ನ್ಯೂಸ್

ಮತಾಧಿಕಾರ ಯಾತ್ರೆಗೆ ಇಂದು ರಾಹುಲ್ ಚಾಲನೆ

ಪಟನಾ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತ್ವರಿತ ಪರಿಷ್ಕರಣೆ (ಎಸ್​ಐಆರ್) ಮೂಲಕ ಜನರ ಮತದಾನದ ಹಕ್ಕಿನ ಮೇಲೆ ನಡೆಯುತ್ತಿದೆ ಎನ್ನಲಾದ ದಾಳಿಯ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಇಲ್ಲಿ ‘ವೋಟ್ ಅಧಿಕಾರ್ ಯಾತ್ರಾ’ಗೆ (ಮತಾಧಿಕಾರ ಯಾತ್ರೆ) ಚಾಲನೆ ನೀಡಲಿದ್ದಾರೆ. ಯಾತ್ರೆ ಎರಡು ವಾರ ಕಾಲ ನಡೆಯಲಿದ್ದು ಲೋಕಸಭೆಯ ಪ್ರತಿಪಕ್ಷ ಮುಖಂಡರಾಗಿರುವ ಗಾಂಧಿ ಅಷ್ಟೂ ದಿನ ರಾಜ್ಯದಲ್ಲಿ ಇರುವ ಸಾಧ್ಯತೆಯಿದೆಯೆಂದು ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಶನಿವಾರ ಇಲ್ಲಿ ತಿಳಿಸಿದರು. ಸಸಾರಂನಲ್ಲಿ ಭಾನುವಾರ ಆರಂಭವಾಗುವ ಯಾತ್ರೆ ಸೆಪ್ಟೆಂಬರ್ 1ರಂದು ಪಟನಾದಲ್ಲಿ ಬೃಹತ್ ರ್ಯಾಲಿಯೊಂದಿಗೆ ಮುಕ್ತಾಯವಾಗಲಿದೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಐಎನ್​ಡಿಐಎ ಕೂಟದ ಪರವಾಗಿ ಜನಬೆಂಬಲ ಕ್ರೋಡೀಕರಿಸಲು ಈ ಯಾತ್ರೆ ನೆರವಾಗಲಿದೆ ಎಂದು ಸಿಂಗ್ ಹೇಳಿದರು.