ನ್ಯೂಸ್

ತಿರುಪತಿ ಲಡ್ಡು ಹಗರಣ - ಒಂದು ವಿಸ್ತೃತ ನೋಟ!

 ಅವಿವೇಕಿ, ಅಪ್ರಬುದ್ಧ ಮತ್ತು ಅಹಂಕಾರಿ ನಾಯಕನೊಬ್ಬ ಆಡಳಿತದ ಸೂತ್ರಗಳನ್ನು ತನ್ನ ಕೈಯಲ್ಲಿ ಹಿಡಿದಾಗ ಅವಘಡಗಳ ಹೊರತು ಮತ್ತೇನು ಸಂಭವಿಸಬಲ್ಲವು? ಕಳೆದ ಹಲವಾರು ವರ್ಷಗಳಿಂದ ದೇಶದ ಉದ್ದಗಲಕ್ಕೂ ಪ್ರತಿನಿತ್ಯವೆಂಬಂತೆ ಇಂಥ ಎಷ್ಟು ಘಟನೆಗಳು ನಡೆದಿಲ್ಲ?! ನಡೆಯುತ್ತಿಲ್ಲ?! ಮುಂದೆ ನಡೆಯುವುದಿಲ್ಲ?! ನಡೆದೇ ತೀರುತ್ತವೆ! ಕಾರಣ; ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ಜಾಣ್ಮೆ, ಪ್ರಬುದ್ಧತೆ ನಮ್ಮ ನಾಯಕರಿಗೆ ಮೊದಲಿಂದಲೂ ಬರಲೇ ಇಲ್ಲವೇನೋ ಎನಿಸುತ್ತಿದೆ. ಮೂರ್ಖರು ಮುಠ್ಠಾಳರ ಕೈಗೆ ಆಡಳಿತ ಹೋಗುತ್ತಿದೆ ಎಂದು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಕಾಲದಲ್ಲಿ ಇಂಗ್ಲೆಂಡಿನ ವಿರೋಧ ಪಕ್ಷದ ನಾಯಕ ವಿನ್ಸ ್ಟನ್ ರ್ಚಚಿಲ್ಲರು ಹೇಳಿದ ಮಾತು ಪ್ರತಿನಿತ್ಯವೆಂಬಂತೆ ಸಮರ್ಥನೆಯನ್ನು ಪಡೆಯುತ್ತಿದೆ. ಸ್ವಾತಂತ್ರ್ಯ ಸಂಭ್ರಮದ ಓಕುಳಿಯಲ್ಲಿ ಮುಳುಗಿದ್ದ ಅಂದಿನ ತಲೆಮಾರಿಗೆ ಇದು ಅರ್ಥವಾಗದಿರಬಹುದು. ಚೀನಾ ಆಕ್ರಮಣ ನಮ್ಮನ್ನು ಕುಂಭಕರ್ಣಾವಸ್ಥೆಯಿಂದ ಎಬ್ಬಿಸಿದ ಮೇಲಾದರೂ ಎಲ್ಲೋ ಅತ್ಯಂತ ಪ್ರಮುಖ ವಿಷಯಗಳಲ್ಲಿ ನಾವು ವಿಸ್ಮೃತಿಯನ್ನು ಹೊಂದುತ್ತಿದ್ದೇವೆ ಎಂದು ನಮಗೆ ಎಚ್ಚರವಾಗಬೇಕಿತ್ತು. ಮೇಲಿನ ಮಾತುಗಳಿಗೂ ತಿರುಪತಿಗೂ ಸಂಬಂಧವೇನು ಎಂದರೆ ನನ್ನ ಉತ್ತರ- ಸಮಸ್ಯೆಗಳು ಸಾವಿರ ರೂಪಗಳನ್ನು ಪಡೆದುಕೊಳ್ಳುತ್ತಿವೆ ಅಷ್ಟೇ, ಆದರೆ ಅದರ ಮೂಲರೂಪ ಒಂದೇ ಎಂದು.

ಆದ್ದರಿಂದ ಪರಿಹಾರವೂ ಒಂದೇ. ಅದೇ ಜವಾಬ್ದಾರಿ ಸ್ಥಾನಗಳಲ್ಲಿ ಅನರ್ಹ, ಅಯೋಗ್ಯರಿಗೆ ಎಂದೂ ಸ್ಥಾನವಿರಬಾರದು. ಸರಿಯಾದ ಸ್ಥಳದಲ್ಲಿ ಸೂಕ್ತ ವ್ಯಕ್ತಿ - ಇದೇ ಸುಸೂತ್ರ ಆಡಳಿತಕ್ಕಾಗಿ ನಾವು ಅನುಸರಿಸಬೇಕಾದ ಶಾಶ್ವತ ತತ್ವ. ಜವಾಬ್ದಾರಿ ಹೊತ್ತಿರುವವರು ಸಾಕಷ್ಟು ಅರ್ಹರಿಲ್ಲದಿದ್ದಲ್ಲಿ ಆ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪ್ರಜ್ಞೆ ಸಾಮರ್ಥ್ಯಗಳನ್ನು ಪಡೆದಿರುವ ಹಿರಿಯರೊಬ್ಬರ ಮಾರ್ಗದರ್ಶನದಲ್ಲಿರಬೇಕಾದ್ದೇ ಅನಿವಾರ್ಯ ಪರ್ಯಾಯ. ಇದೇ ಪ್ರಬುದ್ಧತೆಯ ಲಕ್ಷಣ. ಇದೇ ನಮಗಿರಬೇಕಾದ ಎಚ್ಚರ. ಉತ್ತಿಷ್ಠತ! ಜಾಗ್ರತ! ಪ್ರಾಪ್ಯವರಾನ್ನಿಬೋಧತ - ಏಳು! ಎಚ್ಚರಗೊಳ್ಳು! ಪ್ರಾಜ್ಞರಿಂದ ಮಾರ್ಗದರ್ಶಿಸಲ್ಪಡು! ಎಂದು ಅಂದೇ ಹೇಳಿತ್ತು ಕಠೋಪನಿಷತ್. ಇದನ್ನು ಬ್ರಿಟಿಷರಿಗೋ, ಅಮೆರಿಕನ್ನರಿಗೋ ಹೇಳಿದ್ದಲ್ಲ. ಭಾರತೀಯರಿಗೇ ಹೇಳಿದ್ದು. ಆದರೆ ಮಹಿಷಚರ್ಮ ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಸಂಭ್ರಮಿಸುವ ಜನರಿಗೆ ಇದೆಲ್ಲಾ ಅರ್ಥವಾಗಬಲ್ಲದು ಎಂದು ಭಾವಿಸಿದ್ದು ನಮ್ಮತಪ್ಪೇ!

ಇಲ್ಲಿ ಏಳುವ ಮತ್ತೊಂದು ಮುಖ್ಯ ಪ್ರಶ್ನೆ ಎಂದರೆ ಜನರಿಂದ ಚುನಾಯಿತರಾದ ಮಾತ್ರಕ್ಕೆ ದೇಶದ ಪ್ರತಿಯೊಂದೂ ಸಂಸ್ಥೆಯ ಆಡಳಿತದ ಚುಕ್ಕಾಣಿ ಚುನಾಯಿತರ ಕೈಯಲ್ಲೇ ಇರಬೇಕೇ? ಅದರಲ್ಲೂ ಅವನು ಎಷ್ಟೇ ಮೂರ್ಖನಾಗಿದ್ದರೂ? ಮತಾಂಧನಾಗಿದ್ದರೂ? ದ್ರೋಹಿಯಾಗಿದ್ದರೂ? ಅದು ಹಾಗೆಯೇ ಎಂದಿಟ್ಟುಕೊಳ್ಳೋಣ. ಅವನು ಕೂಡ ಯಾವುದೇ ಅನರ್ಹ, ಅಯೋಗ್ಯ ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂಡಿಸಬಹುದೋ ಇಲ್ಲವೇ ಅರ್ಹ ಯೋಗ್ಯರನ್ನೊಳಗೊಂಡ ಪ್ಯಾನೆಲ್​ನಿಂದ ಒಬ್ಬನನ್ನು ಆರಿಸಿಕೊಳ್ಳಬೇಕೋ? ಮುಖ್ಯಮಂತ್ರಿ ಚುನಾಯಿತನಾಗಿದ್ದರೂ ದೇವಾಲಯದ ಆಡಳಿತಾಧಿಕಾರಿ ಚುನಾಯಿತನೇನೂ ಆಗಬೇಕೆಂದೇನಿಲ್ಲ. ಚುನಾಯಿತರು ನೇರವಾಗಿ ಎಲ್ಲೂ ಆಡಳಿತವನ್ನು ನಡೆಸುವುದಿಲ್ಲ. ಅದನ್ನು ನೋಡಿಕೊಳ್ಳಲು ಕಾರ್ಯಾಂಗ ಎನ್ನುವುದಿರುತ್ತದೆ. ಅದರಲ್ಲಿ ಯಾವುದೇ ಸ್ಥಾನವಿರಲಿ ಅಲ್ಲಿ ಅತ್ಯಂತ ದಕ್ಷತೆಯಿಂದ, ವಿವೇಚನೆ, ಜವಾಬ್ದಾರಿಗಳಿಂದ ನಿಭಾಯಿಸುವ ವ್ಯಕ್ತಿಗಳೇ ಇರಬೇಕು ಮತ್ತು ಅವರ ಕಾರ್ಯದಲ್ಲಿ ಈ ಚುನಾಯಿತ ವ್ಯಕ್ತಿ ಮೂಗು ತೂರಿಸುವಂತಿರಬಾರದು.

ತಿರುಪತಿಯ ಪ್ರಶ್ನೆ ಬಂದಾಗ ಮುಖ್ಯಮಂತ್ರಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಿಬ್ಬರೂ ವೆಂಕಟೇಶ್ವರನಲ್ಲಿ ಎಳ್ಳಷ್ಟೂ ಭಕ್ತಿ ಇಲ್ಲದವರು. ಯಾವುದೇ ಹಿಂದೂ ದೇವತೆಯಲ್ಲಾಗಲಿ ಮೂರ್ತಿಪೂಜೆಯಲ್ಲಾಗಲಿ ನಂಬಿಕೆಯಿಲ್ಲದವರು. ನಂಬಿಕೆ ಇಲ್ಲದಿದ್ದರೆ ಹೋಗಲಿ! ಈ ರೀತಿಯ ಧಾರ್ವಿುಕ ಸಂಸ್ಕೃತಿಯನ್ನು ಪರೋಕ್ಷವಾಗಿ ಕೆಲವೊಮ್ಮೆ ಪ್ರತ್ಯಕ್ಷವಾಗಿ ವಿರೋಧಿಸುವವರು! ಕಳೆದ ಕಾಲು ಶತಮಾನದಿಂದ ಅಂಥದ್ದೊಂದು ಪರಂಪರೆಯೇ ಅಲ್ಲಿ ಕೆಲಸ ಮಾಡುತ್ತಿದೆ. ರಾಜಶೇಖರ್​ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯ ಕೆಲವು ಬೆಟ್ಟಗಳನ್ನು ಚರ್ಚುಗಳ ಸ್ಥಾಪನೆಗಾಗಿ ಕೊಡಬಯಸಿದ್ದರ ಬಗ್ಗೆ ಅಂದಿನ ವೃತ್ತಪತ್ರಿಕೆಗಳಲ್ಲಿ ಹಲವು ಉಲ್ಲೇಖಗಳು ಪ್ರಕಟಗೊಂಡಿದ್ದು ವೈದಿಕ ಮಠಾಧೀಶರ ಒಕ್ಕೊರಲ ವಿರೋಧದಿಂದಾಗಿ ಅದು ಸ್ಥಗಿತಗೊಂಡಿತು. ಅದೇ ವ್ಯಕ್ತಿಯ ಮಗನಿಂದ ನೀವೇನು ಬಯಸುವಿರಿ? ಮುಖ್ಯಮಂತ್ರಿ ಮತ್ತು ದೇವಾಲಯದ ಅಧ್ಯಕ್ಷ ಇಡೀ ದೇಶದ ಕೋಟ್ಯಂತರ ಜನರ ಭಕ್ತಿ ಭಾವಗಳಿಗೆ ನೂರಾರು ವರ್ಷಗಳಿಂದ ಸ್ಪೂರ್ತಿಯ ಸೆಲೆಯಂತಿದ್ದ ದೇವಾಲಯದ ವಿರೋಧಿ ಸಂಸ್ಕೃತಿಗೆ ಸೇರಿದವರಾಗಿದ್ದರೆ, ಅದರ ಏಳ್ಗೆ, ಅಭಿವೃದ್ಧಿ ತಾವೇ ನಂಬಿದ ನಂಬಿಕೆಗಳಿಗೆ ವಿರುದ್ಧವಾದ್ದು ಎಂದು ಭಾವಿಸುವವರಾಗಿದ್ದರೆ ಮತ್ತೇನನ್ನು ಅಪೇಕ್ಷೆಪಡುತ್ತೀರಿ? ಅಪೇಕ್ಷೆಪಟ್ಟರೆ ಮಹಾಮಂಕರು ನೀವು ಎಂದೇ ಅರ್ಥ. ನಂದಿನಿ ತುಪ್ಪದ ಬೆಲೆ ಜಾಸ್ತಿ ಇತ್ತು, ಬೇರೆ ಮೂಲಗಳಲ್ಲಿ ಕಡಿಮೆ ಬೆಲೆಗೇ ಸಿಗುತ್ತಿತ್ತು ಇತ್ಯಾದಿಗಳೆಲ್ಲ ಮಂಕರ ಮುಂದೆ ಬಾರಿಸಬಹುದಾದ ನಗಾರಿ ಅಷ್ಟೇ. ಕಡಿಮೆ ಬೆಲೆಗೆ ಖರೀದಿಸುವ ಅನಿವಾರ್ಯತೆ ದೇಶದ ಅತ್ಯಂತ ಶ್ರೀಮಂತ ದೇವಾಲಯಕ್ಕೆ ಎಂದಾದರೂ ಬಂದೀತೇ? ಹೇಳುವವನಿಗೆ ಬುದ್ಧಿ ಇಲ್ಲ ಎಂದರೆ ಕೇಳುವವನಿಗೆ ಬುದ್ಧಿ ಇಲ್ಲವೇ? ಸಮಸ್ಯೆಯನ್ನು ಸರಿಯಾಗಿಯೇ ಅರ್ಥ ಮಾಡಿಕೊಳ್ಳಬೇಕಾದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಇಡಬೇಕಾದ ಮೊದಲ ಮತ್ತು ಪ್ರಮುಖ ಹೆಜ್ಜೆ.

ಪರಧರ್ಮಸಹಿಷ್ಣುತೆ, ಪ್ರತಿಯೊಬ್ಬರೂ ತಮ್ಮ ತಮ್ಮ ದಾರಿಯಲ್ಲೇ ಮತ್ತಷ್ಟು ಪರಿಶುದ್ಧಗೊಂಡು ಗುರಿಯತ್ತ ಸಾಗಲಿ ಎಂಬ ವಿಶಾಲ ಧಾರ್ವಿುಕ ದೃಷ್ಟಿಕೋನ ಕೇವಲ ಸನಾತನಿಯೊಬ್ಬನಿಗೆ ಮಾತ್ರ ಇರಬಲ್ಲದು. ಹೆಚ್ಚೆಂದರೆ ಭಾರತೀಯ ಮೂಲದ ಧರ್ಮಗಳಲ್ಲೂ. ಇದು ವಿವೇಕಾನಂದರ ಅನುಭವವೂ ಹೌದು! ಯುರೋಪ್ ಮತ್ತು ಅಮೆರಿಕಾಗಳಲ್ಲಿ ಸಂಚರಿಸುತ್ತಿದ್ದಾಗ ನನ್ನ ಅನುಭವವೂ ಹೌದು. ಸೆಮೆಟಿಕ್ ಧರ್ಮಗಳ ಮುಖ್ಯ ಗುರಿಯೇ ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುವುದು. ಆ ಧರ್ಮಗಳ ಧರ್ಮಗುರುವಿಗೆ ಸಿಗುವ ಸವಲತ್ತು, ಸ್ಥಾನಮಾನ, ಬಡ್ತಿ ಇವೆಲ್ಲಾ ನಿಂತಿರುವುದು ಅವರು ಎಷ್ಟು ಜನ ಹೊಸ ಅನುಯಾಯಿಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸಿದರು ಎಂಬುದರ ಆಧಾರದ ಮೇಲೆಯೇ! ಕುಂಡಲಿನಿ ಜಾಗೃತವಾಯಿತೇ? ಭಾವ ಸಮಾಧಿ, ನಿರ್ವಿಕಲ್ಪ ಸಮಾಧಿ, ಅಕ್ಷರ ಲಕ್ಷ, ಅಕ್ಷರ ಕೋಟಿ ಜಪ, ಪ್ರತಿನಿತ್ಯ ಎಷ್ಟು ಕಾಲ ಧ್ಯಾನ ಮಾಡಬಲ್ಲೆವು ಇತ್ಯಾದಿಗಳಿಗೆಲ್ಲಾ ಸೆಮೆಟಿಕ್ ಧರ್ಮಗಳಲ್ಲಿ ಎರಡನೇ ಆದ್ಯತೆ. ಭಾರತೀಯ ಧರ್ಮಗಳಿಗೇ ಇವೆಲ್ಲಾ ಮೀಸಲು ಎಂದರೂ ಸರಿಯೇ! ಅವರಲ್ಲೂ ಸೇವಾತತ್ಪರತೆ, ಪ್ರಾರ್ಥನೆ, ದಯಾಭಾವ ಇವೆಲ್ಲಾ ಇಲ್ಲವೇ ಇಲ್ಲ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಇದೇ ಅವರ ಗುರಿಯಲ್ಲ. ಸಂಖ್ಯಾ ಬಾಹುಳ್ಯವೇ ಗುರಿ. ಇದು ಇಂದು ನಿನ್ನೆಯ ಮಾತಲ್ಲ. ಭಾರತದಲ್ಲಿ ಮಾತ್ರ ಎಂತಲೂ ಅಲ್ಲ. ಪ್ರಾರಂಭದಿಂದಲೂ ಹಾಗೆಯೇ. ಅದೇ ಒಂದು ದೊಡ್ಡ ಚರಿತ್ರೆ. ರೋಮನ್ ಚಕ್ರವರ್ತಿ ಕಾನ್​ಸ್ಟೆಂಟೈನ್ ಮತಾಂತರಗೊಂಡ ಮೇಲೆ ರೋಮ್ ಸಾಮ್ರಾಜ್ಯ ವಿಸ್ತರಣಾ ದಾಹ ರಾಜಕೀಯ ಕ್ಷೇತ್ರದ ಜೊತೆಗೆ ಧಾರ್ವಿುಕ ಕ್ಷೇತ್ರಕ್ಕೂ ವ್ಯಾಪಿಸಿದ್ದು ದುರ್ದೈವ. ಅಂದಿನಿಂದಲೂ ಅವರ ರಾಜಕೀಯ ಮತ್ತು ಧಾರ್ವಿುಕ ಕ್ಷೇತ್ರಗಳು ಪರಸ್ಪರ ಪೂರಕವಾಗಿಯೇ ಕೆಲಸ ಮಾಡುತ್ತ ಸಾಗಿವೆ. ತಿರುಪತಿಯಲ್ಲಿ ನುಸುಳಿದ್ದು ಇದರ ಒಂದು ಹೊಳಹು ಮಾತ್ರ. ಮೆಕಾಲೆಯ ಜೊತೆ ಸೇರಿ ಭಾರತೀಯ ಶಿಕ್ಷಣ ಪದ್ಧತಿ ಗುಮಾಸ್ತರನ್ನು ನಿರ್ವಿುಸುವ ಕಾರ್ಖಾನೆಯನ್ನಾಗಿಸಿದವನೂ ಇಂಗ್ಲೆಂಡಿನ ಧರ್ಮಗುರು ವಿಲಿಯಂ ವಿಲ್ಬರ್ ಫೋರ್ಸ್. ಡಾರ್ವಿನ್ನನ ವಿಕಾಸವಾದವನ್ನು ಲಂಡನ್ನಿನ ಪ್ರಮುಖ ಚೌಕದಲ್ಲಿ ಎತ್ತರದ ದನಿಯಲ್ಲಿ ಅವಹೇಳನ ಮಾಡುತ್ತ ಬೈದಾಡಿದ್ದು ಇವನ ಮೊಮ್ಮಗ. ಇವರು ಎಂದಿಗೂ ವೈಶಾಲ್ಯ ಮತ್ತು ವೈಜ್ಞಾನಿಕತೆಯ ವಿರುದ್ಧವೇ. ಮೊನ್ನೆ ತಾನೆ ಅಮೆರಿಕಾ ಬಾಂಗ್ಲಾದೇಶದಲ್ಲಿ ನಡೆಸಿದ ಷಡ್ಯಂತ್ರದ ಅಂತಿಮ ಗುರಿ ತನ್ನ ಉದ್ದೇಶ್ಯ ಸಾಧನೆಗಾಗಿ ಅಲ್ಲೊಂದು ಕ್ರಿಶ್ಚಿಯನ್ ರಾಷ್ಟ್ರವನ್ನು ನಿರ್ವಿುಸುವುದರ ಕುರಿತೇ.

ಕ್ರಿಶ್ಚಿಯನ್ ರಾಷ್ಟ್ರ, ಕ್ರಿಶ್ಚಿಯನ್ ಸಂಖ್ಯಾ ಬಾಹುಳ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಮತಾಂತರ ಎನ್ನುವುದು ರಾಜಕೀಯ ಮೇಲಾಟಕ್ಕೆ ಒಂದು ಅಡಿಪಾಯವಿದ್ದಂತೆ. ಸಂವೇದನಾಶೀಲತೆ, ಹೋರಾಟ ಪ್ರವೃತ್ತಿ, ಆತ್ಮಗೌರವ ಇವೆಲ್ಲಾ ನಮಗೇಕೆ? ನಮ್ಮ ಹೊಟ್ಟೆಬಟ್ಟೆಗೆ ಸಿಕ್ಕಿದರಾಯಿತು ಎಂದು ಭಾವಿಸುವ ಮನುಷ್ಯರೂಪದ ಮೃಗಗಳಿಗೆ ಇವೆಲ್ಲಾ ಎಂದೂ ಅರ್ಥವಾಗುವುದಿಲ್ಲ! ಅಂಥಾ ಶ್ರೀರಾಮಕೃಷ್ಣರ ಪರಮ ಅನುಯಾಯಿ, ಸರ್ವಧರ್ಮಸಮನ್ವಯಾಚಾರ್ಯ ಸ್ವಾಮಿ ವಿವೇಕಾನಂದರೇ ಹಿಂದುವೊಬ್ಬ ಮತಾಂತರಗೊಂಡರೆ ಅದರ ಅನುಯಾಯಿಯೊಬ್ಬ ಕಡಿಮೆಯಾಯಿತಷ್ಟೇ ಅಲ್ಲ ಅದರ ಶತ್ರು ಒಬ್ಬ ಜಾಸ್ತಿಯಾದಂತೆ ಎಂದು ಹೇಳಿರಬೇಕಾದರೆ ನಾವೆಷ್ಟು ಗಂಭೀರವಾಗಿ ಇದನ್ನು ಯೋಚಿಸಬೇಕಾಗಿದೆೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕ್ರಿಸ್ತನ ಸಂದೇಶಗಳೇ ಬೇರೆ, ಅವನ ಅನುಯಾಯಿಗಳು ಹರಡುತ್ತಿರುವುದೇ ಬೇರೆ. ಇವೆರಡರ ನಡುವಿನ ವ್ಯತ್ಯಾಸವನ್ನು ಅಮೆರಿಕಾದ ಉದ್ದಗಲಕ್ಕೂ ವಿವೇಕಾನಂದರು ಸ್ಪಷ್ಟವಾಗಿ ತೋರಿಸಿಕೊಟ್ಟಾಗ ಅಲ್ಲಿನ ಜನ ಅದನ್ನು ಒಪ್ಪಿಕೊಂಡಿದ್ದಷ್ಟೇ ಅಲ್ಲ ಸಹಸ್ರ ಸಂಖ್ಯೆಯಲ್ಲಿ ಅವರನ್ನು ಅನುಸರಿಸಿದರು.

ಅವರ ಸೋದರ ಸಂನ್ಯಾಸಿ ಸ್ವಾಮಿ ಅಭೇದಾನಂದರು  Why India accepts Christ and rejects Churchianity - ಕ್ರಿಸ್ತನನ್ನು ಗೌರವಿಸುವ ಭಾರತ ಚರ್ಚುಗಳನ್ನು ಏಕೆ ತಿರಸ್ಕರಿಸುತ್ತದೆ ಎಂಬ ಪುಸ್ತಕವನ್ನೇ ಬರೆದು ಅಮೆರಿಕಾದಲ್ಲೇ, ತಮ್ಮ ವೇದಾಂತ ಪ್ರಚಾರ ಕಾಲದಲ್ಲೇ ಪ್ರಕಟಪಡಿಸಿದರು. ಮಹಾತ್ಮಗಾಂಧಿ ಸ್ವಾತಂತ್ರೊ್ಯೕತ್ತರ ದಿನಗಳಲ್ಲಿ ತಮಗೆ ಸಾಕಷ್ಟು ಅಧಿಕಾರ ಸಿಕ್ಕಿದ್ದೇ ಆದರೆ ತಾವು ಮಾಡುವ ಮೊದಲ ಎರಡು ಕಾನೂನುಗಳು ಮತಾಂತರ ಹಾಗೂ ಗೋಹತ್ಯೆ ವಿರುದ್ಧ ಎಂದಿದ್ದರು. ಈ ಮತಾಂತರ ಪ್ಲೇಗ್ ಬೇನೆಯಂತೆ ಒಂದು ಪಿಡುಗು. ಪ್ರಪಂಚದ ಎಷ್ಟೋ ಉಠಿಜ್ಞಜ್ಚಿ ನಾಗರಿಕತೆಗಳನ್ನು, ದೇಶಿ ಸಂಸ್ಕೃತಿಗಳನ್ನು, ಧರ್ಮಗಳನ್ನು ಇದು ನೆಲಸಮ ಮಾಡಿದೆ. ವೈವಿಧ್ಯತೆಯ ಸೊಬಗನ್ನು, ಸೌಂದರ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಅದರ ಗುರಿಯೇ ಏಕರೂಪತೆ. ಆದರೆ ಇದು ಪ್ರಕೃತಿಯ ವಿರುದ್ಧ. ಅದು ಅನುಮೋದಿಸುವುದು ವೈವಿಧ್ಯತೆಯಲ್ಲಿ ಏಕತೆಯನ್ನು. ಇದೇ ಭಾರತೀಯ ಸಂಸ್ಕೃತಿಯ ಜೀವಾಳ. ಈ ಏಕರೂಪತೆಯ ಪರಿಣಾಮವೇ ಪಶ್ಚಿಮಾರ್ಧಗೋಳದ ಸ್ಕಾ್ಯಂಡಿನೇವಿಯಾದಿಂದ ಅಲಾಸ್ಕಾದವರೆಗೆ ಎಲ್ಲೆಲ್ಲೂ ನೀವು ನೋಡುವುದು ಒಂದೇ ರೀತಿಯ ರಸ್ತೆ, ಒಂದೇ ಜನಾಂಗ, ಒಂದೇ ಧರ್ಮ, ಒಂದೇ ಸಂಗೀತ, ನೃತ್ಯ, ಒಂದೇ ರೀತಿಯ ಊಟ ಬಟ್ಟೆ ಇತ್ಯಾದಿ. ಇದೇ ಅಲ್ಲಿಯ ಜನರ ಖಿನ್ನತೆಗೆ ಬಹು ದೊಡ್ಡ ಕಾರಣ. ಜೊತೆಗೆ ರಕ್ತದಲ್ಲೇ ಇರುವ ವಿಸ್ತರಣಾ ಪೃವೃತ್ತಿ. ಇವೆರಡರ ಬೇರೆ ಬೇರೆ ಪ್ರಕಾರಗಳೇ ಅವರ ಸಂಸ್ಕೃತಿ. ಪ್ರಪಂಚದಲ್ಲೆಲ್ಲಾ ನಮ್ಮದೇ ನಡೆಯಬೇಕು, ನಮ್ಮವರೇ ಇರಬೇಕು, ನಮ್ಮ ಧರ್ಮವೇ ಇರಬೇಕು ಎನ್ನುವ ಉದ್ಧಟತನ ಇದು. ಜಗತ್ತಿನ ಬೇರೆ ಬೇರೆ ಭಾಗಗಳನ್ನು ಕಂಡುಹಿಡಿಯಬೇಕು ಎಂದು ಹೊರಟ ಕೋಲಂಬಸ್ಸನಿಗೆ ನಿನ್ನ ಪ್ರಯಾಣದ ಉದ್ದೇಶ್ಯವೇನು ಎಂದು ಅವನ ಕಿರಿಯ ಅಧಿಕಾರಿ ಕೇಳಿದಾಗ ಅವನು ಉತ್ತರಿಸಿದ್ದು souls for our savior and territories for our king / queen - ನಮ್ಮ ಪ್ರವಾದಿಗೆ ಹೊಸ ಹೊಸ ಅನುಯಾಯಿಗಳನ್ನು ಮತ್ತು ನಮ್ಮ ರಾಜನಿಗೆ ಹೊಸ ಹೊಸ ಭೂಭಾಗಗಳನ್ನು ಕೊಡಿಸುವುದು - ಎಂದು.

ಹೌದು! ಇಲ್ಲಿಯವರೆಗೆ ಇತಿಹಾಸ ತೋರಿಸಿಕೊಟ್ಟಂತೆ ಅವರ ಪ್ರವಾದಿಗೆ ಅನುಯಾಯಿಗಳನ್ನು ಒದಗಿಸುವುದು ಎಂದರೆ ಅವರ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಂತೆಯೇ. ಸಾಮ್ರಾಜ್ಯ ವಿಸ್ತರಣೆಯನ್ನೇ ತಮ್ಮ ರಕ್ತದಲ್ಲಿ ತುಂಬಿಕೊಂಡಿರುವ ಅವರಿಗೆ ಕತ್ತಿ, ಕೋವಿ ಹಿಡಿದು ಅದನ್ನು ಸಾಧಿಸುವ ಕಾಲ ಹೋಯಿತು ಎಂದು ಚೆನ್ನಾಗಿಯೇ ಅರಿವಿಗೆ ಬಂದಿದೆ. ಈಗ ಅದನ್ನು ಸಾಧಿಸಬೇಕಾದ್ದು ತಮ್ಮ ಧರ್ವನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದರ ಮೂಲಕ. ಅದಕ್ಕೆ ಬೇಕಾದ ಮಹಾನ್ ಅಸ್ತ್ರವೇ ಮತಾಂತರ. ಅದರ ಮೊದಲ ಹಂತವೇ ಪರಮತನಿಂದನೆ. ಅನ್ಯಮತೀಯರಿಗೆ ತಮ್ಮ ಧರ್ಮದಲ್ಲಿರುವ ಶ್ರದ್ಧೆಯನ್ನು ನೂರು ಬೇರೆ ಬೇರೆ ಮಾರ್ಗಗಳಲ್ಲಿ ಕಡಿಮೆಯಾಗಿಸುತ್ತಾ, ಉದಾಸೀನತೆಯನ್ನು ಬೆಳೆಸುತ್ತಾ, ಅದರಲ್ಲಿರುವ ಸಣ್ಣಪುಟ್ಟ ದೋಷಗಳನ್ನೂ ಹಿಗ್ಗಿಸಿ, ಹಿಗ್ಗಿಸಿ ತೋರಿಸುತ್ತಾ ಜೊತೆಜೊತೆಗೇ ಪ್ರಪಂಚವನ್ನೆಲ್ಲಾ ದರೋಡೆ ಮಾಡಿ ಕಟ್ಡಿಕೊಂಡ ತಮ್ಮ ದೇಶಗಳ ವೈಭವಗಳನ್ನು ಎತ್ತಿ ಎತ್ತಿ ತೋರಿಸುತ್ತಾ ಇಂಗ್ಲಿಷ್ ಭಾಷೆಯ ವ್ಯಾಮೋಹವನ್ನು ಹತ್ತಾರು ಉಪಾಯಗಳಿಂದ ಹಿಗ್ಗಿಸುತ್ತಾ ತಮ್ಮೆಡೆಗೆ ಅವರನ್ನು ಸೆಳೆಯಲೆತ್ನಿಸುವುದು. ಜನರಿಗೆ ಅವರಾಡುವ ಭಾಷೆಯಲ್ಲೇ ಶಿಕ್ಷಣ ಕೊಡಿ ಎಂಬ ವಿವೇಕಾನಂದರ ಕಿವಿಮಾತು ಮಹಿಷಚರ್ಮಗಳ ಗಮನಕ್ಕೇ ಬಾರದೆ ಹೋಯಿತಲ್ಲ! ಇಂಥದ್ದು ಅದೆಷ್ಟೋ!! ಇವಕ್ಕೆಲ್ಲಾ ಏನು ಪರಿಹಾರ? ನಾನು ಪ್ರಾರಂಭದಲ್ಲೇ ಹೇಳಿದ್ದೇನೆ- ನಾಯಕರನ್ನು ಚುನಾಯಿಸುವ ಬಹುಸಂಖ್ಯಾತರ ಸಮಾಜವೇ, ಏಳಿ! ಎಚ್ಚರಗೊಳ್ಳಿ! ಮಹಾತ್ಮನಿಂದ ಮಾರ್ಗದರ್ಶನ ಪಡೆದುಕೊಳ್ಳಿ! ಎಂಬ ಕಠೋಪನಿಷತ್ತಿನ ವಾಣಿಯನ್ನು, ಇದನ್ನು ಎಲ್ಲೆಡೆ ಮೊಳಗಿಸಿದ ವೀರ ವಿವೇಕಾನಂದರ ಚಿಂತನೆಗಳನ್ನು ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು. ಬಹು ಹಿಂದೆಯೇ ಪಾಶ್ಚಾತ್ಯ ಚಿಂತಕನೊಬ್ಬ ಭಾರತೀಯರನ್ನು ಎಚ್ಚರಿಸಿದ್ದು ಹೀಗೆ. ನೀವು ವಿವೇಕಾನಂದರನ್ನು ನಿರ್ಲಕ್ಷಿಸಿದರೆ ಆಪತ್ಕಾಲಕ್ಕೆ ಆಹ್ವಾನ ಕೊಟ್ಟಂತೆ ಎಂದು. ಇನ್ನಾದರೂ ನಾವು ಎಚ್ಚರಗೊಳ್ಳುವೆವೇ?

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)