ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆ ನಡುವಿನ ಸಮಸ್ಯೆ ಬಗೆಹರಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಬೆಂಗಳೂರಿನ ಖನಿಜ ಭವನದಲ್ಲಿ ಸೋಮವಾರ ನಡೆದ ಸಭೆ ಒಮ್ಮತಕ್ಕೆ ಬಾರದೆ ಮತ್ತೊಮ್ಮೆ ಸೌಹಾರ್ದ ಮಾತುಕತೆ ವಿಫಲವಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಪರವಾಗಿ ಸಚಿವರು ಮಾತನಾಡಿ, ತನಿಖೆ ನಡೆಸಲಿಕ್ಕೆ ನಿಮಗೆ ಎಷ್ಟು ಕಾಲಾವಕಾಶ ಬೇಕಿದೆ. ತ್ವರಿತವಾಗಿ ಆರು ತಿಂಗಳ ಕಾಲ ಸಮಯ ನಿಗದಿ ಮಾಡಿ ಸಂಪೂರ್ಣವಾಗಿ ತನಿಖೆಯನ್ನು ಮುಗಿಸಿ. ಅಮಾನತು ಆಗಿರುವ ಕಾರ್ಮಿಕರಿಗೆ ಕಂಪನಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಟಿಕೆಎಂ ಆಡಳಿತ ಮಂಡಳಿಗೆ ಸಲಹೆ ನೀಡಿದರು.
ಇದಕ್ಕೆ ಒಪ್ಪದ ಆಡಳಿತ ಮಂಡಳಿ, ಕಾರ್ಮಿಕ ಕಾನೂನಿನ ಪ್ರಕಾರ ಅಮಾನತು ಆದ ಕಾರ್ಮಿಕ ತನಿಖೆ ಮುಗಿಯುವರೆಗೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳು ನಿಮ್ಮ ಹಠಮಾರಿ ಧೋರಣೆಯನ್ನು ಕೈಬಿಟ್ಟು, ಇನ್ನೆರಡು ದಿನಗಳಲ್ಲಿ ಸಂಬಂಧಿಸಿದವರ ಜತೆ ಚರ್ಚಿಸಿ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿ. ಆ ಮೂಲಕ 93 ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಹೋರಾಟ ಕೊನೆಗೊಳ್ಳಲಿ ಎಂದು ಹೇಳಿದರು.
ಅಂತಿಮವಾಗಿ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಮಿಕ ಸಂಘಟನೆಯ ಸಲಹೆಗೆ ಮನ್ನಣೆ ಸಿಗದ ಹಿನ್ನಲೆಯಲ್ಲಿ ಟಿಕೆಎಂ ಆಡಳಿತ ಮಂಡಳಿಗೆ ಎರಡು ದಿನಗಳ ಗಡುವು ನೀಡಿ ಸಭೆ ಅಂತಿಮಗೊಂಡಿತು.
ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್‌ಪಿ ಗಿರೀಶ್, ಕಾರ್ಮಿಕ ಇಲಾಖೆ ಆಯುಕ್ತ ರಾಜ್‌ಕುಮಾರ್ ಪತ್ರಿ, ಟಿಕೆಎಂ ಸಹ ಉಪಾಧ್ಯಕ್ಷ ಶಂಕರ್, ಕಾರ್ಮಿಕ ಸಂಘಟನೆ ಅಧ್ಯಕ್ಷ ಪ್ರಸನ್ನಕುಮಾರ್, ಪದಾಧಿಕಾರಿಗಳಾದ ಬಸವರಾಜ್ ಹವಾಲ್ದಾರ್, ಗಂಗಾಧರ್, ದೀಪಕ್, ವೀರೇಶ್, ಉಮೇಶ್ ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಮುಂದುವರಿದ ಪ್ರತಿಭಟನೆ
ಬಿಡದಿಯ ಟಿಕೆಎಂ ಕಂಪನಿ ಮತ್ತು ಕಾರ್ಮಿಕರ ನಡುವಿನ ಸಮಸ್ಯೆ ಬಗೆಹರಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಪ್ರಯತ್ನದಿಂದ ಸರ್ಕಾರದ ಪ್ರತಿನಿಧಿಗಳಾಗಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ಎ.ಮಂಜುನಾಥ್ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಗಳಿಗೆ ಮನ್ನಣೆ ಸಿಗದೆ ಸೋಮವಾರ ನಡೆದ ಮಹತ್ವದ ಸಭೆಯೂ ವಿಫಲವಾಗಿರುವುದರಿಂದ ಟಿಕೆಎಂ ಕಾರ್ಮಿಕರ ಪ್ರತಿಭಟನೆ ಮುಂದುವರಿದಿದೆ.