TMC Demands: ಬಾಲಿವುಡ್ ಅಂಗಳದಿಂದ ಶೀಘ್ರವೇ ತೆರೆಗೆ ಅಪ್ಪಳಿಸಲಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಬೆಂಗಾಲ್ ಫೈಲ್ಸ್ ಮತ್ತು ಒಟಿಟಿಯಲ್ಲಿ ಈಗಾಗಲೇ ತೆರೆಕಂಡಿರುವ ನಟ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಾಪ್ಟರ್ 2 ಚಿತ್ರಗಳಿಗೆ ವ್ಯಾಪಕ ವಿರೋಧ ಹಾಗೂ ಛೀಮಾರಿ ವ್ಯಕ್ತವಾಗಿದೆ. ಈ ಮೂಲಕ ಎರಡೂ ಸಿನಿಮಾಗಳು ಸದ್ಯ ಭಾರೀ ವಿವಾದಕ್ಕೆ ಗುರಿಯಾಗಿದೆ.
ಇದನ್ನೂ ಓದಿ: 1 ಲಕ್ಷ ರೂ. ಸ್ಕೂಟರ್ಗೆ 14 ಲಕ್ಷ ರೂ. ವಿಐಪಿ ನಂಬರ್! ಅಚ್ಚರಿ ಮೂಡಿಸುತ್ತೆ ಈತನ ಬಿಡ್ಡಿಂಗ್ | VIP Number
ಎರಡು ಪ್ರತ್ಯೇಕ ಚಿತ್ರಗಳಲ್ಲಿ ಚಿತ್ರಿಸಲಾದ ವಿಷಯ ಕುರಿತಂತೆ ಪಶ್ಚಿಮ ಬಂಗಾಳದಲ್ಲಿ ವಿವಾದ ಭುಗಿಲೆದ್ದಿದೆ. ಅಕ್ಷಯ್ ಕುಮಾರ್ ಅವರ ಕೇಸರಿ 2 ಚಿತ್ರದಲ್ಲಿ ಬಂಗಾಳದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ವಿರೂಪಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ತೀವ್ರ ಆಕ್ಷೇಪಣೆ ಮತ್ತು ವಿರೋಧಗಳು ವ್ಯಕ್ತವಾಗಿವೆ. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಅಕ್ಷಯ್ ಕುಮಾರ್ ಅವರ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ತಿರುಚಲಾಗಿದೆ. ಖುದಿರಾಮ್ ಬೋಸ್ ಅವರ ಹೆಸರನ್ನು ಖುದಿರಾಮ್ ಸಿಂಗ್ ಎಂದು ಬಳಸುತ್ತಿರುವುದು ಕಂಡುಬಂದಿದೆ. ಚಿತ್ರದಲ್ಲಿ ಬಂಗಾಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಲಾಗಿದೆ. ಇಲ್ಲಿ ಹೆಸರು ಬದಲಾಯಿಸಿದ್ದೇಕೆ? ಏನಿದರ ಉದ್ದೇಶ? ಮೂಲ ಸಂಗತಿಗಳು ಮತ್ತು ಹೆಸರುಗಳನ್ನು ವಿರೂಪಗೊಳಿಸಿರುವುದು ಸರಿಯಲ್ಲ ಎಂದು ತೃಣಮೂಲ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
"ಬಂಗಾಳದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಯೋಜಿತ ರೀತಿಯಲ್ಲಿ ಅವಮಾನಿಸಲಾಗಿದೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ಖಂಡಿಸುತ್ತೇವೆ. ಅಕ್ಷಯ್ ಕುಮಾರ್ ಮತ್ತು ಚಿತ್ರತಂಡ ಈ ಕೂಡಲೇ ಕ್ಷಮೆಯಾಚಿಸಬೇಕು. ಕೆಲವರು ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಮಾತನಾಡುತ್ತಿದ್ದಾರೆ. ಶೀಘ್ರವೇ ಅದನ್ನೂ ಪರಿಗಣಿಸಲಾಗುವುದು" ಎಂದಿದ್ದಾರೆ. ಅದಾಗ್ಯೂ, ಈ ವಿವಾದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಗದ್ದಲ ನಡೆದಿದ್ದರೂ ಚಿತ್ರದ ನಿರ್ಮಾಪಕರಿಂದಾಗಲಿ ಅಥವಾ ನಟರಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Vaijanath Biradar | ಶಿವರಾಜ್ ಕುಮಾರ್ ಜೊತೆ ನಾನು ಈ ರೀತಿನೇ ಮಾತಾಡ್ತಿದ್ದೆ..ಅವ್ರಿಗೂ ಇಷ್ಟ ಆಗ್ತಿತ್ತು!
ಈಗಾಗಲೇ ಬಿಧಾನನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐತಿಹಾಸಿಕ ಸತ್ಯಗಳನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ದಿ ಬೆಂಗಾಲ್ ಫೈಲ್ಸ್' ವಿರುದ್ಧವೂ ಟಿಎಂಸಿ ಯೂತ್ ಆಕ್ರೋಶ ಹೊರಹಾಕಿದೆ. ದೂರಿನಲ್ಲಿ, "ರಾಜ್ಯದಲ್ಲಿ ಕೋಮು ಅಶಾಂತಿಯನ್ನು ಪ್ರಚೋದಿಸುವುದು ಚಿತ್ರದ ಗುಪ್ತ ಉದ್ದೇಶ" ಎಂದು ಉಲ್ಲೇಖಿಸಿಲಾಗಿದೆ. ಚಿತ್ರತಂಡ ಹಂಚಿಕೊಂಡಿರುವಂತೆ, ದಿ ಬೆಂಗಾಲ್ ಫೈಲ್ಸ್ ಈ ವರ್ಷದ ಸೆಪ್ಟೆಂಬರ್ 5ರಂದು ದೇಶಾದ್ಯಂತೆ ತೆರೆಕಾಣಲು ಸಜ್ಜಾಗಿದೆ,(ಏಜೆನ್ಸೀಸ್).