ನ್ಯೂಸ್

ಹಮಾಸ್‌ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ

ಟೆಲ್‌ಅವಿವ್‌: ಇಸ್ರೇಲ್ ಮೇಲೆ ಹಮಾಸ್‌ ಬಂಡುಕೋರರು ನಡೆಸುತ್ತಿರುವ ದಾಳಿಯನ್ನು ಭಾರತ ಸೇರಿದಂತೆ ಅಮೆರಿಕಾ, ಆಸ್ಟ್ರೇಲಿಯಾಗಳು ಖಂಡಿಸಿದ್ದು ತಿಳಿದ ಸಂಗತಿಯೇ. ಇದೀಗ ಯುಎಇ (ಸಂಯುಕ್ತ ಅರಬ್‌ ಒಕ್ಕೂಟ) ಖಂಡಿಸಿದೆ. ಹಮಾಸ್‌ ದಾಳಿಯನ್ನು ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರವೂ ಇದಾಗಿದೆ.

ಹಮಾಸ್​ ಉಗ್ರರು ಜನವಸತಿ ಪ್ರದೇಶಗಳ ಮೇಲೆ ಗುರಿಯಾಗಿಸಿಕೊಂಡು ರಾಕೆಟ್‌ ದಾಳಿ ನಡೆಸಿದ್ದು, ನಾಗರಿಕರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿರಿಕೊಂಡಿದ್ದು ಸರಿಯಲ್ಲ. ಎರಡೂ ಕಡೆಯ ನಾಗರಿಕರು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಸಂಪೂರ್ಣ ರಕ್ಷಣೆ ಹೊಂದಿರಬೇಕು. ಎಂದಿಗೂ ಯಾರೂ ಸಂಘರ್ಷಕ್ಕೆ ಗುರಿಯಾಗಬಾರದು ಎಂದು ಸಾಮಾಜಿಕ ಜಾಲತಾಣ X(ಎಕ್ಸ್‌)ನಲ್ಲಿ ಪೋಸ್ಟ್‌ ಮಾಡಿ ಯುಎಇ ವಿದೇಶಾಂಗ ಸಚಿವಾಲಯ ಖಂಡನೆ ವ್ಯಕ್ತಪಡಿಸಿದೆ.

ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಯುಎಇ ತನ್ನ ಸಂತಾಪ ವ್ಯಕ್ತಪಡಿಸುತ್ತದೆ. ಯುದ್ಧ ತಡೆಗಟ್ಟಲು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಹಿಂಸಾಚಾರದಿಂದ ಆಗಿರುವ ಜೀವಹಾನಿ ತೀವ್ರ ನೋವುಂಟು ಮಾಡಿದೆ. ನಾಗರಿಕ ಜೀವನ ಮತ್ತು ಸೌಲಭ್ಯಗಳ ಮೇಲೆ ಪರಿಣಾಮ ಬೀರುವ ಹಿಂಸಾಚಾರ ಕೊನೆಗಾಣಿಸಬೇಕು ಎಂದು ಎರಡೂ ಕಡೆಯವರಿಗೆ ಮನವಿ ಮಾಡುತ್ತೇವೆ ಎಂದು ಯುಎಇ ಅಭಿಪ್ರಾಯಪಟ್ಟಿದೆ.

ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಾಲುದಾರರೊಂದಿಗೆ ಯುಎಇ ನಿಕಟ ಸಂಪರ್ಕದಲ್ಲಿದೆ. ಪರಿಸ್ಥಿತಿ ತಿಳಿಗೊಳಿಸಲು ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ಶಾಂತಿ ಮಾತುಕತೆಗೆ ಮುಂದಾಗಬೇಕು. ಪ್ರತಿಯೊಬ್ಬರೂ ಶಾಂತಿ, ಘನತೆಯಿಂದ ಬದುಕಲು ಅರ್ಹರು ಎಂದು ಯುಎಇ ಒತ್ತಿ ಹೇಳಿದೆ.