ನಾಡಿನ ಕೋಟ್ಯಂತರ ಬಡ ಕುಟುಂಬಗಳ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬದುಕಿನ ದಾರಿ ತೋರಿಸಿಕೊಟ್ಟವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ‘ತ್ರಿವಿಧ ದಾಸೋಹಿ’, ‘ನಡೆದಾಡುವ ದೇವರು’ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ. ಈ ಮಠದಲ್ಲಿ ಓದಿ ದೊಡ್ಡವರಾದ ನೂರಾರು ಜನರು ಸಮಾಜದಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆ ಪೈಕಿ ಇಬ್ಬರು ಮಹನೀಯರು ಶ್ರೀಗಳ 118ನೇ ಜನ್ಮದಿನದ ಸಂದರ್ಭದಲ್ಲಿ (ಏ.1) ಅವರ ಬದುಕು-ಸಾಧನೆ, ಒಡನಾಟವನ್ನು ಇಲ್ಲಿ ಸ್ಮರಿಸಿದ್ದಾರೆ.
ನಾನು ಶ್ರೀ ಸಿದ್ಧಗಂಗಾ ಮಠದಲ್ಲಿ 1975ರಿಂದ 1979ರವರೆಗೆ ಪ್ರೌಢಶಿಕ್ಷಣ ವಿದ್ಯಾರ್ಥಿಯಾಗಿದ್ದೆ. ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿದ್ದು ನನ್ನ ಜೀವನದಲ್ಲಿಯೇ ಮಹತ್ವದ ಮೈಲಿಗಲ್ಲು ಹಾಗೂ ಭವಿಷ್ಯದ ದಿಕ್ಸೂಚಿಯಾಗಿತ್ತು. ಶ್ರೀ ಶಿವಕುಮಾರ ಸ್ವಾಮೀಜಿಯವರು ನನ್ನಂತಹ ಅದೆಷ್ಟೋ ಬಡ, ಕೆಳವರ್ಗದ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪಾಲಿಗೆ ಶೈಕ್ಷಣಿಕ ಭಗೀರಥರು. ಅವರ ಜನ್ಮದಿನದ ಸಂದರ್ಭದಲ್ಲಿ ನಾನು ಇಲ್ಲಿ ಕೃಷಿ ಸಚಿವನಾಗಿ ಅಥವಾ ರಾಜಕಾರಣಿಯಾಗಿ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿಲ್ಲ. ಬದಲಿಗೆ ಶ್ರೀ ಶಿವಕುಮಾರ ಸ್ವಾಮಿಗಳ ವಿಧೇಯ ಶಿಷ್ಯನಾಗಿ, ಮಠದ ಅನುಯಾಯಿಯಾಗಿ ನನ್ನ ಅನುಭವವನ್ನು ಸ್ಮರಿಸುತ್ತಿದ್ದೇನೆ.
ಸ್ವಾಮೀಜಿ ಅವರನ್ನು ನಡೆದಾಡುವ ದೇವರು ಎಂದು ಕರೆಯಲು ಕಾರಣವೇನು ಎಂಬುದನ್ನು ಪ್ರತ್ಯಕ್ಷವಾಗಿ ಕಾಣುವ ಸೌಭಾಗ್ಯ ನನ್ನದಾಗಿರುವುದಕ್ಕೆ ಧನ್ಯತೆಯ ಭಾವ ನನ್ನಲ್ಲಿದೆ. ಪ್ರತಿನಿತ್ಯ ಮುಂಜಾನೆ ನಾಲ್ಕು ಗಂಟೆಗೆ ತಮ್ಮ ದಿನವನ್ನು ಆರಂಭಿಸುತ್ತಿದ್ದ ಸ್ವಾಮೀಜಿಗಳ ದಿನಚರಿ ನಮ್ಮೆಲ್ಲರಿಗೂ ಮಾದರಿಯಾಗಿತ್ತು. ಅವರ ಬದುಕಿನ ಹಾದಿಯನ್ನು ನೋಡ ನೋಡುತ್ತಲೇ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲಾರಂಭಿಸಿದೆವು. ಮುಂಜಾನೆ ಎದ್ದು ನಿತ್ಯ ಕರ್ಮ ಮುಗಿಸಿ ಒಂದು ಗಂಟೆ ಧ್ಯಾನಾಸಕ್ತರಾಗುತ್ತಿದ್ದ ಅವರು ಇಷ್ಟ ಲಿಂಗ ಪೂಜೆಯಲ್ಲಿ ತೊಡಗುತ್ತಿದ್ದರು. ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ದರ್ಶನ ನೀಡುವ ಜತೆ ಮುಂಜಾನೆ ಹಾಗೂ ಸಂಜೆ ಮಠದಲ್ಲಿ ನಡೆಯುವ ಮಕ್ಕಳ ಕಾರ್ಯಕ್ರಮದಲ್ಲಿ ಸದಾ ಪಾಲ್ಗೊಳ್ಳುತ್ತಿದ್ದರು. ಮಠದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದ ಶ್ರೀಗಳು ದಿನಂಪ್ರತಿ ಎಲ್ಲ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸುತ್ತಿದ್ದರು. ಸಿದ್ಧಗಂಗಾ ಮಠದಲ್ಲಿ ಓದಿದ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಲು ದಾರಿದೀಪದಂತೆ ನಿಂತಿದ್ದರು.
ಆ ಕಾಲದಲ್ಲಿ ಶಿಕ್ಷಣವು ಮೇಲ್ವರ್ಗದ ಜನರಿಗೆ ಸೀಮಿತವಾಗಿತ್ತು. ಅಂಥ ಕಾಲಘಟ್ಟದಲ್ಲಿ ಶಿವಕುಮಾರ ಸ್ವಾಮೀಜಿಯವರು ಸಿದ್ಧಗಂಗಾ ವಿದ್ಯಾಸಂಸ್ಥೆಯ ಮೂಲಕ ಬಡವ, ಶ್ರೀಮಂತ, ಜಾತಿ, ಧರ್ಮ ಮುಂತಾಗಿ ಯಾವುದೇ ಭೇದಭಾವ ಮಾಡದೇ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಧಾರೆ ಎರೆದರು. ಸ್ವಾಮಿಗಳು ಸುದೀರ್ಘ 111 ವರ್ಷಗಳ ಕಾಲ ಜನರಿಗಾಗಿ, ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದವರು. ಸ್ವತಃ ವಿದ್ಯಾವಂತರಾಗಿದ್ದ ಶ್ರೀಗಳು ಸಿದ್ಧಗಂಗಾ ಶಿಕ್ಷಣ ಟ್ರಸ್ಟನ್ನು ಸ್ಥಾಪಿಸಿ, ನರ್ಸರಿಯಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜಿನವರೆಗೂ ಪ್ರಸ್ತುತ ಸುಮಾರು 132 ಶಿಕ್ಷಣ ಸಂಸ್ಥೆಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಬಸವಣ್ಣನವರ ಆರಾಧಕರಾಗಿದ್ದ ಶ್ರೀಗಳು ತ್ರಿವಿಧ ದಾಸೋಹದ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಇಡೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸಿದ್ಧಗಂಗಾ ಮಠದ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳಿದ್ದಾರೆ. ನಿತ್ಯವೂ ಮಠದಲ್ಲಿ ಸುಮಾರು 8000 ವಿದ್ಯಾರ್ಥಿಗಳು, 2 ಸಾವಿರದಷ್ಟು ಭಕ್ತರು ಸೇರಿ ಪ್ರತಿನಿತ್ಯ 10 ಸಾವಿರ ಮಂದಿ ಮೂರು ಹೊತ್ತು ಅನ್ನ ಪ್ರಸಾದ ಸೇವಿಸುತ್ತಿದ್ದಾರೆ.
ಸಿದ್ಧಗಂಗಾ ಮಠ ಕೇವಲ ಧಾರ್ವಿುಕ ಕೇಂದ್ರವಲ್ಲ, ವಿದ್ಯೆಯ ತೀರ್ಥಕ್ಷೇತ್ರವೂ ಹೌದು. 124 ಕಾಲೇಜುಗಳನ್ನು ನಿರ್ವಹಿಸುವ ಈ ಮಠದ ಶಿಕ್ಷಣ ಸಂಸ್ಥೆಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿವೆ. ಇವುಗಳಲ್ಲಿ ಕೆಲವು ಅನುದಾನಿತ, ಮತ್ತೆ ಕೆಲವು ಅನುದಾನರಹಿತವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜ ನಿರ್ವಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಶ್ರೀ ಶಿವಕುಮಾರ ಸ್ವಾಮೀಜಿ ಭೌತಿಕವಾಗಿ ಈಗ ನಮ್ಮೊಂದಿಗೆ ಇಲ್ಲ. ಆದರೆ ತ್ರಿವಿಧ ದಾಸೋಹದ ಮೂಲಕ ಇಂದಿಗೂ ಅವರು ಕರುನಾಡಿನ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ಇಂದು ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಕಲಿತ ಅದೆಷ್ಟೋ ಜನರು ವೈದ್ಯಕೀಯ, ಕೃಷಿ, ರಾಜಕೀಯ, ಸಿನಿಮಾ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ.
ಇವತ್ತಿಗೂ ಅನ್ನಕ್ಕಾಗಿ ಸಿದ್ಧಗಂಗೆಯಲ್ಲಿ ಶ್ರೀಗಳು ಹಚ್ಚಿದ ಒಲೆ ಉರಿಯುತ್ತಲೇ ಇದೆ. ಆಶ್ರಯಕ್ಕಾಗಿ ಅವರು ಅಡಿಗಲ್ಲಿಟ್ಟ ತಾಣ ಸೇವಾಸೌಧವಾಗಿ ಬೆಳೆಯುತ್ತಲೇ ಇದೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳು ಜ್ಞಾನ ಪಡೆಯಲೆಂದು ಶ್ರೀಗಳು ಉರಿಸಿದ ಜ್ಞಾನದ ದೀಪ ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ಜ್ಞಾನ ಪಡೆದವರು ದೇಶ ಮಾತ್ರವಲ್ಲದೆ, ವಿಶ್ವದೇಗುಲಕ್ಕೆ ಜ್ಞಾನವನ್ನು ಬೆಳಗುತ್ತಿದ್ದಾರೆ. ಶ್ರೀಗಳ ಜನ್ಮದಿನವಾದ ಇಂದು ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳೋಣ. ಅವರಂತೆ ನಿಸ್ವಾರ್ಥ ಬದುಕನ್ನು ಬದುಕಲು ಪ್ರಯತ್ನಿಸೋಣ.
ನಾನು ಏಳನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಮೂಲತಃ ಚಾಮರಾಜನಗರ ಜಿಲ್ಲೆಯ ಸಾಮಾನ್ಯ ಕುಟುಂಬ ನಮ್ಮದು. ತಂದೆ ಲಾರಿ ಚಾಲಕರಾಗಿದ್ದರು. ನಮ್ಮ ಅಣ್ಣನಿಗೆ ಕ್ರಿಕೆಟ್ ಆಟದ ಹುಚ್ಚು ಹೆಚ್ಚಾಗಿತ್ತು. ಆದ್ದರಿಂದ ಆತನನ್ನು ಮಠಕ್ಕೆ ಸೇರಿಸಬೇಕೆಂದು ನಿರ್ಧರಿಸಿದರು. ಅಣ್ಣನ ಜೊತೆಗೆ ನನ್ನನ್ನೂ ಮಠಕ್ಕೆ ಸೇರಿಸಿದರು. ಅದೇ ನನ್ನ ಜೀವನದಲ್ಲಿ ಪ್ರಮುಖ ತಿರುವು ಆಯಿತು. ಶ್ರೀ ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ನೀಡಿದ ಕೊಡುಗೆ, ಮಾಡಿದ ಸೇವೆ ಎಷ್ಟು ಹೇಳಿದರೂ ಕಡಿಮೆಯೇ. ತಮ್ಮ ಜೀವಿತದ ಇತ್ತೀಚಿನವರೆಗೆ ಸ್ವತಃ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.
ಸುದೀರ್ಘ ಬದುಕಿನ ಕೊನೆಯವರೆಗೂ ಬೆಳಗಿನ ಜಾವ 3 ಗಂಟೆಗೆ ಎದ್ದು ಶಿವಪೂಜೆ ಮಾಡುವುದು, ತಡರಾತ್ರಿವರೆಗೆ ಸ್ವಲ್ಪವೂ ಆಲಸ್ಯ ಇಲ್ಲದಂತೆ ಒಂದಲ್ಲ ಒಂದು ಕೆಲಸದಲ್ಲಿ ಮಗ್ನರಾಗುತ್ತಿದ್ದ ಸ್ವಾಮೀಜಿಯ ದಿನಚರಿಯೇ ನಮಗೆಲ್ಲ ಬಹುದೊಡ್ಡ ಅಚ್ಚರಿ. ದಿನಪೂರ್ತಿ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದರು. ವೇಗವಾಗಿ ನಡೆಯುತ್ತಿದ್ದರು. ಪ್ರತಿದಿನ ಸಂಜೆ ಸಾಮೂಹಿಕ ಪ್ರಾರ್ಥನೆಯ ನಂತರ ಸ್ವಾಮೀಜಿ ಹೇಳುತ್ತಿದ್ದ ನೀತಿಕತೆಗಳಂತೂ ಬಹಳಷ್ಟು ಜನರ ಬದುಕಿನ ದಿಕ್ಕನ್ನು ಬದಲಿಸಿವೆ. ಅದರಿಂದ ಅಸಂಖ್ಯಾತ ವಿದ್ಯಾರ್ಥಿಗಳ ಜೀವನ ರೂಪುಗೊಂಡಿದೆ. ಆ ಚಿಕ್ಕ ಚಿಕ್ಕ ಕತೆಗಳು ಎಷ್ಟು ಗಾಢವಾದ ಪರಿಣಾಮ ಬೀರಿವೆ ಎಂಬುದಕ್ಕೆ ಇಷ್ಟು ವರ್ಷಗಳಾದರೂ ಇಂದಿಗೂ ಆಗಾಗ ಸ್ವಾಮೀಜಿ ಹೇಳುತ್ತಿದ್ದ ಕತೆಗಳು ನನಗೆ ನೆನಪಾಗುತ್ತೆ.
ಸ್ವಾಮೀಜಿಯ ಮಾತುಗಳು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಬಗೆಯನ್ನು ಹೇಳಿಕೊಡುತ್ತಿದ್ದವು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಲಗೊಳಿಸುತ್ತಿದ್ದವು. ಇದರಿಂದ ಮುಂದೆ ನನ್ನ ಉನ್ನತ ಅಧ್ಯಯನದ ಸಂದರ್ಭದಲ್ಲಿ ಬಹಳ ಸಹಾಯವಾಯಿತು. ಮಠಕ್ಕೆ ಸೇರುವವರೆಗೆ ಆವರೇಜ್ (ಸಾಮಾನ್ಯ) ವಿದ್ಯಾರ್ಥಿಯಾಗಿದ್ದ ನಾನು ಮಠದ ಶಿಸ್ತು, ಸಂಸ್ಕೃತಿಯಿಂದ ಪ್ರೇರಿತನಾಗಿ ಓದಿನ ಕಡೆ ಹೆಚ್ಚು ಗಮನ ನೀಡಿದೆ. ಹತ್ತನೇ ತರಗತಿಯಲ್ಲಿ ಅತ್ಯಂತ ಕಡಿಮೆ ಅಂಕಗಳ ಅಂತರದಲ್ಲಿ ರ್ಯಾಂಕ್ ವಂಚಿತನಾದೆ. ಮುಂದೆ ಪಿಯುಸಿ ಮುಗಿಸಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ನಲ್ಲಿ ಗೋಲ್ಡ್ ಮೆಡಲ್ ಪಡೆದು, ರಾಜಸ್ಥಾನದ ಉದಯಪುರದಲ್ಲಿ ಎಂ.ಡಿ. ಮಾಡಿದೆ. ಪ್ರತಿಷ್ಠಿತ ಏಮ್ಸ್ನಲ್ಲಿ ಡಿಎಂ ಮಾಡಿ ಹೃದ್ರೋಗ ತಜ್ಞನಾಗಿ ಜಯದೇವ ಆಸ್ಪತ್ರೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಆಗಿದ್ದೇನೆ.
ಚಿಕ್ಕವರಿದ್ದಾಗ ಮಠದಲ್ಲಿ ಪ್ರತಿದಿನ ಬೆಳಗ್ಗೆ, ಚಳಿಯಲ್ಲಿ ಕೂಡ, ಕೇವಲ ಒಂದು ಟವೆಲ್ ಹೊದ್ದು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದೆವು. ಮುಂದೆ ನಾನು ದೆಹಲಿಯ ಏಮ್ಸ್ನಲ್ಲಿ ಡಿ.ಎಂ. ಮಾಡುವಾಗ 4-5 ಡಿಗ್ರಿ ಉಷ್ಣಾಂಶವಿರುತ್ತಿತ್ತು. ಅಲ್ಲಿ ಉಳಿದವರರೆಲ್ಲರೂ ಸ್ವೆಟ್ಟರ್, ಜರ್ಕಿನ್ಗಳನ್ನು ತೊಡುತ್ತಿದ್ದರು. ನಾನು ಒಂದು ದಿನವೂ ಸ್ವೆಟರ್ ತೊಡಲಿಲ್ಲ. ಇದು ಒಂದು ಚಿಕ್ಕ ಉದಾಹರಣೆಯಷ್ಟೆ. ಒಟ್ಟಿನಲ್ಲಿ ನಾನು ಚಾಮರಾಜನಗರ ಬಿಟ್ಟು ಸಿದ್ದಗಂಗಾ ಮಠಕ್ಕೆ ವಿದ್ಯಾಭ್ಯಾಸಕ್ಕೆ ಬರದೇ ಹೋಗಿದ್ದರೆ ಇಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂಬುದು ಸತ್ಯ.