ನವದೆಹಲಿ: ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಶುಕ್ರವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್. ಸೋಮನಾಥ ಹೇಳಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಮರಣಾರ್ಥವಾಗಿ ಆ. 23ನ್ನು ರಾಷ್ಟ್ರೀಯ ಬಾಹ್ಯಾ ಕಾಶ ದಿನವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತ್ತು.
ಚಂದ್ರಯಾನ 4-5 ವಿನ್ಯಾಸ ಪೂರ್ಣಗೊಂಡಿದ್ದು, ಅದಕ್ಕಾಗಿ ಸರ್ಕಾರದ ಅನುಮೋದನೆಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರಯಾನ-4 ಮಿಷನ್ ಕೂಡ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಗುರಿ ಹೊಂದಿದೆ. ಜತೆಗೆ ಚಂದ್ರನ ಕಲ್ಲುಗಳು ಮತ್ತು ಮಣ್ಣನ್ನು ಭೂಮಿಗೆ ಮರಳಿ ತರುವುದು ಇದರ ಉದ್ದೇಶವಾಗಿದೆ. ಚಂದ್ರನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವುದು, ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ನಡೆಸುವುದು ಇನ್ನಿತರ ಪ್ರಯೋಗಗಳನ್ನು ಚಂದ್ರಯಾನ ಯೋಜನೆ ಒಳಗೊಂಡಿದೆ ಎಂದು ಸೋಮನಾಥ ಮಾಹಿತಿ ನೀಡಿದರು.
ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅಗತ್ಯತೆಗಳನ್ನು ಪೂರೈಸಲು ಮುಂದಿನ ಐದು ವರ್ಷಗಳಲ್ಲಿ 70 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಉದ್ದೇಶಿಸಿದೆ. ನ್ಯಾವಿಗೇಷನ್ ಮತ್ತು ಸಮಯ ಸೇವೆ, ಹವಾಮಾನ ಉಪಗ್ರಹಗಳು, ರಿಮೋಟ್ ಸೆನ್ಸಿಂಗ್, ಹೈ ರೆಸಲ್ಯೂಷನ್ ಇಮೇಜಿಂಗ್ ಇನ್ನಿತರ ಉಪಗ್ರಹಗಳು ಇದರಲ್ಲಿ ಒಳಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.