ಮೇಲುಕೋಟೆ: ಇಲ್ಲಿನ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಅ.20 ರಂದು ನರಕ ಚತುರ್ದಶಿ ಉತ್ಸವ ವೈಭವದಿಂದ ನೆರವೇರಲಿದೆ.
ರಾತ್ರಿ ಪಟಾಕಿ ಸಿಡಿಮದ್ದುಗಳ ಸಮೇತ ಚೆಲುವನಾರಾಯಣನಿಗೆ ಉತ್ಸವ ನೆರವೇರಲಿದೆ. ಎರಡನೇ ಸ್ಥಾನಿಕರ ನೆಲೆಯಲ್ಲಿ ಸವಿತಾ ಸಮಾಜದವರು ಉತ್ಸವವನ್ನು ವಿಶೇಷ ಮಂಗಳವಾದ್ಯದೊಂದಿಗೆ ನಡೆಸಿಕೊಡಲಿದ್ದಾರೆ. ಸೋಮವಾರ ಬೆಳಗ್ಗೆ ರಾಮಾನುಜಾಚಾರ್ಯರ ಸಮೇತ ಅಭಿಷೇಕ ನೆರವೇರಲಿದೆ.
ಈ ಹಿಂದೆ ನರಕ ಚತುರ್ದಶಿಯಂದು ಟಿಪ್ಪು ಸುಲ್ತಾನ್ ಮೈಸೂರು ರಾಜಮನೆತನಕ್ಕೆ ನಿಷ್ಠರಾಗಿದ್ದ ಮಂಡಯಂ ಅಯ್ಯಂಗಾರ್ ಮನೆತನಗಳ ಮೇಲೆ ದಾಳಿ ಮಾಡಿ ಹತ್ಯಾಕಾಂಡ ಮಾಡಿದ ಕಹಿ ನೆನಪಿರುವ ಕಾರಣ ಮೇಲುಕೋಟೆ ಮಂಡಯಂ ಅಯ್ಯಂಗಾರ್ ಕುಟುಂಬಗಳು ದೀಪಾವಳಿಯ ಮೊದಲ ದಿನವನ್ನು ಆಚರಿಸುವುದಿಲ್ಲ. ಆದರೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಆಚರಣೆಯಿದೆ. ಉಳಿದಂತೆ ಅರ್ಚಕರು, ಸ್ಥಾನೀಕರು ಮತ್ತು ಪರಿಚಾರಕರ ಇತರ ಕೈಂಕರ್ಯಪರರ ಮನೆಗಳಲ್ಲಿ ಹಾಗೂ ಇತರ ಜನಾಂಗದವರು ನರಕ ಚತುರ್ದಶಿ ಹಬ್ಬ ಆಚರಣೆ ಮಾಡುತ್ತಾರೆ.