ರಾಮನಗರ : ಜಿಲ್ಲೆಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆ ಕೋವಿಡ್ ಸಂದರ್ಭದಲ್ಲಿ 3.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡಿದೆ.
ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ ಟಿಕೆಎಂ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗ್ಡೆ ಹಾಗೂ ಹಿರಿಯ ವ್ಯವಸ್ಥಾಪಕ ಕಿರಣ್ ಅವರು ವೈದ್ಯಕೀಯ ಸಲಕರಣೆಗಳನ್ನು ಹಸ್ತಾಂತರ ಮಾಡಿದರು. ರಾಮನಗರ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಸಲಕರಣೆಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಟಿಕೆಎಂ ಸಂಸ್ಥೆ ಈಗಾಗಲೇ ಜಿಲ್ಲೆಗೆ ಹಲವಾರು ರೀತಿಯಲ್ಲಿ ನೆರವಾಗಿದೆ. ಈಗ ಕೋವಿಡ್ ಸಂಕಷ್ಟದಲ್ಲಿ ಅಗತ್ಯವಾದ ವಿವಿಧ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ. ಇದಕ್ಕಾಗಿ ಕಂಪನಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.ಟೊಯೊಟಾ ಕಂಪನಿ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗಡೆ, ಹಿರಿಯ ವ್ಯವಸ್ಥಾಪಕ ಕಿರಣ ಅವರು ಈ ಸಂದರ್ಭದಲ್ಲಿ ಇದ್ದರು.
ಏನೇನು ಕೊಡುಗೆ : 8 ನೆಬುಲೈಸರ್‌ಗಳು, 20 ಗ್ಲೂಕೋ ಮೀಟರ್‌ಗಳು, 5 ಆಂಬೂ ಬ್ಯಾಗ್, 48 ಪಲ್ಸ್ ಆಕ್ಸಿಮೀಟರ್, 200 ನೇಸಲ್ ಪ್ರಾಂಗ್ಸ್, 250 ಆಕ್ಸಿಜನ್ ಮಾಸ್ಕ್, 20 ಆಮ್ಲಜನಕ ಸಾಂದ್ರಕ ಹಾಗೂ 5 ಮಲ್ಟಿ ಪ್ಯಾರಾ ಬೆಡ್‌ಸೈಡ್ ಮಾನೀಟರ್‌ಗಳನ್ನು ಟಿಕೆಎಂ ನೀಡಿದೆ. ಇನ್ನೊಂದು ವಾರದಲ್ಲಿ 30 ಆಮ್ಲಜನಕ ಸಾಂದ್ರಕಗಳನ್ನು ಸರಬರಾಜು ಮಾಡಲಿದೆ.