಚ್ಚಿಗೆ ವಾರ್ಷಿಕ ಕಂದಾಯ ಕೊಡಬೇಕೆಂದು 1928ರಲ್ಲಿ ಬ್ರಿಟಿಷ್ ಸರ್ಕಾರವು ಬಡೋಲಿ ತಾಲೂಕಿನ ರೈತರಿಗೆ ಆದೇಶ ನೀಡಿತು. ಆ ಹೊರೆಯನ್ನು ತಪ್ಪಿಸಬೇಕು ಎಂದು ಬಡೋಲಿ ರೈತರು ಅಹಮದಾಬಾದಿಗೆ ಬಂದು ಪಟೇಲರಲ್ಲಿ ವಿನಂತಿಸಿಕೊಂಡರು. ಪಟೇಲರ ನೇತೃತ್ವದಲ್ಲಿ ರೈತರೆಲ್ಲ ಚಳವಳಿ ಹೂಡಿದರು. ಇದನ್ನು ಸಹಿಸದ ಸರ್ಕಾರ ಲಕ್ಷಾಂತರ ರೂಪಾಯಿ ಬೆಲೆಬಾಳುವ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಹರಾಜು ಹಾಕಿತು. ಆಗ ಪಟೇಲರು ರೈತರು, ಅವರ ಕುಟುಂಬಗಳಿಗೆ ಧೈರ್ಯ ತುಂಬಿ ಚಳವಳಿ ಮತ್ತಷ್ಟು ಬಿರುಸಾಗುವಂತೆ ನೋಡಿಕೊಂಡರು. ಕೇವಲ ಏಳು ರೂ. ಸಂಬಳಕ್ಕೆ ದುಡಿಯುತ್ತಿದ್ದ ಭಾರತೀಯ ನೌಕರರು ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸುವಂತೆ ಮಾಡಿದರು. ಇದಕ್ಕೆ ಹೆದರಿದ ಸರ್ಕಾರ ಸಂಧಾನಕ್ಕೆ ಬಂತು. ಆಗ ಪಟೇಲರು ದಸ್ತಗಿರಿ ಮಾಡಿದ್ದವರನ್ನು ಬಿಡುಗಡೆ ಮಾಡಿ, ಅವರ ಮೇಲಿನ ಮೊಕದ್ದಮೆ ಹಿಂಪಡೆಯಬೇಕು; ರಾಜೀನಾಮೆ ಇತ್ತಿದ್ದ ಸರ್ಕಾರಿ ನೌಕರರನ್ನೆಲ್ಲ ಮತ್ತೆ ಕೆಲಸಕ್ಕೆ ಸೇರಿಸಬೇಕು; ಎಲ್ಲ ಭೂಮಿಯನ್ನು ಅದರ ಮಾಲೀಕರಿಗೆ ಹಿಂತಿರುಗಿಸ ಬೇಕು ಎಂಬಿತ್ಯಾದಿ ಷರತ್ತುಗಳನ್ನು ಹಾಕಿ ಅವೆಲ್ಲವನ್ನೂ ಸರ್ಕಾರ ಒಪ್ಪುವಂತೆ ಮಾಡಿ ರೈತರ ಹಿತವನ್ನು ಕಾಪಾಡಿದ್ದರು. ಇದರಿಂದ ಖುಷಿಪಟ್ಟ ರೈತರು ಪಟೇಲರಿಗೆ ಜೈಕಾರ ಹಾಕಿ, ‘ಸರ್ದಾರ’ ಎಂದು ಕರೆದರು. ಆಡಳಿತದಲ್ಲಿ ಅಖಿಲ ಭಾರತ ಸೇವೆಯನ್ನು (ಐಎಎಸ್, ಐಪಿಎಸ್, ಐಎಫ್ಎಸ್) ಸೃಜಿಸುವಲ್ಲಿ ಪಟೇಲರ ಪಾತ್ರ ಪ್ರಮುಖವಾದುದು.
ಗುಜರಾತಿನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ದಕ್ಷಿಣಕ್ಕೆ ಸ್ಥಾಪಿಸಲಾಗಿರುವ 597 ಅಡಿಯ ಸರ್ದಾರ್ ಪಟೇಲ್ ಪ್ರತಿಮೆ (ಸ್ಟ್ಯಾಚು ಆಫ್ ಯುನಿಟಿ) ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಶೇಷವೆಂದರೆ, ಅಮೆರಿಕದ ಸ್ಟಾ್ಯಚು ಆಫ್ ಲಿಬರ್ಟಿಗೆ ಭೇಟಿ ನೀಡುವ ಪ್ರವಾಸಿಗರಿಗಿಂತ ಹೆಚ್ಚು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಿದ್ದಾರೆ. ಸ್ಟಾ್ಯಚು ಆಫ್ ಲಿಬರ್ಟಿಗೆ ಪ್ರತಿ ದಿನ ಸರಾಸರಿ 10 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರೆ (ಮಾರ್ಚ್ ಹೊತ್ತಿಗೆ), ಏಕತಾ ಪ್ರತಿಮೆಗೆ 15 ಸಾವಿರ ಜನರು ಭೇಟಿ ನೀಡುತ್ತಿದ್ದಾರೆ. 2018 ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಪಟೇಲರ ಈ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದರು. 2018 ನವೆಂಬರ್ 1ರಿಂದ 2020 ಮಾರ್ಚ್ 17ರವರೆಗೆ (ಲಾಕ್ಡೌನ್ ಘೋಷಣೆ ಯಾಗುವವರೆಗೆ) 24 ಲಕ್ಷಕ್ಕಿಂತ ಅಧಿಕ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ್ದು, ಇದರಿಂದ -ಠಿ;120 ಕೋಟಿ ಆದಾಯ ಬಂದಿದೆ. ಅನ್ಲಾಕ್ 5ರ ಮಾರ್ಗಸೂಚಿ ಪ್ರಕಾರ ಅಕ್ಟೋಬರ್ 17ರಿಂದ ಈ ತಾಣಕ್ಕೆ ಮತ್ತೆ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಡಲಾಗಿದ್ದು, 10 ದಿನಗಳಲ್ಲೇ (ಅ.27ರವರೆಗೆ) 10 ಸಾವಿರ ಜನರು ಭೇಟಿ ನೀಡಿದ್ದಾರೆ.
ಜನನ: 1875, ಅಕ್ಟೋಬರ್ 31 1917: ಬೋರ್ಸಾದ್ನಲ್ಲಿ ಮಾಡಿದ ಭಾಷಣದಿಂದಾಗಿ ಸ್ವಾತಂತ್ರ್ಯ ಕೂಗು ತೀವ್ರ 1923: ನಾಗ್ಪುರ ಸತ್ಯಾಗ್ರಹದ ನೇತೃತ್ವ 1920-1945: ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ 1947 ಆಗಸ್ಟ್ 15- 1950 ಡಿಸೆಂಬರ್ 15: ಕೇಂದ್ರ ಗೃಹ ಮಂತ್ರಿ ಹಾಗೂ ಉಪ ಪ್ರಧಾನಿ ಮರಣ: 1950, ಡಿಸೆಂಬರ್ 15
ರಾಷ್ಟ್ರೀಯ ಏಕತೆಗೆ ವಿಶೇಷ ಕೊಡುಗೆ ನೀಡಿರುವ ಸರ್ದಾರ್ ಪಟೇಲರ ಸಂದೇಶಗಳನ್ನು ಸಾರಲು, ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಏಕತೆಯ ವಿಕಾಸದಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲು 2014ರಿಂದ ಅಕ್ಟೋಬರ್ 31ನ್ನು ರಾಷ್ಟ್ರೀಯ ಏಕತಾ ದಿನದ ರೂಪದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಈ ದಿನದಂದು ದೇಶದ ಬಹುತೇಕ ಜಿಲ್ಲೆಗಳಲ್ಲಿ ಏಕತಾ ಓಟ ಆಯೋಜಿಸಲಾಗುತ್ತದೆ. ಕಳೆದ ವರ್ಷ ‘ರನ್ ಫಾರ್ ಯೂನಿಟಿ’ ಮ್ಯಾರಥಾನ್ದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಈ ಬಾರಿ ಕರೊನಾ ಕಾರಣದಿಂದ ಸಾಂಕೇತಿಕ ಆಚರಣೆ ಅಷ್ಟೇ ನಡೆಯಲಿದೆ.