ನ್ಯೂಸ್

ಇಂದು ಹಿಜಾಬ್ ಕ್ಲೈಮ್ಯಾಕ್ಸ್?: ವಾದ ಮಂಡನೆ ಅಂತ್ಯಕ್ಕೆ ಸೂಚನೆ; ತೀರ್ಪು ಕಾಯ್ದಿರಿಸುವ ಸಾಧ್ಯತೆ

Webdesk - Ravikanth

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿ ಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಚಾರಣೆ ಯನ್ನು ಶುಕ್ರವಾರ ಪೂರ್ಣಗೊಳಿಸುವುದಾಗಿ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. 2 ವಾರಗಳಿಂದ ನಡೆಯುತ್ತಿರುವ ವಿಚಾರಣೆ ಅಂತಿಮ ಹಂತ ತಲುಪಲಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸುವ ಸಾಧ್ಯತೆಯಿದೆ. ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು. ಎರಡೂವರೆ ತಾಸಿಗೂ ಅಧಿಕ ಸಮಯ ವಾದ-ಪ್ರತಿವಾದ ಆಲಿಸಿದ ಪೀಠ, ಉಳಿದವರು ಶುಕ್ರವಾರವೇ ವಾದ ಮಂಡನೆ ಪೂರ್ಣಗೊಳಿಸುವಂತೆ ಸೂಚಿಸಿತು. ಜತೆಗೆ, ಎಲ್ಲ ಅರ್ಜಿದಾರರು, ಪ್ರತಿವಾದಿಗಳು, ಮಧ್ಯಂತರ ಅರ್ಜಿ ದಾರರು ಲಿಖಿತ ವಾದಾಂಶ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು.

ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ: ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡಿಸಿ, ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ನೀತಿ ರೂಪಿಸಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು. ನಿಯಮಗಳಿರುವುದು ಧಾರ್ವಿುಕ ಆಚರಣೆಗಳಿಗಾಗಲ್ಲ ಎಂದರು.

ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ: ವಿಚಾರಣೆ ಆರಂಭ ವಾಗುತ್ತಿದ್ದಂತೆಯೇ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಉಡುಪಿಯ ಕಾಲೇಜಿನ ಶಿಕ್ಷಕರು ಹಿಜಾಬ್​ಗೆ ಅನುಮತಿ ನೀಡದ್ದಕ್ಕೆ ಕೆಲ ಸಂಘಟನೆಗಳು ಬೆದರಿಕೆ ಹಾಕಿದ ಬಗ್ಗೆ ನೀಡಲಾಗಿದ್ದ ದೂರಿನ ಮೇರೆಗೆ ಒಂದು ಎಫ್​ಐಆರ್ ದಾಖಲಿಸಲಾಗಿದೆ. ಈ ಎಫ್​ಐಆರ್​ಗೆ ಸಂಬಂಧಿಸಿದ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತಿದ್ದೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದೆಹಲಿ ಪ್ರವೇಶಿಸಿದ ವಿವಾದ: ಈಶಾನ್ಯ ದೆಹಲಿಯ ಮುಸ್ತಾಫಾಬಾದ್​ನ ಸರ್ಕಾರಿ ಶಾಲೆಯೊಂದರ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಹಿಜಾಬ್ ಧರಿಸಿ ತರಗತಿಗೆ ಬಾರದಂತೆ ನಿರ್ಬಂಧಿಸಲಾಗಿದೆ ಎನ್ನಲಾಗಿದ್ದು ಕರ್ನಾಟಕದ ವಿವಾದದ ಕಿಚ್ಚು ರಾಷ್ಟ್ರ ರಾಜಧಾನಿಗೂ ಹಬ್ಬಿದಂತಾಗಿದೆ. ಘಟನೆಯನ್ನು ವಿವರಿಸಿದ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದ್ದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಬಾಲಕಿ ತುಖ್ಮಿಪುರದ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಎಂದು ಅಫ್ರೋಜ್ ಎಂಬಾತ್ ಟ್ವೀಟ್ ಮಾಡಿದ್ದಾನೆ.

ಇಸ್ಲಾಂಗೂ ಮುನ್ನವೇ ಹಿಜಾಬ್ ಇತ್ತು

ನ್ಯೂ ಹಾರಿಜಾನ್ ಕಾಲೇಜಿನ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬ್ದುಲ್ ಮಜೀದ್ ದಾರ್, ಇಸ್ಲಾಂ ಧರ್ಮಕ್ಕೂ ಮುನ್ನವೇ ಹಿಜಾಬ್ ಧರಿಸುವ ಪದ್ಧತಿ ಚಾಲ್ತಿಯಲ್ಲಿತ್ತು ಮತ್ತು ಕುರಾನ್ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ, ಮುಖ, ಎದೆ ಭಾಗವನ್ನು ಮುಚ್ಚಲು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಹಿಜಾಬ್ ಮಹಿಳೆಯ ಖ್ಯಾತಿಯನ್ನು ಹೆಚ್ಚಿಸುತ್ತದೆ, ಶುದ್ಧೀಕರಿಸುತ್ತದೆ. ಅಷ್ಟೇ ಅಲ್ಲ ನಮ್ರತೆಯನ್ನೂ ನೀಡುತ್ತದೆ. ಇದು ನೈತಿಕತೆಯನ್ನು ಹೆಚ್ಚಿಸುತ್ತದೆ. ಪ್ರವಾದಿಯವರು ಹೇಳಿರುವ ಎಲ್ಲದಕ್ಕೂ ನಾವು ಬದ್ಧವಾಗಿರಬೇಕು. ಇಲ್ಲವಾದರೆ ನಾವು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದು ಹಿಜಾಬ್ ಧಾರಣೆಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಎ.ಎಂ. ದಾರ್ ವಾದ

  • ಭಾರತ ಹಿಂದು ರಾಷ್ಟ್ರವೂ ಅಲ್ಲ, ಇಸ್ಲಾಮಿಕ್ ರಾಷ್ಟ್ರವೂ ಅಲ್ಲ. ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯ. ಇಲ್ಲಿ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಲೇಬೇಕು. ನೈತಿಕತೆ ಕಾಪಾಡಲು ಇದು ಅಗತ್ಯ.
  • ಕುರಾನ್​ನ ಎರಡು ಸುರಾಗಳನ್ನು ಪರಿಶೀಲಿಸಬೇಕು. ನಾಲ್ಕು ರೀತಿಯ ವಸ್ತ್ರಗಳನ್ನು ಉಲ್ಲೇಖಿಸಲಾಗಿದೆ. ಬುರ್ಖಾ, ಅಭೇಯ್, ಹೆರಾಮ್ ಹಿಜ್ರಿಗಳನ್ನು ಉಲ್ಲೇಖಿಸಲಾಗಿದೆ. ಇಸ್ಲಾಂಗೂ ಮೊದಲಿನಿಂದಲೂ ತಲೆಯ ಮೇಲೆ ವಸ್ತ್ರ ಧರಿಸುವ ಪದ್ಧತಿ ಜಾರಿಯಲ್ಲಿತ್ತು. ಕ್ರೈಸ್ತರೂ ತಲೆಯ ಮೇಲೆ ವಸ್ತ್ರ ಧರಿಸುತ್ತಿದ್ದರು.
  • ವಿದ್ಯಾರ್ಥಿನಿಯರು ಬುರ್ಖಾ ತೊಡಲು ಅವಕಾಶ ಕೋರುತ್ತಿಲ್ಲ. ಹದೀತ್ ಮತ್ತು ಸುನ್ನಾದಲ್ಲಿರುವ ಅಂಶಗಳನ್ನು ನಾವು ಪಾಲಿಸಲೇಬೇಕು. ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ನೈತಿಕತೆ ಕಾಪಾಡಲು ಇದು ಅಗತ್ಯ.
  • ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಹಿಂದು-ಮುಸ್ಲಿಮರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದು ನಮ್ಮ ಜೀವನ-ಮರಣದ ಪ್ರಶ್ನೆ. ನಾವು ತತ್ವ ಅಥವಾ ಶಿಕ್ಷಣ ಎರಡಲ್ಲಿ ಒಂದು ಬಿಡಬೇಕಾಗುತ್ತದೆ, ನಾವು ಹಿಜಾಬ್ ಬಿಡಲು ಸಾಧ್ಯವಿಲ್ಲ.

ಮಾಧ್ಯಮಗಳಿಗೆ ನಿರ್ಬಂಧವಿಲ್ಲ: ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಬೆನ್ನಟ್ಟಿ ವಿಡಿಯೋ ಹಾಗೂ ಫೋಟೋ ತೆಗೆದು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ, ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಹಾಜರಾಗಿರಲಿಲ್ಲ ಹೀಗಾಗಿ ಅರ್ಜಿ ವಜಾಗೊಳಿಸಲಾಯಿತು.

ಹಿಜಾಬ್ ನಿರ್ಬಂಧದಿಂದ ಶಿಕ್ಷಣದ ಹಕ್ಕಿಗೆ ಧಕ್ಕೆ: ಸರ್ಕಾರ ಸೇರಿ ಎಲ್ಲ ಪ್ರತಿವಾದಿಗಳ ವಾದಕ್ಕೆ ಪ್ರತಿವಾದ ಮಂಡಿಸಿದ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ದೇವದತ್ ಕಾಮತ್, ಹಿಜಾಬ್ ನಿರ್ಬಂಧಿಸುವ ಮೂಲಕ ಸರ್ಕಾರ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಕಸಿದುಕೊಳ್ಳುತ್ತಿದೆ. ಹಿಜಾಬ್ ಧರಿಸಬೇಕು ಎನ್ನುವುದು ವಿದ್ಯಾರ್ಥಿನಿಯರ ನಂಬಿಕೆ. ಇದನ್ನು ನಿರ್ಬಂಧಿಸಲು ಕಾನೂನಿನ ಬೆಂಬಲ ಎಲ್ಲಿದೆ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ವಿುಕ ಗುರುತು ನಿರ್ಬಂಧಿಸುವ ಪ್ರಸ್ತಾಪವಿತ್ತು. ಆದರೆ, ಸಂವಿಧಾನ ರಚನಕಾರರು ಅದನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಈಗ ಸರ್ಕಾರ ಅದನ್ನು ಹೇರಲು ಯತ್ನಿಸುತ್ತಿದೆ. ಹಿಜಾಬ್ ಅತ್ಯಗತ್ಯ ಧಾರ್ವಿುಕ ಆಚರಣೆ ಎನ್ನುವುದು ನಿಜ. ಆದರೆ, ಅದಕ್ಕೆ ಸರ್ಕಾರ ಶಾಸನಬದ್ಧವಾದ ನಿರ್ಬಂಧವನ್ನೇ ವಿಧಿಸಿಲ್ಲ. ಆದ್ದರಿಂದ, ಸರ್ಕಾರದ ಆದೇಶಕ್ಕೆ ಕಾನೂನಿನ ಬಲವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.