ನ್ಯೂಸ್

ಚುಂಬನಕ್ಕೂ ಅಡ್ಡಿಪಡಿಸಿದ ಕೊರೊನಾ ವೈರಸ್​: ತನ್ನ ಪ್ರಜೆಗಳಿಗೆ ಫ್ರಾನ್ಸ್​ ಸರ್ಕಾರದ ಮನವಿ

ಪ್ಯಾರಿಸ್​: ಮಾರಕ ಕೊರೊನಾ ವೈರಸ್​ ಫ್ರಾನ್ಸ್​ ಮೇಲೆಯೂ ಆಕ್ರಮಣ ಮಾಡಿರುವ ಬೆನ್ನಲ್ಲೇ 5 ಸಾವಿರಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ಸರ್ಕಾರ ನಿಷೇಧಿಸಿದೆ. ಅಲ್ಲದೆ, ಪರಸ್ಪರ ಶುಭಕೋರಲು ಚುಂಬಿಸುವುದುನ್ನು ನಿಲ್ಲಿಸುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಫ್ರಾನ್ಸ್​ನಲ್ಲಿ ಹೊಸದಾಗಿ 16 ಕೊರೊನಾ ವೈರಸ್​ ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ ಇಬ್ಬರು ಮೃತರಾಗಿದ್ದಾರೆ. ವೈರಸ್​ ಮತ್ತಷ್ಟು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಫ್ರಾನ್ಸ್​ ತನ್ನ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಇಂದು ಫ್ರಾನ್ಸ್​​ ರಾಜಧಾನಿ ಪ್ಯಾರಿಸ್​ನಲ್ಲಿ ನಿಗದಿಯಾಗಿದ್ದ ಹಾಫ್​ ಮ್ಯಾರಥಾನ್​ ರದ್ದು ಪಡಿಸಲಾಗಿದೆ. ಈಗಾಗಲೇ ವಾರ್ಷಿಕ ಕೃಷಿ ಮೇಳವೂ ರದ್ದಾಗಿದೆ. ಮಾರ್ಚ್​ 15ರಂದು ನಿಗದಿಯಾಗಿರುವ ಮುನ್ಸಿಪಾಲ್​ ಚುನಾವಣೆ ನಿಗದಿಯಂತೆ ನಡೆಯುವ ಸಾಧ್ಯತೆ ಇದೆ.

ಫ್ರಾನ್ಸ್​ನ​ ಆರೋಗ್ಯ ಸಚಿವ ಒಲಿವರ್​ ವೆರಾನ್​ ಈ ಮೊದಲೇ ಶೇಕ್​ ಹ್ಯಾಂಡ್​ ಮಾಡುವುದನ್ನು ಕಡೆಗಣಿಸಿ ಎಂದು ಮನವಿ ಮಾಡಿದ್ದರು. ಇದೀಗ ಶುಭಕೋರುವಾಗ ಚುಂಬಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ಫ್ರಾನ್ಸ್​ನಲ್ಲಿ ಖಚಿತಗೊಂಡ ಕೊರೊನಾ ವೈರಸ್​ ಪ್ರಕರಣಗಳು 100ಕ್ಕೇರಿದೆ. ಸುಮಾರು 59 ಮಂದಿ ಆಸ್ಪತ್ರೆ ಸೇರಿದ್ದು, 12 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಶನಿವಾರ ಮಧ್ಯಾಹ್ನ ವೆರಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)