ತಮಿಳು ನಾಡು ಸಿಎಂ ವಿಜಯ್ ನಟಿಸಿರುವ ಕೊನೆಯ ಸಿನಿಮಾ, ಎಚ್. ವಿನೋದ್ ನಿರ್ದೇಶನದ, ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸಿರುವ ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ "ಜನನಾಯಗನ್' ಇದೇ ಗುರುವಾರ (ಜು. 23) ವಿಶ್ವಾದ್ಯಂತ ರಿಲೀಸ್ ಆಗಲಿದೆ. ದೊಡ್ಡ ಸಿನಿಮಾಗಳ ರಿಲೀಸ್ ದಿನಾಂಕ ಮುಹೂರ್ತದ ದಿನ ಅಥವಾ ಬಿಡುಗಡೆಗೂ ಆರೇಳು ತಿಂಗಳು ಮುನ್ನ ಘೋಷಣೆಯಾಗುವುದು ಸಾಮಾನ್ಯ. ಆದರೆ, ಸೆನ್ಸಾರ್ ಸಮಸ್ಯೆಗೆ ಒಳಗಾಗಿದ್ದ "ಜನನಾಯಗನ್' ಬಿಡುಗಡೆ ದಿನಾಂಕ ಕೇವಲ ಎರಡು ವಾರ ಮುನ್ನವಷ್ಟೇ ಘೋಷಣೆಯಾಗಿದ್ದು, ಕಳೆದ ಗುರುವಾರ (ಜು. 16)ರಿಂದ ಆನ್ಲೈನ್ ಬುಕ್ಕಿಂಗ್ ಪ್ರಾರಂಭವಾಗಿದೆ. ಭಾರತದಲ್ಲಿ ನಾಲ್ಕು ಸಾವಿರ ಸ್ಕ್ರೀನ್ಸ್ ಸೇರಿ ವಿಶ್ವಾದ್ಯಂತ ಎಂಟು ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. 183 ನಿಮಿಷಗಳ ಈ ಸುದೀರ್ಘ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು "ಎ' ಪ್ರಮಾಣಪತ್ರ ನೀಡಿದೆ. ಚಿತ್ರದಲ್ಲಿ ವಿಜಯ್ಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ಮೆನನ್, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಬೆಂಗಳೂರಿನಲ್ಲಿ ದಳಪತಿ ಅಬ್ಬರ
ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲೂ ಕೆಲವೆಡೆ ಬೆಳಗ್ಗೆ 6 ಗಂಟೆಗೇ "ಜನನಾಯಗನ್' ಪ್ರದರ್ಶನ ಆರಂಭವಾಗಲಿದೆ. ಮುಂಜಾನೆ ಸ್ಪೆಷಲ್ ಶೋಗಳಿಗೆ ₹800ರಿಂದ ₹2400ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ನಂತರದ ಶೋಗಳ ದರ ಕಡಿಮೆ ಇರಲಿದೆ. ಬೆಂಗಳೂರಿನಲ್ಲಿ ಜನನಾಯಗನ್ ಸದ್ಯ 95ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ 470ಕ್ಕೂ ಅಧಿಕ ಶೋಗಳು ಇರಲಿವೆ. ಇದು ತಮಿಳು ಅವತರಣಿಕೆ ಮಾತ್ರವಾಗಿದ್ದು, ರಿಲೀಸ್ ಹತ್ತಿರವಾದಂತೆ ತಮಿಳು, ಕನ್ನಡ ಸೇರಿ ಇತರೆ ಭಾಷೆಗಳಲ್ಲಿ ಸ್ಕ್ರೀನ್ ಮತ್ತು ಶೋಗಳ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಿದೆ.
ಹೀಗೊಂದು ದಾಖಲೆ
ಸಾಮಾನ್ಯವಾಗಿ ಪ್ರಾದೇಶಿಕ ಸಿನಿಮಾಗಳಿಗೆ (ಕರ್ನಾಟಕ ಹೊರತುಪಡಿಸಿ!) ಆಯಾ ರಾಜ್ಯಗಳಲ್ಲಷ್ಟೇ ಮುಂಜಾನೆ 6 ಗಂಟೆಗೆ ಶೋಗಳನ್ನು ನೀಡಲಾಗುತ್ತದೆ. ಕೆಲವೊಮ್ಮೆ ಬಾಲಿವುಡ್ ಚಿತ್ರಗಳಿಗೆ ವಿವಿಧ ರಾಜ್ಯಗಳಲ್ಲಿ ಬೆಳಗಿನ ಶೋಗಳನ್ನು ನೀಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ "ಜನನಾಯಗನ್' ಚೆನ್ನೈ, ಬೆಂಗಳೂರು ಮಾತ್ರವಲ್ಲ ದೆಹಲಿ, ಮುಂಬೈ, ಪುಣೆ, ಅಹಮದಾಬಾದ್, ಕೊಚ್ಚಿ, ಕೋಲ್ಕತ್ತಾ ಸೇರಿ ಹಲವು ನಗರಗಳಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ನೀಡಿರುವುದು ವಿಶೇಷ.
ಚೆನ್ನೈನಲ್ಲೇ ಚೀಪ್ ಆ್ಯಂಡ್ ಬೆಸ್ಟ್!
ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಪ್ರಾರಂಭವಾಗುತ್ತಿದ್ದರೆ, ಅತ್ತ ಚೆನ್ನೈನಲ್ಲಿ ಬೆ. 9ಗಂಟೆಯಿಂದ ಶೋಗಳನ್ನು ಪ್ಲ್ಯಾನ್ ಮಾಡಲಾಗಿದೆ. ಹಾಗೇ ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ಗಳಲ್ಲಿ ಟಿಕೆಟ್ ದರ ₹800ರಿಂದ ಶುರುವಾಗಿದ್ದು, ಚೆನ್ನೈನಲ್ಲಿ ಕೇವಲ ₹54.35 ಟಿಕೆಟ್ ದರ ನಿಗದಿಪಡಿಸಲಾಗಿದೆ. ಬೆಂಗಳೂರು ಮಲ್ಟಿಪ್ಲೆಕ್ಸ್ಗಳಲ್ಲಿ ಅತಿ ಹೆಚ್ಚು ಎಂದರೆ ₹2400 ಟಿಕೆಟ್ ದರವಿದ್ದು, ಚೆನ್ನೈ ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ ₹190ಕ್ಕೆ ನಿಗದಿ ಮಾಡಲಾಗಿದೆ. ಹೀಗಾಗಿ ತಮಿಳು ಚಿತ್ರಕ್ಕೆ ತಮಿಳುನಾಡಿನಲ್ಲೇ ನೀಡದಿರುವ ಮಾನ್ಯತೆಯನ್ನು ಕರ್ನಾಟಕದಲ್ಲಿ ನೀಡುತ್ತಿರುವ ಬಗ್ಗೆ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.
ಕರಾವಳಿಗೆ ಕಷ್ಟವಿಲ್ಲ
ಇನ್ನು "ಜನನಾಯಗನ್' ಚಿತ್ರವನ್ನು ನಿರ್ಮಿಸಿ, ವಿತರಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯೇ ಕನ್ನಡದ "ಕರಾವಳಿ'ಯನ್ನೂ ವಿತರಿಸುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಸಮಸ್ಯೆ ಆಗುವುದಿಲ್ಲವೇ ಎಂದರೆ, ಕೆವಿಎನ್ನ ಕ್ರಿಯೇಟಿವ್ ಹೆಡ್ ಸುಪ್ರೀತ್, "ಕನ್ನಡದ ಎರಡು ದೊಡ್ಡ ಸಿನಿಮಾಗಳು ಬಂದಾಗ ಥಿಯೇಟರ್ ಸಮಸ್ಯೆ ಆಗುತ್ತದೆ. ಆದರೆ, ಕನ್ನಡದಲ್ಲಿ ಒಂದು ದೊಡ್ಡ ಸಿನಿಮಾ ಜತೆಗೆ ಪರಭಾಷೆಯ ಬಿಗ್ ಬಜೆಟ್ ಚಿತ್ರ ಬಂದರೆ ಸಮಸ್ಯೆ ಆಗುವುದಿಲ್ಲ. "ಧುರಂಧರ್ 2' ಮತ್ತು "ಲವ್ ಮಾಕ್ಟೇಲ್ 3' ಚಿತ್ರಗಳು ಅದಕ್ಕೆ ಉದಾಹರಣೆ. ಕರ್ನಾಟಕದಲ್ಲಿ "ಜನನಾಯಗನ್' ತಮಿಳು ವರ್ಷನ್ಗೆ 150ರಿಂದ 170 ಸ್ಕ್ರೀನ್ಸ್ ಸಾಕು. ಉಳಿದಂತೆ ತೆಲುಗು, ಕನ್ನಡ ಮತ್ತು ಹಿಂದಿ ವರ್ಷನ್ಗೆ ಕೆಲ ಸ್ಕ್ರೀನ್ಗಳು ಬೇಕಾಗುತ್ತವೆ. ಇನ್ನುಳಿದ ಸ್ಕ್ರೀನ್ಗಳಲ್ಲಿ "ಕರಾವಳಿ' ಪ್ಲ್ಯಾನ್ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.