ನ್ಯೂಸ್

ಟಿಕೆಎಂ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಜತೆಗೂಡಿ ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿನೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಭಾರತೀಯ ವಿಜ್ಞಾನ ಸಂಸ್ಥೆ ಜತೆಗೂಡಿ ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬೊರೇಟರಿ ಸ್ಥಾಪನೆ ಮಾಡಲು ಮುಂದಾಗಿದ್ದು, ಭವಿಷ್ಯದಲ್ಲಿ ಸಾಮರ್ಥ್ಯವರ್ಧನೆ ಉತ್ತೇಜಿಸುವ ಹಾಗೂ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಗ್ಗೂಡಿಸುವ ಗುರಿ ಹೊಂದಿದೆ ಎನ್ನಲಾಗುತ್ತಿದೆ.

2024 ರಿಂದ 2027ರ ಅವಧಿಯೊಳಗೆ ಟಿಕೆಎಂ ಮೊಬಿಲಿಟಿ ಎಂಜಿನಿಯರಿಂಗ್ ಪ್ರಯೋಗಾಲ ಸ್ಥಾಪನೆಯಾಗಲಿದೆ. ಇದರಿಂದ ಹೈಸ್ಪೀಡ್ ಡೈನಮೋಮೀಟರ್, ಬ್ಯಾಟರಿ ಎಮ್ಯುಲೇಟರ್, ಆಟೋಮೇಷನ್ ಮತ್ತು ನಿಯಂತ್ರಣದ ಜತೆಗೆ ವಾಹನ ಸಿಮ್ಯುಲೇಶನ್ ಸಾಪ್ಟ್‌ವೇರ್ ಮತ್ತು ಮೋಟರ್ಸ್ ಎಂಜಿನ್‌ಗಾಗಿ ಮೌಂಟಿಂಗ್ ಹಾರ್ಡ್‌ವೇರ್‌ನಂತಹ ಅಗತ್ಯ ಉಪಕರಣಗಳು ಮತ್ತು ಮೂಲಸೌಕರ್ಯಗಳ ಖರೀದಿಗೆ ಬೆಂಬಲ ನೀಡಲಾಗುವುದು ಎಂದು ಐಐಎಸ್ ಸಿ ನಿರ್ದೇಶಕ ಪ್ರೊ.ಜಿ.ರಂಗರಾಜನ್ ತಿಳಿಸಿದರು.

ಲ್ಯಾಬೊರೇಟರಿ ಸ್ಥಾಪನೆಯಿಂದ ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಎಮಿಷನ್ ಕಡಿತ ಮತ್ತು ಇಂಧನ ದಕ್ಷತೆ ಸೇರಿದಂತೆ ಹಲವು ವಾಹನ ಉದ್ಯಮದಲ್ಲಿನ ನಿರ್ಣಾಯಕ ಸವಾಲುಗಳನ್ನು ಎದುರಿಸಲು ಹಾಗೂ ಅತ್ಯಾಧುನಿಕ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಟೊಯೊಟಾ ಕಿರ್ಲೋಸ್ಕರ ಮೋಟಾರ್ನ ಹಿರಿಯ ಉಪಾಧ್ಯಕ್ಷ ಸುದೀಪ್ ದಾಲ್ವಿ ಮಾತನಾಡಿ, ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆಗೆ ಐಐಎಸ್‌ಸಿ ಪಾಲುದಾರಿಕೆ ಉತ್ತಮ ಬೆಳವಣಿಗೆಯಾಗಿದೆ. ಈ ಒಪ್ಪಂದ ಚಲನಶೀಲತೆ ಎಂಜಿನಿಯರಿಂಗ್ ನಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಪ್ರಯತ್ನ ನಮ್ಮದಾಗಿದ್ದು, ಈ ಮೂಲಕ ಭಾರತದಲ್ಲಿ ನುರಿತ ಎಂಜಿನಿಯರ್‌ಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದರು.

ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮತ್ತು ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ನಂತಹ ಕೌಶಲ್ಯ ಉಪಕ್ರಮಗಳ ಮೂಲಕ, ಟಿಕೆಎಂ ಕರ್ನಾಟಕದ ಗ್ರಾಮೀಣ ಯುವಕರಿಗೆ ವಿಶ್ವದರ್ಜೆಯ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುತ್ತದೆ. ಜಾಗತಿಕ ಮಾನದಂಡಗಳನ್ನು ಪೂರೈಸುವ ಸ್ಕೇಲೆಬಲ್ ಮತ್ತು ಸುಸ್ಥಿರ ಶಿಕ್ಷಣವನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದರು.