| ವಿನೋದ್ ಕಾಮತ್
ಪ್ರೀತಿ, ಸಾಮರಸ್ಯ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬ ಸಂಕ್ರಾಂತಿ. ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ವಾತಾವರಣ ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಹೆಚ್ಚು ಲಾಭಕರ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸಂಕ್ರಾಂತಿಯಲ್ಲಿ ಎಳ್ಳನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ, ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.
ಮಕರಸಂಕ್ರಾಂತಿಯಿಂದ ರಥಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತೆôದೆಯರು ದಾನ ಮಾಡಿ, ಎಳ್ಳುಬೆಲ್ಲ ಕೊಡುತ್ತಾರೆ.
ಬಾಗಿನ ಮಹತ್ವ: ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿ ಇರುವ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ. ಇತ್ತೀಚೆಗೆ ಸಾಬೂನು ಇಡುವ ಡಬ್ಬಿ, ಸ್ಟೀಲ್ಪಾತ್ರೆ, ಪ್ಲಾಸ್ಟಿಕ್ನಂಥ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿ ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ವಿುಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಸಾಧನೆಗೆ ಪೂರಕ ಹಾಗೂ ಮಾರ್ಗದರ್ಶಕವಾಗಿರುವ ವಸ್ತುಗಳನ್ನು ಕೊಡಬೇಕು.
ಸಂಕ್ರಾಂತಿಯ ಹಬ್ಬಕ್ಕೆ ಮುತೆôದೆಯರು ಸಣ್ಣ ಮಣ್ಣಿನ ಮಡಕೆಗಳನ್ನು ಹಂಚುತ್ತಾರೆ. ಅವುಗಳಿಗೆ ಅರಿಶಿಣ, ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿಣ-ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆ ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನ ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.
ಪವಿತ್ರ ನದಿಗಳಲ್ಲಿ ತೀರ್ಥಸ್ನಾನ: ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯ ಲಭಿಸುತ್ತದೆ. ಈ ದಿನ ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅಥವಾ ಎಳ್ಳು-ಅಕ್ಕಿ ಮಿಶ್ರಿತ ಅಘರ್Âವನ್ನು ಅರ್ಪಣೆ ಮಾಡುತ್ತಾರೆ. ಪರ್ವದ ಈ ದಿನದಂದು ಎಳ್ಳಿಗೆ ವಿಶೇಷ ಮಹತ್ವವಿದೆ. ಎಳ್ಳಿನ ಉಟಣೆ, ಎಳ್ಳುಮಿಶ್ರಿತ ನೀರಿನಿಂದ ಸ್ನಾನ, ಎಳ್ಳುಮಿಶ್ರಿತ ನೀರನ್ನು ಕುಡಿಯುವುದು, ಎಳ್ಳಿನಿಂದ ಹವನ ಮಾಡುವುದು, ಅಡುಗೆಯಲ್ಲಿ ಎಳ್ಳನ್ನು ಉಪಯೋಗಿಸುವುದು ಹಾಗೂ ಎಳ್ಳನ್ನು ದಾನ ಮಾಡುವುದು ಇವೆಲ್ಲ ಪಾಪನಾಶಕ ಕೃತಿಗಳಾಗಿವೆ.
(ಲೇಖಕರು ಸನಾತನ ಸಂಸ್ಥೆಯ ರಾಜ್ಯ ವಕ್ತಾರರು)