ನ್ಯೂಸ್

ಇಂದು ಚಂದ್ರ ಗ್ರಹಣ: ಎಷ್ಟೊತ್ತಿಗೆ, ಎಲ್ಲೆಲ್ಲಿ ಗೋಚರ... ಇಲ್ಲಿದೆ ವಿವರ

arunakunigal

ನವದೆಹಲಿ: 2020ರಲ್ಲಿ ಸಂಭವಿಸಲಿರುವ ನಾಲ್ಕು ಚಂದ್ರಗ್ರಹಣಗಳಲ್ಲಿ ಎರಡನೇ ಗ್ರಹಣ ಶುಕ್ರವಾರ (ಜೂ.5) ರಾತ್ರಿ ಜರುಗಲಿದೆ.

ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಜನವರಿಯಲ್ಲಿ ಸಂಭವಿಸಿದೆ. ಜೂ. 5ರ ಗ್ರಹಣ ಪೂರ್ಣ ಭಿನ್ನವಾಗಿರಲಿದ್ದು, ಚಂದ್ರ ತನ್ನ ಅರ್ಧಾಕಾರದಲ್ಲಿ ಕಾಣದೇ ಪೂರ್ಣ ಪ್ರಮಾಣದಲ್ಲೇ ಗೋಚರಿಸಲಿದ್ದಾನೆ.

ಇದಕ್ಕೆ ನೆರಳು (ಪೆನಂಬ್ರಲ್) ಚಂದ್ರಗ್ರಹಣ ಎನ್ನಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಗ್ರಹಣ ಗೋಚರವಾಗಲಿದ್ದು, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ರಾತ್ರಿ 11.15ಕ್ಕೆ ಗ್ರಹಣ ಆರಂಭವಾಗಲಿದ್ದು, ಶನಿವಾರ ಬೆಳಗಿನ ಜಾವ 2.34ಕ್ಕೆ ಅಂತ್ಯವಾಗಲಿದೆ. ಅಂದರೆ ಸುಮಾರು 3.18 ತಾಸು ಗ್ರಹಣ ನಡೆಯಲಿದ್ದು, ರಾತ್ರಿ 12.45ರ ಸುಮಾರಿಗೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರವಾಗಲಿದೆ.

ಹವಾಮಾನ ಪರಿಸ್ಥಿತಿ ತಿಳಿಯಾಗಿದ್ದರೆ ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್‌ಗಳ ಸಹಾಯವಿಲ್ಲದೇ ಗ್ರಹಣವನ್ನು ವೀಕ್ಷಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಜೂನ್ ಮತ್ತು ಜುಲೈನ ಮಧ್ಯದ ಒಂದು ತಿಂಗಳ ಅವಧಿಯಲ್ಲಿ ಈ ಬಾರಿ ಒಟ್ಟು ಮೂರು ಗ್ರಹಣಗಳು ಸಂಭವಿಸಲಿವೆ.

ಇವತ್ತಿನ ಗ್ರಹಣ ಇದರಲ್ಲಿ ಮೊದಲನೆಯದಾಗಿದ್ದು, ಜೂನ್ 21ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದೆ. ನಂತರ ಜುಲೈ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. ಜೂನ್ 21ರಂದು ನಡೆಯುವ ಸೂರ್ಯ ಗ್ರಹಣ ಆಫ್ರಿಕಾ, ಆಗ್ನೇಯ ಯುರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಗೋಚರಿಸಲಿದೆ.