ಸೊರಬ: ತಾಲೂಕ 5ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವು ಗುಡಗಿನಕೊಪ್ಪ ಗ್ರಾಮದ ಶರಣ ಲಿಂಗಪ್ಪ ಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಡಿ.14ರಂದು ಮಾವಲಿ ಶ್ರೀ ಉಮಾಮಹೇಶ್ವರ ಗ್ರಾಮಾಂತರ ಪ್ರೌಢಶಾಲೆ ಅವರಣದಲ್ಲಿ ನಡೆಯಲಿದೆ.
ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸುವರು. ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೃತ್ಯುಂಜಯಪ್ಪ ಗೌಡ ಅಧ್ಯಕ್ಷತೆ ವಹಿಸುವರು. ನಿವೃತ ಶಿಕ್ಷಕ ಯೋಗೇಶಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಬೆಳಗ್ಗೆ 11.30ರಿಂದ 1.30ರವರೆಗೆ ನಡೆಯುವ ಗೋಷ್ಠಿಯಲ್ಲಿ ಸಮಾಜದಲ್ಲಿ ವಚನ ಸಾಹಿತ್ಯದ ಅರಿವಿನ ಅಗತ್ಯತೆ ಕುರಿತು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತಪ್ರಭು ಸ್ವಾಮೀಜಿ ಆಶೀರ್ವಚನ, 1.30ರಿಂದ 2.30ರವರಗೆ ಮಹಿಳಾ ಗೋಷ್ಠಿಯಲ್ಲಿ ಅಕ್ಕಮಹಾದೇವಿ ವಚನಗಳ ಪ್ರಸ್ತುತತೆ ಕುರಿತು ಸೊರಬದ ಪದವಿ ಕಾಲೇಜಿನ ಉಪನ್ಯಾಸಕಿ ಪವಿತ್ರಾ ಚಕ್ರಪಾಣಿ ಉಪನ್ಯಾಸ ನೀಡುವರು. ಆಕಾಶವಾಣಿ ಕಲಾವಿದ ಎಚ್.ಗುರುಮೂರ್ತಿ ಮತ್ತು ತಂಡದಿಂದ ಸಂಗೀತ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವರುದ್ರಪ್ಪ ಜೋಗಿ ಗೆಂಡ್ಲ ಮತ್ತು ತಂಡ ವಚನ ಗಾಯನ ನಡೆಸಿಕೊಡುವರು. ಸಂಜೆ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯವನ್ನು ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ವಹಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಪರಿಚಯ: ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಿಂಗಪ್ಪ ಗೌಡ ಅವರು ತಾಲೂಕಿನ ಚಿಕ್ಕಬ್ಬೂರಿನಲ್ಲಿ 1938ರ ಫೆ.6ರಂದು ಜನಿಸಿದ್ದಾರೆ. ತಂದೆ ಶಿವರುದ್ರಪ್ಪ, ತಾಯಿ ಚನ್ನಮ್ಮ . ಪಿಯುಸಿವರಗೆ ವಿದ್ಯಾಭ್ಯಾಸ ಮಾಡಿದ ಅವರು ತೊಗರ್ಸಿ ಪ್ರೌಢಶಾಲೆಯಲ್ಲಿ ಗೌರವ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದಾರೆ. ಮಕ್ಕಳಿಗೆ ಶಿವಾನುಭವ ಶಿಕ್ಷಣ ನೀಡಿ ಶಿವಾನುಭ ಪರೀಕ್ಷೆ ನಡೆಸಿದ್ದಾರೆ. 25 ವರ್ಷ ನೆಗವಾಡಿ ಗ್ರಾಪಂ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶಸಿ ಹಣ ಸಂಗ್ರಹ ಮಾಡಿ ತತ್ತೂರು ಆಸ್ಪತ್ರೆ ಸ್ಥಾಪನೆಗೆ ದಾನ ನೀಡಿದ್ದಾರೆ. ಜಾತ್ರೆ, ಸಂಕ್ರಾಂತಿ, ಮಠ ಮಂದಿರಗಳಲ್ಲಿ ನಡೆಯುವ ಶಿವಾನುಭವ ಗೋಷ್ಠಿಗಳಲ್ಲಿ ಶರಣ ಚಿಂತನೆಗಳ ಬಗ್ಗೆ ಪ್ರವಚನ ಮಾಡಿದ್ದಾರೆ. ಆರನೇ ವಯಸ್ಸಿನಲ್ಲೇ ಜಡೆಯ ಶ್ರೀ ಪ್ರಭುಕುಮಾರ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದಿದ್ದಾರೆ.